ಬೆಂಗಳೂರು: ದಾಖಲೆಯಲ್ಲಿ ಇಲ್ಲದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಸಂಬಂಧ ಕಂದಾಯ ಇಲಾಖೆ ನಿಯಮಾವಳಿ ರೂಪಿಸಿದೆ.
ಕನಿಷ್ಠ ಹತ್ತು ಮನೆಗಳಿರುವ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡೇರಹಳ್ಳಿ, ಕುರುಬರಹಟ್ಟಿ,ನಾಯಕರಹಟ್ಟಿ, ಮಜರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ ಕ್ಯಾಂಪ್, ಕಾಲೋನಿಗಳ ಸಮೀಕ್ಷೆ ನಡೆಸಿ ಗ್ರಾಮವಾರು ಸರ್ವೆ ಸಂಖ್ಯೆ ಸಮೇತ ವರದಿ ಸಲ್ಲಿಸುವಂತೆ ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ.
ಈ ಪ್ರದೇಶಗಳಲ್ಲಿ ಸರ್ಕಾರಿ ಅಥವಾ ಖಾಸಗಿ ಮಾಲೀಕತ್ವದ ಜಮೀನಿನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ 4 ಸಾವಿರ ಚದರಡಿ ವಿಸ್ತೀರ್ಣದ ಮಿತಿಗೊಳಪಟ್ಟು ಸಕ್ರಮಗೊಳಿಸಿ ವಾಸದ ಹಕ್ಕು ಕೊಡುವುದೂ ನಿಯಮಾವಳಿಗಳಲ್ಲಿ ಸೇರಿದೆ. ಇದಕ್ಕಾಗಿ ಸರ್ಕಾರ ನಿಗಪಡಿಸಿರುವ ಶುಲ್ಕ ಪಾವತಿಸಬೇಕಾಗುತ್ತದೆ. ಒಂದೊಮ್ಮೆ ಖಾಸಗಿ ಮಾಲೀಕತ್ವದ ಜಮೀನಿನಲ್ಲಿ ವಸತಿಹೀನರು ವಾಸಿಸುತ್ತಿದ್ದರೆ ಜಮೀನಿನ ಮೂಲ ಮಾಲೀಕರು ಪರಿಹಾರಕ್ಕಾಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬಹುದಾಗಿದೆ.
ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜರೆ ಗ್ರಾಮ ಸೇರಿದಂತೆ ದಾಖಲೆಗಳಲ್ಲಿ ಇಲ್ಲದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಸಂಬಂಧ ವಿಧೇಯಕ ಮಂಡಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅದಕ್ಕೆ ರಾಜ್ಯಪಾಲರ ಅನುಮತಿಯೂ ದೊರಕಿತ್ತು. ಇದೀಗ ಕರ್ನಾಟಕ ಭೂ ಸುಧಾರಣಾ (ತಿದ್ದುಪತಿ) ನಿಯಮಾವಳಿ-2017 ರಚಿಸಿ ಅಂತಹ ಪ್ರದೇಶಗಳ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಈ ಕುರಿತು ಅಧಿಸೂಚನೆ ಸಹ ಹೊರಡಿಸಲಾಗಿದೆ. ದಶಕಗಳ ಕಾಲ ಮೂಲಸೌಕರ್ಯ ಹಾಗೂ ವಾಸಸ್ಥಳದ ಹಕ್ಕುಪತ್ರ ಇಲ್ಲದೆ ಜೀವನ ನಡೆಸುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಸರ್ಕಾರದ ಈ ನಿರ್ಧಾರದಿಂದ ವಸತಿ ಹಕ್ಕು ದೊರೆತಂತಾಗುತ್ತದೆ.