ತಿರುವನಂತಪುರ : ಮಂಡಲ ಪೂಜೆ ನಡೆಯುತ್ತಿರುವ ಹಿನ್ನೆಲೆ ಎರಡು ತಿಂಗಳ ಕಾಲ ಶಬರಿಮಲೆ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಲಕ್ಷಾಂತರ ಜನರು ದೇವರ ದರ್ಶನ ಪಡೆದಿದ್ದಾರೆ ಎಂದು ದೇವಾಲಯ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
104 ಕೋಟಿ ಕಾಣಿಕೆ ಸಂಗ್ರಹ:
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಆದಾಯ ಪ್ರಮಾಣ ದುಪ್ಪಟ್ಟುಗೊಂಡಿದ್ದು, ಕಳೆದ ವರ್ಷ ಇದೇ ಅವಧಿಗೆ ದೇವಾಲಯ ಕೇವಲ 64 ಕೋಟಿ ಕಾಣಿಕೆ ಮೊತ್ತವನ್ನು ಸಂಗ್ರಹಿಸಿತ್ತು. ಆದರೆ, ಈ ಬಾರಿ ಕಾಣಿಕೆ ಮೊತ್ತ 28ದಿನಗಳಲ್ಲಿಯೇ ಅಧಿಕ ಮಟ್ಟದಲ್ಲಿ ಸಂಗ್ರವಾಗಿದ್ದು, ಈವರೆಗೆ 104 ಕೋಟಿ ಕಾಣಿಕೆಯನ್ನು ದೇವಾಲಯ ಸಂಗ್ರಹಿಸಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.
5 ಕೋಟಿ ನಾಣ್ಯ
ಮಕರವಿಲುಕ್ಕು(ಮಕರಜ್ಯೋತಿ) ಪೂಜೆಗಾಗಿ ನ.17ರಂದು ಮಂಡಲ ಪೂಜಾ ವಿಧಿ ಕಾರ್ಯಗಳಿಗಾಗಿ ದೇವಾಲಯವನ್ನು ತೆರೆಯಲಾಗಿತ್ತು. ಈ ಹಿನ್ನಲೆ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಸಲ್ಲಿಸಿದ ಕಾಣಿಕೆ ಮೊತ್ತದಲ್ಲಿ ಸುಮಾರು 5 ಕೋಟಿ ನಾಣ್ಯಗಳು ಸಂಗ್ರಹವಾಗಿದ್ದು, ನ್ಯಾಯಾಲಯದ ಅನುಮತಿ ಬಳಿಕ ನಾಣ್ಯಗಳ ತೂಕದ ಮೌಲ್ಯವನ್ನು ಲೆಕ್ಕ ಹಾಕಲಾಗುವುದು ಎಂದು ದೇವಸ್ವಂ ಬೋರ್ಡ್ ತಿಳಿಸಿದೆ. ಅಲ್ಲದೆ ಅನ್ನದಾನ ರೂಪದಲ್ಲಿ ಕೂಡ ಭಕ್ತರು ದೇವಾಲಯಕ್ಕೆ ದೇಣಿಗೆ ನೀಡಿದ್ದಾರೆ.