ಪುತ್ತೂರು : ಹಿಂದೂ ಸಮಾಜ ಹಾಗೂ ಕಾರ್ಯಕರ್ತರನ್ನು ಗುರಿ ಮಾಡಿ ದ್ವೇಷದ ರಾಜಕಾರಣವನ್ನು ಮತ್ತೆ ಮುಂದುವರೆಸಲಾಗಿದೆ. ಇದು ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿಯ ಮುಂದುವರೆದ ಭಾಗ. ಜಿಲ್ಲೆಯಲ್ಲಿ 7 ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದರಿಂದ ಹತಾಶರಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ವಿಜಯೋತ್ಸವದ ನೆಪದಲ್ಲಿ ವಿಟ್ಲ ಪರಿಸರದ ಕೆಲಿಂಜ, ಕುಡ್ತಮು ಗೇರುಗಳಲ್ಲಿ ನಡೆದ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಏಳು ಗಾಯಾಳುಗಳನ್ನು ಪುತ್ತೂರು ಶಾಸಕ
ಸಂಜೀವ ಮಠಂದೂರು ಹಾಗೂ ಆರೆಸೆಸ್ ಮುಖಂಡ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರೊಂದಿಗೆ ರವಿವಾರ ಭೇಟಿ ಮಾಡಿದ ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಮಾಧ್ಯಮಗಳೊಂದಿಗೆ ಮಾತನಾಡಿದರು.
ಆಸ್ಪತ್ರೆಯಲ್ಲಿ ದಾಖಲಾಗಿರುವ ಧನಂಜಯ, ಚಂದ್ರಶೇಖರ್, ಸಚ್ಚಿದಾನಂದ, ಲಕ್ಷ್ಮೀಶ ಹಾಗೂ ಶರತ್ ತಮಗೆ ವಿಜಯೋತ್ಸವದ ನೆಪದಲ್ಲಿ ದೊಣ್ಣೆ, ಸೋಡಾ ಬಾಟಲ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದರು. ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡ ಸಂಜೀವ ಮಠಂದೂರು ಹಾಗೂ ನಳಿನ್ ಕುಮಾರ್ ಕಟೀಲು ಪ್ರಕರಣದ ಕುರಿತು ಪೊಲೀಸ್ ಇಲಾಖೆಯ ವರಿಷ್ಠರಲ್ಲಿ ಮಾತನಾಡುವುದಾಗಿ ಭರವಸೆ ನೀಡಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ರಾಮದಾಸ್ ಹಾರಾಡಿ, ಹಿಂದೂ ಸಂಘಟನೆಗಳ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಅಜಿತ್ ರೈ ಹೊಸಮನೆ, ಶ್ರೀಧರ್ ತೆಂಕಿಲ, ಸತೀಶ್ ಬಿ.ಎಸ್. ಉಪಸ್ಥಿತರಿದ್ದರು.