ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ನಿಯೋಗ ಭಾನುವಾರ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿ ಮಾಡಿ ಸರಕಾರ ರಚಿಸಲು ಹಕ್ಕು ಮಂಡಿಸಿತು.
ಕೆ ಚಂದ್ರಶೇಖರ ರಾವ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಅದನ್ನು ಅಂಗೀಕರಿಸಿದ ಬೆನ್ನಲ್ಲೇ ಇದು ನಡೆದಿದೆ. ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು, ರಾಜ್ಯದಲ್ಲಿ ಹೊಸ ಸರಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಮುಖ್ಯಮಂತ್ರಿ ಕೆಸಿಆರ್ ಅವರಿಗೆ ಮನವಿ ಮಾಡಿದರು.
ಪೊಲೀಸ್ ಇಲಾಖೆಯ ಹೇಳಿಕೆಯ ಪ್ರಕಾರ, ಡಿಸೆಂಬರ್ 4 ಅಥವಾ 9 ರಂದು ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭದ್ರತಾ ವ್ಯವಸ್ಥೆ ಮಾಡುವಂತೆ ರೇವಂತ್ ರೆಡ್ಡಿ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ. ಅವರು ಡಿಜಿಪಿ ಅಂಜನಿ ಕುಮಾರ್, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಎಡಿಜಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಡಿಜಿಪಿ ಕುಮಾರ್ ಅಮಾನತು
ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಭಾರತದ ಚುನಾವಣಾ ಆಯೋಗ ಡಿಜಿಪಿ ಕುಮಾರ್ ಅವರನ್ನು ಅಮಾನತುಗೊಳಿಸಿದೆ. ಒಟ್ಟು 2,290 ಅಭ್ಯರ್ಥಿಗಳ ಪೈಕಿ 16 ರಾಜಕೀಯ ಪಕ್ಷಗಳ ಪೈಕಿ ಒಂದು ರಾಜಕೀಯ ಪಕ್ಷದ ಸ್ಟಾರ್ ಪ್ರಚಾರಕರನ್ನು(ರೇವಂತ್ ರೆಡ್ಡಿ) ಭೇಟಿ ಮಾಡಲು ಡಿಜಿಪಿ ಆಯ್ಕೆ ಮಾಡಿಕೊಂಡಿರುವುದು ಒಲವು ಪಡೆಯುವ ದುರುದ್ದೇಶದ ಸ್ಪಷ್ಟ ಸೂಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.