Advertisement

ಕಂದಾಯ ಇಲಾಖೆ ಎಡವಟ್ಟು: ಕಿಡಿ

07:22 AM Jul 25, 2020 | Suhan S |

ಕನಕಪುರ: ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಕೋರ್ಟು ಕಚೇರಿಗೆ ಅಲೆಯುವಂತೆ ಆಗಿದೆ ಎಂದು ಮರುಳಗೆರೆ ಗ್ರಾಮದ ರೈತ ರಾಮಯ್ಯ ಆರೋಪಿಸಿದ್ದಾರೆ.

Advertisement

ತಾಲೂಕಿನ ಹಾರೋಹಳ್ಳಿ ಹೋಬಳಿ ಮರುಳಗೆರೆ ಗ್ರಾಮದ ರಾಮಯ್ಯ ಅವರ ಸರ್ವೆ ನಂ.86/3ಎ ಜಮೀನಿನ ಸರ್ವೆಮಾಡಿ ಸ್ಕೆಚ್‌ ನೀಡುವಂತೆ ಕಳೆದ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಅದರ ಶುಲ್ಕ ಪಾವತಿ ಮಾಡಿದ್ದರು. ಆದರೆ,ನಿಮ್ಮ ಜಮೀನಿನ ಮೇಲೆ ಅಧಿಕ ವ್ಯಾಜ್ಯ ಪ್ರಕರಣಗಳಿವೆ. ಈ ಪ್ರಕರಣ ಇತ್ಯರ್ಥವಾಗದೆ ಸರ್ವೆ ಸಾಧ್ಯವಿಲ್ಲ ಎಂದಿದ್ದಾರೆ. ನಮ್ಮ ಜಮೀನಿನ ಮೆಲೆ ಯಾವುದೇ ವ್ಯಾಜ್ಯ ಪ್ರಕರಣಗಳಿಲ್ಲ ಎಂದು ಮಾಹಿತಿ ನೀಡಿದ ರಾಮಯ್ಯನಿಗೆ ಎಸಿ, ಸಿವಿಲ್‌ ನ್ಯಾಯಾಲಯದಿಂದ ಯಾವುದೇ ವ್ಯಾಜ್ಯ ಪ್ರಕರಣಗಳಿಲ್ಲ ಎಂಬ ದೃಢೀಕರಣ ಪತ್ರ ತನ್ನಿ ಎಂದಿದ್ದಾರೆ. ನಮ್ಮ ಜಮೀನಿನ ಮೇಲೆ ಯಾವುದೇ ವ್ಯಾಜ್ಯ ಪ್ರಕರಣ ಇರಲಿಲ್ಲ. ಅಲ್ಲದೆ ಈ ಪ್ರಕರಣ ನಮ್ಮ ಹೋಬಳಿ ವ್ಯಾಪ್ತಿಗೂ ಬರುವುದಿಲ್ಲ. ಅಧಿಕಾರಿಗಳು ತಾವು ಮಾಡಿರುವ ಎಡವಟ್ಟಿನಿಂದ ಸಾತನೂರು ಹೋಬಳಿ ಕೆಮ್ಮಾಳೆ ಮತ್ತು ಮರಳವಾಡಿ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ಜಮೀನಿನ ವ್ಯಾಜ್ಯದ ಸಕ್ರಿಯವಲ್ಲದ ಇತ್ಯರ್ಥವಾಗಿರುವ ಪ್ರಕರಣಗಳನ್ನು ನಮ್ಮ ಜಮೀನಿನ ಸರ್ವೆ ನಂ.ಗಳ ಮೇಲಿದೆ ಎಂದು ದಾಖಲು ಮಾಡಿದ್ದಾರೆ. ಅಧಿಕಾರಿಗಳು ಮಾಡಿರುವ ಲೋಪದಿಂದ ಕಳೆದ 6ತಿಂಗಳಿಂದ ಕೋರ್ಟು ಕಚೇರಿಗೆ ಅಲೆದಾಡುವಂತೆ ಮಾಡಿದ್ದಾರೆ. ಎಸಿ ಮತ್ತು ಸೀವಿಲ್‌ ಕೋರ್ಟಿಗೆ ಅಲೆದಾಡಿ ನಮ್ಮ ಜಮೀನಿನ ಮೇಲೆ ಯಾವುದೇ ವ್ಯಾಜ್ಯ ಪ್ರಕರಣಗಳಿಲ್ಲ ಎಂದು ದೃಢೀಕರಿಸಿರುವ ದಾಖಲೆ ಸಲ್ಲಿಸಿದರೂ ಜಮೀನಿನ ಸರ್ವೇ ಮಾಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.

ಈ ಬಗ್ಗೆ ತಹಶೀಲ್ದಾರ್‌ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಮಗನ ಮದುವೆಗೆಂದು ಸಾಲ ಮಾಡಿಕೊಂಡಿದ್ದು ಬಡ್ಡಿ ಕಟ್ಟಲಾಗದೆ ಸಂಕಷ್ಟದಲ್ಲಿದ್ದೇವೆ. ಹೀಗಾಗಿ ಜಮೀನು ಮಾರಿ ಸಾಲ ತೀರಿಸೋಣ ಎಂದು ಈಗಾಗಲೇ ಮುಂಗಡ ಹಣ ಪಡೆದಿದ್ದೆ. ಕರಾರು ಪತ್ರದ ಅವಧಿ ಮುಗಿದಿದ್ದು ಮಾಲಿಕರು ಒತ್ತಡ ಹೇರುತ್ತಿದ್ದಾರೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next