ಬಾಳೆಹೊನ್ನೂರು: ಬಿ. ಕಣಬೂರು ಗ್ರಾಪಂ ವ್ಯಾಪ್ತಿಯ ಅಕ್ಷರನಗರದ ಗ್ರಾಮದ ಅಂಚೆ ರಸ್ತೆಯ ಸ.ನಂ.136ರಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರೊಬ್ಬರು ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಅತಿಕ್ರಮಿಸಿ ಆ ಜಾಗದಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಡಿದಿದ್ದಾರೆ ಎಂಬ ಘಟನೆ ಹಿನ್ನೆಲೆಯಲ್ಲಿ ಎನ್.ಆರ್.ಪುರ ತಹಶೀಲ್ದಾರ್ ಸಿ.ಜಿ. ಗೀತಾ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಸಿ.ಜಿ. ಗೀತಾ, ಬಿ. ಕಣಬೂರು ಗ್ರಾಮದ ಸ.ನಂ.136ರಲ್ಲಿ ಅಕ್ರಮವಾಗಿ ಮರ ಕಡಿದು ಅನಧಿಕೃತ ಸಾಗುವಳಿ ಮಾಡುತ್ತಿದ್ದಾರೆ ಎಂಬ ದೂರು ಬುಧವಾರ ಬಂದಿದ್ದು, ತಕ್ಷಣವೇ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅನ ಧಿಕೃತವಾಗಿ ಸಾಗುವಳಿ ಮಾಡುವುದನ್ನು ಸ್ಥಗಿತಗೊಳಿಸಿ ಜಾಗಕ್ಕೆ ಟ್ರೆಂಚ್ ಹೊಡೆದು ಯಾರೂ ಅತಿಕ್ರಮ ಪ್ರವೇಶ ಮಾಡದಂತೆ ತಡೆಯಲಾಗಿದೆ. ಒತ್ತುವರಿ ಮಾಡಿರುವ ವ್ಯಕ್ತಿ ನಮೂನೆ 57ರಲ್ಲಿ ಅಕ್ರಮ ಸಕ್ರಮದಲ್ಲಿ ಅರ್ಜಿ ಹಾಕಿದ್ದೇವೆ ಎಂದು ಹೇಳಿದ್ದು, ಅದನ್ನು ನಾವು ಪರಿಶೀಲನೆ ನಡೆಸುತ್ತೇವೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಹೊಸದಾಗಿ ಗಿಡ ನೆಡುತ್ತಿರುವುದು ಕಂಡುಬಂದಿದೆ. ಈ ಪ್ರದೇಶದಲ್ಲಿ 19 ಎಕರೆಯಷ್ಟು ಅರಣ್ಯ ಜಾಗವೂ ಇದ್ದು ಈ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಲಾಗುವುದು ಎಂದರು.
ನಾಡಕಚೇರಿ ಉಪತಹಶೀಲ್ದಾರ್ ನಾಗೇಂದ್ರ, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಿಗ ರಜತ್‌ಮತ್ತಿತರರು ಇದ್ದರು. ಒತ್ತುವರಿ ಹಾಗೂ ಮರ ಕಡಿತ ಪ್ರಕರಣಕ್ಕೆ ಸಂಬಂಧಿ ಸಿದಂತೆ ತಹಶೀಲ್ದಾರ್ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರಲಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.
ಕಂದಾಯ ಭೂಮಿಯಲ್ಲಿನ ಸಾವಿರಾರು ರೂ.ಬೆಲೆ ಬಾಳುವ ಹತ್ತಾರು ಮರಗಳನ್ನು ಅಕ್ರಮವಾಗಿ ಕಡಿದಿದ್ದರೂ ಸಹ ಕಣ್ಣೊರೆಸುವ ತಂತ್ರಕ್ಕಾಗಿ ಮಾತ್ರ ಸಣ್ಣ ಕೇಸ್ ದಾಖಲಿಸಿ ಬೆಲೆ ಬಾಳುವ ಮರಗಳನ್ನು ಕಡಿತಲೆ ಹಾಗೂ ಬೇಲಿಗೆ ಹಾಕಿರುವ ಅರಣ್ಯದ ಮರಗಳ ಕಡಿತ ಮಾಡಿರುವ ಬಗ್ಗೆ ಯಾವುದೇ ಕ್ರಮ
ಕೈಗೊಂಡಿಲ್ಲ. ತಹಶೀಲ್ದಾರ್ ಭೇಟಿ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದು ಈ ಬಗ್ಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಬೇಕಿತ್ತು. ಸಾವಿರಾರು ರೂ. ಬೆಲೆ ಬಾಳುವ ಮರಗಳನ್ನು ಬೇಲಿ ಕಂಬವಾಗಿ ಪರಿವರ್ತಿಸಿದ್ದು ಈ ಬಗ್ಗೆ ಕಣ್ಣೆದುರೇ ಸಾಕ್ಷಿ ಇದ್ದರೂ ಸಹ ಅದನ್ನುಇನ್ನೂ ವಶಪಡಿಸಿಕೊಂಡಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳೂ ಸಹ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಗ್ರಾಪಂ ಸದಸ್ಯ ಯು. ಅಶ್ರಫ್ ದೂರಿದ್ದಾರೆ.