Advertisement

ತಿಂಗಳಿಗೆ 2 ಬಾರಿ ಕಂದಾಯ ಅದಾಲತ್‌ ಕಡ್ಡಾಯ

09:43 PM Jan 03, 2020 | Lakshmi GovindaRaj |

ಮೈಸೂರು: ಜನ ಸಾಮಾನ್ಯರ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ತಿಂಗಳಿಗೆ ಎರಡು ಬಾರಿ ಕಡ್ಡಾಯವಾಗಿ ಕಂದಾಯ ಅದಾಲತ್‌ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮೈಸೂರು ಜಿಪಂನ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಶುಕ್ರವಾರ ತ್ತೈಮಾಸಿಕ ಕೆಡಿಪಿ ಸಭೆ ನಡೆಸಿದ ಅವರು, ಉಪ ವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲೂಕುಗಳಲ್ಲಿ ತಿಂಗಳಿಗೆ ಎರಡು ಬಾರಿ, ಜಿಲ್ಲಾಧಿಕಾರಿಗಳ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಂಗಳಿಗೆ ಒಮ್ಮೆ, ಜಿಲ್ಲಾಧಿಕಾರಿಯವರು ಪ್ರತಿ ಮೂರು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಕಂದಾಯ ಅದಾಲತ್‌ ನಡೆಸಬೇಕು ಎಂದರು.

ರಾಜ್ಯ ಮುಂಗಡಪತ್ರಕ್ಕೆ ಸೇರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳಿಂದ ಎರಡು ಉಪಯುಕ್ತ ಕಾರ್ಯಕ್ರಮಗಳ ಪಟ್ಟಿ ಮಾಡಿಕೊಡಿ, ಮುಖ್ಯಮಂತ್ರಿಯವರ ಗಮನಕ್ಕೆ ತಂದು ಬಜೆಟ್‌ನಲ್ಲಿ ಘೋಷಿಸುವಂತೆ ಮನವಿ ಮಾಡುವುದಾಗಿ ಹೇಳಿದರು. ಅಧಿಕಾರಿಗಳು ಮಧ್ಯವರ್ತಿಗಳನ್ನು ದೂರವಿಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತ ಯಂತ್ರ ಚುರುಕಾಗಬೇಕು. ಚುನಾವಣೆ ಬಂದಾಗ ಪಕ್ಷ ರಾಜಕಾರಣ ಮಾಡೋಣ, ಈಗ ಎಲ್ಲರೂ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಅಧಿಕಾರ ಮೊಟಕು ಮಾಡಲ್ಲ: ಗ್ರಾಪಂಗಳ ಅಧಿಕಾರವನ್ನು ಸರ್ಕಾರ ಮೊಟಕು ಮಾಡುವುದಿಲ್ಲ. ಆದರೆ, ಗ್ರಾಪಂ ಅಧ್ಯಕ್ಷ ಮಾಡಿದ್ದೇ ಅಂತಿಮವಲ್ಲ, ಶಾಸನವೂ ಅಲ್ಲ. ಆದರೆ, ಅವರು ಮಾಡುವ ಶಿಫಾರಸುಗಳು ಅರ್ಹವಾಗಿದ್ದರೆ ಸರ್ಕಾರ ಪರಿಗಣಿಸಲಿದೆ. ಆಶ್ರಯ ಯೋಜನೆಯಡಿ ಮನೆಗಳ ಫ‌ಲಾನುಭವಿ ಆಯ್ಕೆಯನ್ನು ಗ್ರಾಪಂಗಳಿಗೆ ನೀಡಿರುವುದರಿಂದ ಅರ್ಹರಿಗೆ ಮನೆ ಸಿಗುತ್ತಿಲ್ಲ. ಬಹುತೇಕ ಗ್ರಾಪಂ ಅಧ್ಯಕ್ಷರ ನೆಂಟರಿಷ್ಟರಿಗೆ ಮನೆ ಸಿಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಿ ಕೊಡಿ: ಯಾವ್ಯಾವ ಇಲಾಖೆಗಳಲ್ಲಿ, ಯಾವ್ಯಾವ ಅಧಿಕಾರಿ ಎಷ್ಟು ವರ್ಷಗಳಿಂದ ಈ ಜಿಲ್ಲೆಯಲ್ಲಿದ್ದಾರೆ? ಅವರ ಕಾರ್ಯಭಾರವೇನು ಎಂಬುದನ್ನು ಪಟ್ಟಿ ಮಾಡಿಕೊಡಿ. ನನಗೇನು ಯಾವ ಅಧಿಕಾರಿಯ ಮೇಲೂ ವ್ಯಾಮೋಹವಿಲ್ಲ. ಒಳ್ಳೆಯ ಕೆಲಸಗಾರನಾದರೆ ಅವಕಾಶ ನೀಡುತ್ತೇವೆ. ಇಲ್ಲವಾದಲ್ಲಿ ನಿಮ್ಮ ಜಾಗವನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯವೈಖರಿ ಸರಿ ಇಲ್ಲ. ಇಷ್ಟು ಸುಳ್ಳು ಹೇಳುವುದು ಒಳ್ಳೆಯದಲ್ಲ.

Advertisement

ನಿನ್ನನ್ನು ಏನು ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿ ಕಪನಿಗೌಡರನ್ನು ತರಾಟೆಗೆ ತೆಗೆದುಕೊಂಡರು. ಜಂಟಿ ಕೃಷಿ ನಿರ್ದೇಶಕ ಡಾ.ಮಹಾಂತೇಶಪ್ಪ, ಒಳ್ಳೆಯವರಾಗಿ ಬದಲಾವಣೆ ಆಗಬೇಕು. ಬಡವರಿಗೆ ಅಕ್ಕಿ ಕೊಡುವುದಲ್ಲಿ ಲೋಪವಾಗುತ್ತಿದೆ. ಸಾಮಾಜಿಕ ಪಿಂಚಣಿ ಯೋಜನೆಗಳನ್ನು ಫ‌ಲಾನುಭವಿಗಳಿಗೆ ತಲುಪಿಸುವಲ್ಲೂ ಲೋಪವಾಗುತ್ತಿದೆ. ಹಾಸ್ಟೆಲ್‌ಗ‌ಳ ನಿರ್ವಹಣೆ ಸರಿ ಇಲ್ಲ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಂಸದರ ಗಮನಕ್ಕೆ ತನ್ನಿ: ಕೇಂದ್ರ ಪುರಸ್ಕೃತ ಯೋಜನೆಗಳ ಕಾಮಗಾರಿಯ ಶಂಕುಸ್ಥಾಪನೆ, ಉದ್ಘಾಟನೆಗೆ ಲೋಕಸಭಾ ಸದಸ್ಯರನ್ನು ಕಡ್ಡಾಯವಾಗಿ ಕರೆಯಬೇಕು. ಈ ಸಂಬಂಧ ಕೇಂದ್ರದ ಶಿಷ್ಟಾಚಾರವನ್ನು ಪಾಲಿಸಬೇಕು. ಇದರಲ್ಲಿ ಸಣ್ಣ ಅಪಚಾರವಾದರೂ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಸುಮ್ಮನೆ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಎಲ್‌.ನಾಗೇಂದ್ರ, ಕೆ.ಮಹದೇವ್‌, ಅಶ್ವಿ‌ನ್‌ಕುಮಾರ್‌, ಬಿ.ಹರ್ಷವರ್ಧನ್‌, ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಲೋಕಸಭಾ ಸದಸ್ಯ ಪ್ರತಾಪ್‌ ಸಿಂಹ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಕೆ.ಜ್ಯೋತಿ, ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಸಭೆಯಲ್ಲಿದ್ದರು.

ಸಚಿವ ವಿ.ಸೋಮಣ್ಣ ಹಾಡಿ ವಾಸ್ತವ್ಯ: ಮುಂದಿನ ಬಾರಿ ಮೈಸೂರು ಜಿಲ್ಲೆಗೆ ಭೇಟಿ ನೀಡಿದಾಗ ಎಚ್‌.ಡಿ.ಕೋಟೆ ತಾಲೂಕಿನ ಗಿರಿಜನ ಹಾಡಿಯಲ್ಲಿ ವಾಸ್ತವ್ಯ ಹೂಡಿ ಅವರ ಸಮಸ್ಯೆ ಆಲಿಸಲಿದ್ದು, ಅಷ್ಟರೊಳಗೆ ಗಿರಿಜನರಿಗೆ ಎಷ್ಟು ಮನೆಗಳನ್ನು ಕೊಡಬೇಕಿದೆ ಎಂಬ ಪಟ್ಟಿ ಮಾಡಿ ಎಂದು ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಶಾಸಕರಿಂದಲೂ ಸಹಿ: ಮನೆ ರಹಿತರ ಸಂಖ್ಯೆ ಒಂದು ಕೋಟಿಯಷ್ಟಿದೆ. ಗ್ರಾಮಸಭೆಗಳಿಗೆ ಶಾಸಕರುಗಳು ಹೋಗಿ ಕುಳಿತು ಅರ್ಹರನ್ನು ಗುರುತಿಸಿ, ಫ‌ಲಾನುಭವಿಗಳನ್ನು ಆಯ್ಕೆ ಮಾಡಿದ ಗ್ರಾಮಸಭೆ ನಿರ್ಣಯಕ್ಕೆ ಶಾಸಕರೂ ಸಹಿ ಹಾಕುವಂತಾಗಬೇಕು. ಅಲ್ಲಿಯವರೆಗೆ ಈ ವ್ಯವಸ್ಥೆ ಸರಿ ಹೋಗುವುದಿಲ್ಲ ಎಂದು ಹೇಳಿದರು. ಆಶ್ರಯ ಫ‌ಲಾನುಭವಿಗಳ ಆಯ್ಕೆಯಲ್ಲಿ ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸತ್‌ ಸದಸ್ಯರುಗಳನ್ನು ಒಳಗೊಂಡ ಉಪ ಸಮಿತಿ ರಚಿಸಲಾಗುತ್ತಿದ್ದು, ಗ್ರಾಮಸಭೆಯಲ್ಲಿ ಆಯ್ಕೆ ಮಾಡಿರುವುದನ್ನು ಈ ಉಪ ಸಮಿತಿ ಸರಿಪಡಿಸಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next