Advertisement

ವೋಟಿನ ಸೇಡು; ಸಿಎಂ ಮಾತಿಗೆ ಕಾಂಗ್ರೆಸ್‌ ಸಹಮತ

02:18 AM Jun 28, 2019 | Team Udayavani |

ಬೆಂಗಳೂರು: ‘ವೋಟು ಮಾತ್ರ ಮೋದಿಗೆ, ಸಮಸ್ಯೆ ಬಗೆಹರಿಸಲಿಕ್ಕೆ ಮಾತ್ರ ನಾವಾ?’ ಎಂಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಿಡಿಮಿಡಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಧ್ಯೆಯೇ, ಕಾಂಗ್ರೆಸ್‌ ನಾಯಕರು ಮತ್ತು ಸಚಿವರು ಸಿಎಂ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ವೋಟಿನ ಸೇಡು’ ರಾಜಕೀಯ ತೀವ್ರತೆ ಪಡೆದುಕೊಂಡಿದೆ.


Advertisement

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮೊದಲಿಗರಾಗಿ ಸಿಎಂ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ತವರು ಕ್ಷೇತ್ರ ಬಾದಾಮಿ ತಾ|ನ ಆಲೂರ ಎಸ್‌.ಕೆ. ಗ್ರಾಮದಲ್ಲಿ ಮಾತನಾಡಿದ ಸಿದ್ದು, ಅಭಿವೃದ್ಧಿ ಮಾಡದವರಿಗೆ ಮತ ಹಾಕ್ತೀರಿ. ಆದರೆ ಕೆಲಸ ಮಾತ್ರ ನಮಗೆ ಹೇಳ್ತೀರಿ. ಬಿಜೆಪಿಗೆ ಓಟ್ ಹಾಕಿ, ಅಭಿವೃದ್ಧಿ ಕೆಲ್ಸ ಮಾಡಿ ಎಂದು ಮೋದಿಗೆ ಕೇಳ್ತೀರಾ ಎಂದು ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಹೆಚ್ಚು ಮತಗಳು ನಮಗೆ ಬರುತ್ತವೆ ಅಂದುಕೊಂಡಿದ್ದೆ. ಅನ್ನಭಾಗ್ಯ ಅಕ್ಕಿ, ಮಕ್ಕಳಿಗೆ ಬಟ್ಟೆ, ಹಾಲು, ಮಹಿಳೆಯರಿಗೆ ಉಚಿತ ಶಿಕ್ಷಣ… ಎಲ್ಲವೂ ನಾವು ಕೊಟ್ಟಿದ್ದೆವು. ಆದರೂ ನಮಗೆ ಮತ ಹಾಕಲಿಲ್ಲ. ಕೆಲಸಾನೇ ಮಾಡದಿದ್ದರೂ ಬಿಜೆಪಿಹೆ ಓಟು ಹಾಕುತ್ತಾರಾ ಅಂತ ನನಗೆ ತಿಳಿಯುತ್ತಿಲ್ಲ ಎಂದರು.

ಸಿಎಂ ಹೇಳಿದ್ದು ವಾಸ್ತವ
ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೂ ಕುಮಾರಸ್ವಾಮಿ ವಾಸ್ತವವನ್ನೇ ಪ್ರಸ್ತಾವ ಮಾಡಿದ್ದಾರೆ ಎಂದಿದ್ದಾರೆ. ರಾಜಕೀಯದಲ್ಲಿ ಕೆಲವೊಂದು ಬಾರಿ ವಾಸ್ತವಾಂಶ ಮಾತನಾಡಿದರೆ ಕೆಲವರಿಗೆ ಹಿಡಿಸುವುದಿಲ್ಲ. ಸಿಎಂ 2 ದಿನ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸಿ, ಸ್ಪಂದಿಸಿದ್ದಾರೆ ಎಂದರು.

ಗೃಹ ಸಚಿವ ಎಂ.ಬಿ. ಪಾಟೀಲರೂ ಸಿಎಂ ಹೇಳಿಕೆಗೆ ಧ್ವನಿಗೂಡಿಸಿದ್ದು, ಯರಮರಸ್‌ ಬಳಿ ರಾಜಕೀಯ ಪ್ರೇರಿತ ಪ್ರತಿಭಟನಕಾರರೇ ಹೆಚ್ಚಿದ್ದರು. ಸಿಎಂ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Advertisement

ಮುಖ್ಯಮಂತ್ರಿ ಹತಾಶೆ
ಲೋಕಸಭೆ ಚುನಾವಣೆಯ ಸೋಲಿನಿಂದ ಕುಮಾರಸ್ವಾಮಿ ಹತಾಶರಾಗಿ ಜನರ ಮೇಲೆಸಿಟ್ಟು ತೋರುತ್ತಿದ್ದಾರೆ ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ಆರೋಪಿಸಿದರು.

ಸಿಎಂ ರಾಜೀನಾಮೆ ನೀಡಲಿ
ಸಿಎಂ ಸಿಟ್ಟಿನ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ವಾಗ್ಧಾಳಿ ನಡೆಸಿ, ರಾಜೀನಾಮೆಯನ್ನೂ ಕೇಳಿದ್ದಾರೆ. ಮೋದಿಗೆ ಓಟ್ ಹಾಕ್ತೀರಿ, ಕೆಲಸ ಕೇಳ್ಳೋಕೆ ನನ್ನ ಬಳಿ ಬರ್ತೀರಿ’ ಎಂದು ಪ್ರಶ್ನಿಸಿದರೆ ಏನರ್ಥ? ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದ್ದಾರೆ. ಅವರು ರಾಜೀನಾಮೆ ನೀಡಿದರೆ ರಸ್ತೆಯಲ್ಲಿ ಹೋಗುವ ದಾಸನೂ ಅವರ ಬಳಿ ಹೋಗುವುದಿಲ್ಲ. ಮುಖ್ಯಮಂತ್ರಿ ಎಂಬ ಕಾರಣಕ್ಕೆ ಜನ ಅವರ ಬಳಿ ಹೋಗುತ್ತಾರೆ. ಆ ಜನರಿಗೆ ಸ್ಪಂದಿಸುವುದಿಲ್ಲ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ವಾಗ್ಧಾಳಿ ನಡೆಸಿದರು.

ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಜನ ಮತ ಹಾಕಿರಲಿಲ್ಲವೇ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next