Advertisement

ಅರಣ್ಯ ಕೃಷಿಯಿಂದ ಆದಾಯ

06:00 AM Aug 06, 2018 | |

ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ 67 ವರ್ಷ ವಯಸ್ಸಿನ ವೃದ್ಧೆ ಲಕ್ಷ್ಮವ್ವ ರಂಗಪ್ಪ ಬೂದಿಹಾಳ, ತಮ್ಮ ನಾಲ್ಕು ಎಕರೆ ಗುಡ್ಡದಲ್ಲಿ ಕೃಷಿ ಅರಣ್ಯದಲ್ಲಿ ತೊಡಗಿದ್ದಾರೆ. ಕೃಷಿ ಭೂಮಿಯಲ್ಲಿಯೂ ಅರಣ್ಯ ಬೆಳೆಸಿ ಆದಾಯ ಹೆಚ್ಚಿಸಿಕೊಳ್ಳಲು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆ ಸಸಿಗಳನ್ನು ವಿತರಿಸುತ್ತಿದೆ. ಈ ಯೋಜನೆಯಡಿ ಲಕ್ಷ್ಮವ್ವ ಒಂದು ಸಾವಿರ ಕರಿಬೇವು, ಒಂದು ನೂರು ದೊಡ್ಡ ಬೇವು ಬೆಳೆಸಿದ್ದಾರೆ. ಸ್ವಂತ ಖರ್ಚಿನಲ್ಲಿ 1010 ತೇಗು, 170 ಮಾವು, 20 ಪೇರಲೆ, ಲಿಂಬು ಸಸಿ ಹಚ್ಚಿದ್ದು, ಪ್ರಾಯೋಗಿಕವಾಗಿ ಎರಡು ಶ್ರೀಗಂಧದ ಸಸಿ ನೆಟ್ಟಿದ್ದಾರೆ. ಗಿಡಗಳ ಮಧ್ಯೆ ಅಂತರ ಬೆಳೆಗಳಾಗಿ ಔಡಲ, ನವಣಿ ಬೆಳೆಯುತ್ತಿದ್ದು, ಕಳೆದ ವರ್ಷ 12 ಚೀಲ ನವಣಿ ಇಳುವರಿ ಪಡೆದಿದ್ದಾರೆ.

Advertisement

ವೃದ್ಧೆಯ ಕೃಷಿ ಆಸಕ್ತಿ
1999ರಲ್ಲಿ ಲಕ್ಷ್ಮವ್ವ ಅವರ ಪತಿ ರಂಗಪ್ಪ ನಿಧನರಾದರು.  ಲಕ್ಷ್ಮವ್ವ ಆಗ ಕುಟುಂಬದ ಜವಾಬ್ದಾರಿ ಹೊತ್ತ ಲಕ್ಷ್ಮವ್ವ ಮಗಳಿಗೆ ಶಿಕ್ಷಣ ಕೊಡಿಸಿ, ಮದುವೆ ಮಾಡಿದರು. ನಂತರ ಕೃಷಿಯತ್ತ ಮುಖ ಮಾಡಿದರು. ಪಡ (ಉಳುಮೆ ಮಾಡದ) ಬಿಟ್ಟಿದ್ದ ಜಮೀನಿನಲ್ಲಿ 2014ರಲ್ಲಿ ಉಳುಮೆಗೆ ಮುಂದಾದರು. ಸುಮಾರು 18 ವರ್ಷ ಪಡ ಬಿಟ್ಟಿದ್ದ ಜಮೀನಿನಲ್ಲಿ ಹೇಗೆ ಕೃಷಿ ಮಾಡುತ್ತಿಯಾ? ನಿನಗೆ ಇನ್ನಾದರೂ ಯಾರು ದಿಕ್ಕು? ಸುಮ್ನೆ ಅರಾಮವಾಗಿ ಇದ್ದು ಬಿಡು ಎಂದು ಹೇಳಿದವರೇ ಹೆಚ್ಚು. ಆದರೂ ಕೃಷಿ ಆಸಕ್ತಿ ಲಕ್ಷ್ಮವ್ವನನ್ನು ಮನೆಯಲ್ಲಿರಲು ಬಿಡಲಿಲ್ಲ. ಪತಿ ದುಡಿದ ಜಮೀನಿನಲ್ಲಿ ಕೃಷಿ ಕಾಯಕಕ್ಕೆ ಮುಂದಾದರು. ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಜಮೀನನ್ನು ಸಮತಟ್ಟು ಮಾಡಿಸಿದರು. ಜಮೀನಿಗೆ ತಂತಿ ಬೇಲಿ, ಬೋರ್‌ವೆಲ್‌ ಹಾಕಿಸಿದರು. 

ಹರಿಯುವ ನೀರು ನಿಲ್ಲಿಸು-ಇಂಗಿಸು
ಗುಡ್ಡದ ಜಮೀನಿನಲ್ಲಿ ಮಳೆಗಾಲದಲ್ಲಿ ಮಣ್ಣು ಕೊರತೆ ಆಗದಂತೆ ನೋಡಿಕೊಳ್ಳಲು ಮತ್ತು ಬೆಳೆಗಳ ರಕ್ಷಣೆಗಾಗಿ ಜಮೀನು ಸುತ್ತ ಕಾಲುವೆ ಮಾಡಿದ್ದಾರೆ. ಮೆಟ್ಟಿಲು ಆಕಾರದಲ್ಲಿ ಗುಡ್ಡವನ್ನು ಸಮತಟ್ಟು ಮಾಡಿವುದರಿಂದ ಮಳೆಗಾಲದಲ್ಲಿ ಹರಿಯುವ ನೀರನ್ನು ನಿಲ್ಲುವಂತೆ ಮಾಡಿದ್ದಾರೆ. ನಿಂತ ನೀರು ಜಮೀನಿನ ಸುತ್ತಲಿನ ಕಾಲುವೆಯಲ್ಲಿ ಇಂಗುತ್ತದೆ. ಇದರಿಂದ ಬೆಳೆ ಹಸಿರಿನಿಂದ ಕಂಗೊಳಿಸುತ್ತಿ¤ದೆ. ಬೇಸಿಗೆಯಲ್ಲಿ ಮಾತ್ರ ಗಿಡಗಳಿಗೆ ಬೋರ್‌ವೆಲ್‌ ನೀರು ಬಳಸುವ ಲಕ್ಷ್ಮವ್ವನ ಜಾಣತನ ಮೆಚ್ಚಲೇಬೇಕು. ಸದ್ಯ ಗಂಗಾ ಕಲ್ಯಾಣ ಯೋಜನೆಯಡಿ ಮತ್ತೂಂದು ಬೋರ್‌ವೆಲ್‌ ಹಾಕಿಸಿರುವ ಲಕ್ಷ್ಮವ್ವ, ಶ್ರೀಗಂಧದ ಸಸಿ ನೆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈಚೆಗೆ ಧಾರವಾಡದಲ್ಲಿ ನಡೆದ ವಿಭಾಗೀಯ ಕೃಷಿ ಅರಣ್ಯ ಕಾರ್ಯಾಗಾರದಲ್ಲಿ ರಾಜ್ಯ ಅರಣ್ಯ ಸಚಿವ ಆರ್‌. ಶಂಕರ, ವೃದ್ಧೆ ಲಕ್ಷ್ಮವ್ವ ಬೂದಿಹಾಳ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ.

ಸವಾಲಿಗೆ ಮರು ಸವಾಲು!
ಲಕ್ಷ್ಮವ್ವ ತನ್ನ ಗುಡ್ಡದ ಜಮೀನನ್ನು ಬುಲ್ಡೋಜರ್‌ ಮೂಲಕ ಸಮತಟ್ಟು ಮಾಡಿಸುತ್ತಿದ್ದಳು. ಜಮೀನಿನಲ್ಲಿದ್ದ ಕಲ್ಲು ಮತ್ತು ಗರ್ಸು ಮಣ್ಣು ನೋಡಿದ ಚಾಲಕ, ಇಂಥ ಭೂಮಿಯಲ್ಲಿ ಏನು ಬೆಳೆಯಲು ಸಾಧ್ಯ? ಸುಮ್ನೆ ಹಣ ಖರ್ಚು. ಅಷ್ಟಕ್ಕೂ ನಿನ್ನಂತಹ ವೃದ್ಧೆಯಿಂದ ಏನು ಬೆಳೆಯಬಹುದು ಎಂದು ಸವಾಲು ಹಾಕಿದ. ಆಗ ಲಕ್ಷ್ಮವ್ವ, ನಾಲ್ಕು ವರ್ಷದ ನಂತರ ಹೊಲಕ್ಕೆ ಬಾ. ಆಗ ಈ ಪ್ರಶ್ನೆ ಕೇಳು ಎಂದು ಮರು ಸವಾಲು ಹಾಕಿದಳು. ಅದರಂತೆ ಇಡೀ ಗ್ರಾಮಸ್ಥರು ಆಶ್ಚರ್ಯ ಪಡುವಂತೆ ಕೃಷಿ ಅರಣ್ಯದಲ್ಲಿ ತೊಡಗಿರುವ ಲಕ್ಷ್ಮವ್ವನಿಗೆ ಸದ್ಯಕ್ಕೆ ಆದಾಯ ಇಲ್ಲದಿದ್ದರೂ ಇನ್ನ 10 ವರ್ಷಕ್ಕೆ ಲಕ್ಷಾಂತರ ರೂ. ಲಾಭ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

– ಶರಣು ಹುಬ್ಬಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next