ಕ್ರಿಕೆಟ್‌ನಲ್ಲಿ ಟಿ20 ಪ್ರವೇಶವಾದ ಮೇಲೆ ಟೆಸ್ಟ್ ಸರಣಿಗಳ ಮೇಲೆ ಜನರ ಆಸಕ್ತಿ ಕಡಿಮೆಯಾಗಿದೆ ಎಂಬುದು ಸುಳ್ಳಲ್ಲ. ಕೇವಲ ಮೂರ್ನಾಲ್ಕು ಗಂಟೆಗಳಲ್ಲಿ ಮುಗಿದು ಹೋಗುವ ಟಿ20ಯಿಂದಾಗಿ ಒಂದು ರೀತಿಯಲ್ಲಿ ಹೇಳಬೇಕಾದರೆ ಏಕದಿನ ಪಂದ್ಯಗಳ ಮೇಲಿನ ಆಸಕ್ತಿಯೂ ಕಡಿಮೆಯಾಗಿದೆ. ಇಂಥ ಕಾಲದಲ್ಲಿ ಯಾವುದೇ ಕಾರಣಕ್ಕೂ ಟೆಸ್ಟ್ ಪಂದ್ಯಗಳು ಬದಿಗೆ ಸರಿಯಬಾರದು. ಕಾಲಕಾಲಕ್ಕೆ ಟೆಸ್ಟ್ ಸರಣಿಗಳನ್ನು ಆಯೋಜಿಸುತ್ತಾ ಹೋದರೆ ಪ್ರತಿಯೊಬ್ಬ ಆಟಗಾರ ಕೂಡ ಪಕ್ವವಾಗುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ.
ಸೋಮವಾರ ಬೆಂಗಳೂರಿನಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿದೆ. ರೋಹಿತ್ ಶರ್ಮ ನಾಯಕತ್ವದಲ್ಲಿ ಆಡಿದ ಭಾರತ ತಂಡ ಎಲ್ಲ ವಲಯಗಳನ್ನೂ ಅತ್ಯುತ್ತಮ ಪ್ರದರ್ಶನ ನೀಡಿತು ಎಂದು ನಿಸ್ಸಂದೇಹವಾಗಿ ಹೇಳಬಹುದು. ಇಲ್ಲಿ ಲಂಕಾ ತಂಡ ಕೊಂಚ ದುರ್ಬಲವೆಂದು ಕಂಡು ಬಂದರೂ ಭಾರತೀಯ ಆಟಗಾರರ ಶ್ರೇಷ್ಠ ಪ್ರದರ್ಶನವನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ರೋಹಿತ್ ಶರ್ಮ ಅವರಿಗೆ ಈ ಸರಣಿ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆಯಂತಿತ್ತು. ಟೆಸ್ಟ್ ತಂಡಕ್ಕೆ ಅವರು ಪೂರ್ಣಪ್ರಮಾಣದ ನಾಯಕನಾಗಿ ಆಡಿದ ಮೊದಲ ಸರಣಿ ಇದು. ರೋಹಿತ್ ಬ್ಯಾಟ್‌ನಿಂದ ಸಾಕಷ್ಟು ಪ್ರಮಾಣದಲ್ಲಿ ರನ್ ಸಿಡಿಯದಿದ್ದರೂ ಅವರ ನಾಯಕತ್ವದ ಗುಣ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು ಎಂದು ಹೇಳಬಹುದು. ಇಡೀ ಸರಣಿಯಲ್ಲಿ ಯುವ ಆಟಗಾರರು ಮಿಂಚಿದ್ದು ಗಮನಾರ್ಹ. ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್, ಅಕ್ಷರ್ ಪಟೇಲ್ ಅವರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಕೆ.ಎಲ್. ರಾಹುಲ್ ಅವರ ಅನುಪಸ್ಥಿತಿಯೂ ಕಾಡದಂತೆ ಆಡಿದ್ದು ಉತ್ತಮವೆನಿಸಿತು.
ಸರಣಿಯಲ್ಲಿ ಆರಂಭಿಕ ಆಟಗಾರರಿಗಿಂತ ಮಧ್ಯಮ ಕ್ರಮಾಂಕದ ಆಟಗಾರರೇ ಹೆಚ್ಚು ಮಿಂಚಿದ್ದು ವಿಶೇಷ. ಅಂದರೆ ರಿಷಭ್ ಪಂತ್, ಶ್ರೇಯಸ್ ಅಯ್ಯರ್ ತಂಡದ ಕಷ್ಟಕಾಲದಲ್ಲೂ ನಾವು ಆಡಬಲ್ಲೆವು ಎಂಬುದನ್ನು ತೋರಿಸಿಕೊಟ್ಟರು. ಅಲ್ಲದೆ ದ್ವಿತೀಯ ಟೆಸ್ಟ್‌ನಲ್ಲಿ ಶ್ರೇಯಸ್ ಅಯ್ಯರ್ ಅವರು, ಎರಡು ದ್ವಿಶತಕ ಬಾರಿಸಿ, ಈ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರವಾದರು.
ಅತ್ತ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದು ಜಗತ್ತಿನ ಅಗ್ರ ಶ್ರೇಯಾಂಕದ ಆಲ್‌ರೌಂಡರ್ ಜಡೇಜ. ಬ್ಯಾಟಿಂಗ್‌ನಲ್ಲಿ 175 ರನ್ ಬಾರಿಸಿದ್ದೂ ಅಲ್ಲದೇ ಬೌಲಿಂಗ್‌ನಲ್ಲಿ 41 ರನ್ ನೀಡಿ 5 ವಿಕೆಟ್ ತೆಗೆದುಕೊಂಡಿದ್ದು ಬಹುದೊಡ್ಡ ಸಾಧನೆಯಾಯಿತು.
ಅತ್ತ ಬೌಲಿಂಗ್ ವಿಭಾಗದಲ್ಲಿ ವೇಗಿ ಬೂಮ್ರಾ ಚೆನ್ನಾಗಿಯೇ ಮಿಂಚಿದರು. ಮೊದಲ ಟೆಸ್ಟ್‌ನಲ್ಲಿ ಸ್ಪಿನ್ ಬೌಲಿಂಗ್ ವಿಭಾಗ ಗೆಲುವಿಗೆ ವಿಶೇಷ ಕಾಣಿಕೆ ನೀಡಿದರೆ, ಇಲ್ಲಿ ವೇಗಿಗಳು ಮತ್ತು ಸ್ಪಿನ್ನರ್‌ಗಳು ಇಬ್ಬರೂ ಲಂಕಾ ಬ್ಯಾಟರ್ ಗಳನ್ನು ಕಾಡಿದರು. ಇದುವರೆಗೆ ಭಾರತ ತವರಿನಲ್ಲಿ ಮೂರು ಬಾರಿ ಪಿಂಕ್ ಬಾಲ್ ಟೆಸ್ಟ್ ಆಡಿದೆ. ವಿಶೇಷವೆಂದರೆ ಮೂರನ್ನೂ ಗೆದ್ದಿದೆ. ಜತೆಗೆ ಇದುವರೆಗೆ ಭಾರತ ತವರಿನಲ್ಲಿ 15 ಟೆಸ್ಟ್ ಸರಣಿಗಳನ್ನು ಗೆಲ್ಲುತ್ತಾ ಬಂದಿದೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಸೋತದ್ದೇ ಕೊನೆ.
ಏನೇ ಆಗಲಿ ಟಿ20 ಯುಗದಲ್ಲಿಯೂ ಭಾರತ ತಂಡಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಗಮನಾರ್ಹವಾಗಿದೆ. ಇದೇ ಜಯದ ಓಟವನ್ನು ಮುಂದುವರಿಸಿಕೊಂಡು ಹೋಗಲಿ ಎಂಬುದೇ ಎಲ್ಲರ ಹಾರೈಕೆ.