ಹಾಸನ: ಜಿಲ್ಲೆಯಲ್ಲಿ ಇನ್ನು ಎಚ್.ಡಿ.ರೇವಣ್ಣ ಅವರದೇ ಪಾರುಪತ್ಯ. ಒಂದು ದಶಕದಿಂದ ವಿರೋಧ ಪಕ್ಷದಲ್ಲಿದ್ದರೂ ಜಿಲ್ಲೆಯ ಆಡಳಿತದ ಮೇಲೆ ಹಿಡಿತವಿಟ್ಟುಕೊಂಡಿದ್ದ ರೇವಣ್ಣ ಅವರು ಈಗ ಸಚಿವರಾಗಿರುವುದರಿಂದ ಜಿಲ್ಲೆಯ ಅಧಿಕಾರಿ
ವರ್ಗದಲ್ಲಿ ತಳಮಳ ಶುರುವಾಗಿದೆ.
ರಾಜಕೀಯವಾಗಿಯೂ ಈಗ ಜಿಲ್ಲೆಯಲ್ಲಿ ಜೆಡಿಎಸ್ ಸಂಪೂರ್ಣ ಹಿಡಿತ ಸಾಧಿಸಿದೆ. 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಜೆಡಿಎಸ್ ಕಾಂಗ್ರೆಸ್‌ಗೆ ದನಿ ಇಲ್ಲದಂತೆ ಮಾಡಿದೆ. ಇನ್ನು ಒಬ್ಬ ಬಿಜೆಪಿ ಶಾಸಕರಿದ್ದರೂ ಬಲಾಡ್ಯ 6 ಮಂದಿ ಜೆಡಿಎಸ್ ಶಾಸಕರೆದುರು ಹೋರಾಡುವಷ್ಟು ರಾಜಕೀಯ ಶಕ್ತಿ ಅವರಿಗಿಲ್ಲ. ಇದೇ ಮೊದಲ ಬಾರಿಗೆ ಶಾಸಕರಾಗಿರುವ ಬಿಜೆಪಿಯ ಪ್ರೀತಂ ಜೆ.ಗೌಡ ಅವರಿಗೆ ಇನ್ನೂ ರಾಜಕೀಯ ಹಾಗೂ ಆಡಳಿತದ ಆಳ ಅರಿವು ಗೊತ್ತಿಲ್ಲ. ಹಾಗಾಗಿ ಸಚಿವ ರೇವಣ್ಣ ಎದರು ಜಿಲ್ಲೆಯಲ್ಲಿ ದನಿ ಎತ್ತುವವರೇ ಇಲ್ಲ.
ಗತಕಾಲದ ಸಾಧನೆ: ಒಂದು ದಶಕದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿರುವ ಎಚ್.ಡಿ.ರೇವಣ್ಣ ಅವರಿಂದ ಜಿಲ್ಲೆಯ ಜನರು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. 2004 ರಿಂದ 2008 ರವರೆಗೆ ರೇವಣ್ಣ ಅವರು ಜಿಲ್ಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಈಗಲೂ ಮೆಲುಕು ಹಾಕುತ್ತಿರುವ ಜಿಲ್ಲೆಯ ಜನರು ಈಗ ಇನ್ನಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಧರಂ ಸಿಂಗ್ ನೇತೃತ್ವದ ಕಾಂಗ್ರೆಸ್ – ಜೆಡಿಎಸ್ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಹಾಗೂ ಇಂಧನ ಸಚಿವರಾಗಿದ್ದ ರೇವಣ್ಣ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲೂ ಅದೇ ಖಾತೆಗಳನ್ನು ನಿರ್ವಹಿಸಿದ್ದರು. ಆ 36 ತಿಂಗಳ ಆಡಳಿತದಲ್ಲಿ ಹಾಸನಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು, 2 ನರ್ಸಿಂಗ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಪಶುವೈದ್ಯಕೀಯ ಕಾಲೇಜು, ಗೃಹ ವಿಜ್ಞಾನ ಕಾಲೇಜು, ಕಾನೂನು ಕಾಲೇಜು, ಮಹಿಳಾ ಕಾಲೇಜು, ಪ್ರತಿ ಹೋಬಳಿ ಕೇಂದ್ರಗಳಿಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಬರುವಂತೆ ಮಾಡಿದ್ದರು.
ಹೆಚ್ಚಿದ ನಿರೀಕ್ಷೆ: ಹೈನುಗಾರಿಕೆ ಅಭಿವೃದ್ಧಿಯಲ್ಲಿ ರೇವಣ್ಣ ಅವರನ್ನು ಮೀರಿಸುವವರಿಲ್ಲ ಎಂಬಂತೆ ಅಭಿವೃದ್ಧಿ ಮಾಡಿ ಹಾಸನ ಜಿಲ್ಲೆ ಈಗ ರಾಜ್ಯದಲ್ಲಿಯೇ ಹಾಲು ಉತ್ಪಾದನೆಯಲ್ಲಿ 2 ನೇ ಸ್ಥಾನ ಪಡೆದುಕೊಂಡಿದೆ. ಹಾಸನ ಡೇರಿ ಮೆಗಾ ಡೇರಿ ರೂಪ ಪಡೆದಿದೆ. ಈಗ ಅದೇ ವೇಗದ ಅಭಿವೃದ್ಧಿಯನ್ನು ಜಿಲ್ಲೆಯ ಜನರು ರೇವಣ್ಣ ಅವರಿಂದ ನಿರೀಕ್ಷಿಸುತ್ತಿದ್ದಾರೆ.
ಎಚ್ಚರಿಸುವ ವಿರೋಧಪಕ್ಷದ ಕೊರತೆ: ಕಳೆದ ಒಂದು ದಶಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಹಾಸನ ಜಿಲ್ಲೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸುತ್ತಾ ಬಂದಿದ್ದ ರೇವಣ್ಣ ಅವರು, ಜಿಲ್ಲೆ ತಾವು ಉಸ್ತುವಾರಿ ಸಚಿವರಾಗಿದ್ದಾಗ ಏನೇನು ಆಗಿತ್ತು, ಜಿಲ್ಲೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಏನೇನು ಅನ್ಯಾಯ ಮಾಡಿದವರು ಎಂದು ಪಟ್ಟಿ ಮಾಡುತ್ತಾ ಹೋಗುತ್ತಿದ್ದರು. ಈಗ ಅವುಗಳನ್ನೆಲ್ಲಾ ಈಡೇರಿಸುವ ಹೊಣೆ ರೇವಣ್ಣ ಅವರ ಮೇಲಿದೆ. ಆದರೆ ಈಗ ಅವರ ಹೊಣೆಗಾರಿಕೆಯನ್ನು ನೆನಪಿಸುವ ಪ್ರಬಲ ವಿರೋಧ ಪಕ್ಷವೇ ಜಿಲ್ಲೆಯಲ್ಲಿ ಇಲ್ಲ.
ರೇವಣ್ಣ ನಡೆದು ಬಂದ ಹಾದಿ ಹೊಳೆನರಸೀಪುರ ತಾಲೂಕು ಪಡುವಲ ಹಿಪ್ಪೆಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷನಾಗಿ 80 ರ ದಶಕದಲ್ಲಿ ಸಾರ್ವಜನಿಕ ಸೇವಾ ಕ್ಷೇತ್ರ ಪ್ರವೇಶಿಸಿದ ರೇವಣ್ಣ, 1986 ರಲ್ಲಿ ಹಾಸನ ಜಿಪಂ ಸದಸ್ಯರಾಗಿ ಆಯ್ಕೆಯಾದರು. ಹೊಳೆನರಸೀಪುರ ಕ್ಷೇತ್ರದಿಂದ 1994 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದು ಒಟ್ಟು 5 ಬಾರಿ, 2004 ರಿಂದ ಸತತ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಅವರು 4ನೇ ಬಾರಿ ಸಚಿವರಾಗುತ್ತಿದ್ದಾರೆ. 1994 ರಲ್ಲಿ ಪ್ರಥಮ ಬಾರಿಗೆ ರೇವಣ್ಣ ಅವರು ವಿಧಾನಸಭೆ ಪ್ರವೇಶಿಸಿದಾಗ ಅವರ ತಂದೆ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ.
1996 ರ ಜೂನ್ 1 ರಂದು ದೇವೇಗೌಡರು ಪ್ರಧಾನಿಯಾದಾಗ ರಾಜ್ಯದಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರದಲ್ಲಿ ಎಚ್.ಡಿ.ರೇವಣ್ಣ ಸಂಪುಟ ದರ್ಜೆ ಸಚಿವರಾಗಿ ವಸತಿ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಧರಂಸಿಂಗ್ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ಇಂಧನ ಸಚಿವ. ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲೂ ಆ ಎರಡೂ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. ಈ ಬಾರಿಯೂ ಲೋಕೋಪಯೋಗಿ ಖಾತೆ ನಿರೀಕ್ಷಿಸಿದ್ದಾರೆ.