ಬೆಳಗಾವಿ: ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸರಕಾರದ ಯೋಜನೆಯಂತೆ ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ ಧಾಮಣೆ ಗ್ರಾಮದಲ್ಲಿ ಶನಿವಾರ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನ ಗೊಳಿಸಲಾಗಿದೆ ಎಂದರು. ಕಂದಾಯ ಇಲಾಖೆಯ ಅತ್ಯಂತ ಮಹತ್ವದ ಯೋಜನೆ ಯೋಜನೆ ಇದಾಗಿದ್ದು, ರೈತರಿಗೆ ಹಾಗೂ ಸಾರ್ವಜನಿಕರಿಗೆ ತಮ್ಮ ದಾಖಲೆಗಳನ್ನು ಪಡೆಯಲು ಯಾವುದೇ ರೀತಿಯ ತೊಂದರೆ ಯಾಗಬಾರದು. ಕಂದಾಯ ಇಲಾಖೆಯಿಂದಲೇ ರೈತರ ಮನೆ ಮನೆಗಳಿಗೆ ಪಹಣಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಕಂದಾಯ ದಾಖಲೆಗಳನ್ನು ತಲುಪಿಸಲಾಗುವುದು ಎಂದರು.
ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 6,91,673 ರೈತರ ಕುಟುಂಬಗಳಿಗೆ 11,87,264 ಜಮೀನಿನ ಪಹಣಿ ಪತ್ರಿಕೆಗಳನ್ನು ಹಾಗೂ 13,67,563 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಹಾಗೂ 94,485 ಅಟ್ಲಾಸಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ಕೊಡಲಾಗುವುದು ಎಂದು ಹೇಳಿದರು.
ದಾಖಲೆಗಳು ಮುದ್ರಣವಾಗದೇ ರೈತರಿಗೆ ದಾಖಲೆಗಳನ್ನು ತಲುಪಿಸಲು ಸಾಧ್ಯವಾಗದೇ ಇದ್ದಲ್ಲಿ, ಅಂತಹ ರೈತರಿಗೆ ಮಾರ್ಚ್ 21ರಿಂದ ಮಾರ್ಚ್ 26ರ ವರೆಗೆ ಒಂದು ವಾರ ನಾಡಕಚೇರಿಯಲ್ಲಿ ಉಚಿತವಾಗಿ ದಾಖಲೆಗಳನ್ನು ವಿತರಿಸಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಬೆಳಗಾವಿ ದಕ್ಷಿಣ ಭಾಗದ ಶಾಸಕ ಅಭಯ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದ ಮನೆಗಳ ಬಾಗಿಲಿಗೆ ಪಹಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸೇರಿದಂತೆ ಅವಶ್ಯ ಕಂದಾಯ ದಾಖಲೆಗಳನ್ನು ತಲುಪಿಸುವ ಜನಪರ ಮಹತ್ವದ ಯೋಜನೆ ಇದಾಗಿದೆ. ಸೇವಾ ಕೇಂದ್ರಗಳು, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ತಹಶೀಲ್ದಾರ್ ಸೇರಿದಂತೆ ಎಲ್ಲಿಯೂ ಸಾರ್ವಜನಿಕರು ದಾಖಲೆಗಳನ್ನು ಪಡೆಯಲು ಅಲೆದಾಡುವ ಅವಶ್ಯಕತೆ ಇಲ್ಲ. ಬದಲಿಗೆ ಕಂದಾಯ ಇಲಾಖೆಯೇ ಈ ಯೋಜನೆ ಮೂಲಕ ರೈತರ ಮನೆಗೆ ದಾಖಲೆಗಳನ್ನು ನೀಡಲಿದೆ. ಇದಕ್ಕಾಗಿ ರೈತರು ಮತ್ತು ಸಾರ್ವಜನಿಕರು ಯಾವುದೇ ಹಣ ಪಾವತಿಸುವ ಅವಶ್ಯಕತೆ ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ತಹಶೀಲ್ದಾರ್ ಆರ್. ಕೆ. ಕುಲಕರ್ಣಿ ಉಪಸ್ಥಿತರಿದ್ದರು.