Advertisement

ರೇವಣ್ಣ ಸರಿಯಾಗಿ ನಿಂಬೆಹಣ್ಣು ಮಂತ್ರಿಸಿದ್ದರೆ ಬುಗುರಿ ಆಡಿಸಬಹುದಿತ್ತು: R. ಅಶೋಕ್‌

10:03 PM Jul 14, 2023 | Team Udayavani |

ಬೆಂಗಳೂರು: ರೇವಣ್ಣ ಸರಿಯಾಗಿ ನಿಂಬೆಹಣ್ಣು ಮಂತ್ರಿಸಿ 40 ಸ್ಥಾನ ಗೆದ್ದಿದ್ದರೆ ಬುಗುರಿ ಆಡಿಸುತ್ತಿದ್ದರು!

Advertisement

ಶುಕ್ರವಾರ ವಿಧಾನಸಭೆಯಲ್ಲಿ ಹೀಗೊಂದು ಸ್ವಾರಸ್ಯಕರ ಚರ್ಚೆಗೆ ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಕಾರಣರಾದರು.

ಜಿಎಸ್‌ಟಿ ಮಸೂದೆ ಕುರಿತು ಮಾತನಾಡುತ್ತಿದ್ದ ರೇವಣ್ಣ, ಜಲ್ಲಿ ಕ್ರಷರ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಇದರಿಂದ ಸಾಕಷ್ಟು ತೆರಿಗೆ ಬರಲಿದೆ. ಕ್ರಷರ್‌ ಮಾಲಕರಿಗೂ ಬಿಸಿ ತಟ್ಟುತ್ತದೆ. ಬಸಣ್ಣಂದು ನಂದು ಏನೂ ಇಲ್ಲ. ಸುಳ್ಳು ಹೇಳಬಾರದು, ನನ್ನ ಕೆಲಸ ಎಲ್ಲ ಮಾಡಿಕೊಟ್ಟವ್ರೆ. ಅಶೋಕಣ್ಣ ಪಾಪ ಕಂದಾಯ ಮಂತ್ರಿ ಇದ್ದಾಗ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ಮಾತು ಹೊರಳಿಸಿದರು.

ಧಡಕ್ಕನೇ ಎದ್ದುನಿಂತ ಅಶೋಕ್‌, ಇಷ್ಟು ದಿನ ಸಿದ್ರಾಮಣ್ಣನ ಮೇಲೆ ಪ್ರೀತಿ ಅಂತಿದ್ದೆ. ಈಗ ನನ್ಯಾಕಣ್ಣೋ ಹಿಡ್ಕಂಡಿದ್ಯ ಎನ್ನುತ್ತಿದ್ದಂತೆ, ನಾನು ಯಾರತ್ರನೂ ವಿರೋಧ ಕಟ್ಕೊಳಲ್ಲ ಎಂದು ರೇವಣ್ಣರ ಕಾಲೆಳೆದರು. ಹಂಗಂತೀಯ, ಸಿದ್ರಾಮಣ್ಣನ ವಿರುದ್ಧ ಚುನಾವಣ ಪ್ರಚಾರಕ್ಕೆ ಬರೆಲೇ ಇಲ್ಲ. ಅನೇಕರು ನಿನ್ನೇ ಬಿಟೊದ್ರು. ನೀನು ಸರಿಯಾಗಿ ನಿಂಬೆಹಣ್ಣು ಮಂತ್ರಿಸಿದ್ದರೆ ಚುನಾವಣೇಲಿ ಗೇಮ್‌ ಏನೋ ಆಗ್ತಿತ್ತು. ಕನಿಷ್ಠ 40 ಸೀಟ್‌ ಬಂದಿದ್ರೂ ಬುಗ್ರಿ ಆಡಿಸ್ದಂಗೆ ಆಡಿಸ್ತಿದ್ದೆ ಎಂದು ಕಿಚಾಯಿಸಿದರು.

ಅಷ್ಟೇ ಹಾಸ್ಯವಾಗಿ ಮಾತಿಗಿಳಿದ ರೇವಣ್ಣ, ನಮ್‌ ಮಾತು ಕೇಳಿದ್ರೆ ಆಗ್ತಿತ್ತು. ನೀವಿಬ್ರೂ ಸೇರ್ಕೊಂಡು ನಮ್ಮನ್ನು ತೆಗ್ಯಕ್ಕೆ ಹೋದ್ರಿ. ನೀವೂ ಹೋದ್ರಿ, ನಾವೂ ಹೋದ್ವಿ. ಅವರಿಗೆ ಅನುಕೂಲ ಆಯ್ತು ಎಂದು ಕಾಲೆಳೆದರು. ಮತ್ತೆ ಅಶೋಕ ಮಾತನಾಡುತ್ತಾ, ನೀನು ಜ್ಯೋತಿಷಿ ಚೇಂಜ್‌ ಮಾಡ್ಕೊಟ್ಟಂತೆ… ಅವ್ರಾದ್ರೆ ರಾಹುಕಾಲ, ಗುಳಿಕಕಾಲ ಎಲ್ಲ ಸರಿಯಾಗಿ ಹೇಳ್ತಿದ್ರು. ಪಾಪ ಸಿಕ್ಕಿದ್ರು, ಈಗ ಬೇರೆ ಜ್ಯೋತಿಷಿ ನೋಡ್ಕೊಂಡಿದ್ಯಂತೆ, ಇಲ್ಲ ಅಂದಿದ್ರೆ ಇಂಧನ, ಪಿಡಬ್ಲ್ಯುಡಿ ಎರಡೂ ಇಲಾಖೆ ನಿಂಗೇ ಫಿಕ್ಸ್‌ ಆಗ್ತಿತ್ತು ಎಂದು ಹಾಸ್ಯ ಮಾಡಿದರು.

Advertisement

ಎಲ್ರೂ ನಮ್‌ ಸಂಬಂಧಿಕರೇ
ಅಶೋಕಣ್ಣ, ಬೊಮ್ಮಾಯಿ ಅಣ್ಣ ಆಗ್ಲಿ ಯಾರ ಜೊತ್ಗೂ ನಂದು ವಿರೋಧ ಇಲ್ಲ. ಎಲ್ಲ ಸಂಬಂಧಿಕರಿದ್ದಂತೆ. ಪರಮೇಶ್ವರಣ್ಣ ಕುಮಾರಣ್ಣನೂ ಚೆನ್ನಾಗವ್ರೆ ಎಂದು ರೇವಣ್ಣ ಹೇಳುತ್ತಿದ್ದಂತೆ, ಇನ್ಯಾರು ಬಾಕಿ ರೇವಣ್ಣ ಎಂದು ಬಿಜೆಪಿಯ ಸುನಿಲ್‌ ಕುಮಾರ್‌ ಚಟಾಕಿ ಹಾರಿಸಿದರು. ಅಶೋಕ್‌ ಮಧ್ಯಪ್ರವೇಶಿಸಿ, ಎಚ್‌.ಕೆ. ಪಾಟೀಲ್‌ ಒಬ್ರೆ ನಿಂಗೆ ವಿರೋಧಿ ಅನ್ಸತ್ತಲ್ವ ಎಂದು ಪ್ರಶ್ನಿಸುತ್ತಿದ್ದಂತೆ, ಅವ್ರೇ ಸುಮ್ನಿದ್ರು. ನನ್ಯಾಕೆ ಎತ್ತಿ ಕಟ್ಟೀರಿ ಎಂದು ಸಚಿವ ಪಾಟೀಲ್‌ ಹೇಳಿದರು.

ಸಚಿವ ಎಂ.ಬಿ. ಪಾಟೀಲ್‌ ಎದ್ದುನಿಂತು, ಹಾಗಿದ್ರೆ ರಾಮಲಿಂಗಾ ರೆಡ್ಡಿ ಇರ್ಬೇಕಲ್ವ ರೇವಣ್ಣ ಎನ್ನುತ್ತಿದ್ದಂತೆ, ರಾಮಲಿಂಗಾ ರೆಡ್ಡಿ ಆಗ್ಲಿ ಯಾರ ಹತ್ರ ಆಗ್ಲಿ ನಾನು ದ್ವೇಷ ಕಟ್ಕಳಲ್ಲ. ನಮ್ಗೆ ಡಕೋಟ ಬಸ್‌ ಕೊಟ್ಟವ್ರೆ. ಒಂದಿಪ್ಪತ್‌ ಬಸ್‌ ಕೇಳ್ಳೋದಿದೆ ಅವ್ರ ಹತ್ರ ಈಗ. ಅಶೋಕಣ್ಣ ನಂಗೆ ಇಂಧನ ಇಲಾಖೆ ಕೊಡೋಕ್ಕೆ ದಿಲ್ಲೀಲಿ ಚರ್ಚೆ ಆಗಿತ್ತು ಎಂದು ಹಳೆಯ ವಿಷಯಕ್ಕೆ ಹೊರಳುವವರಿದ್ದರು.

ಅಷ್ಟರಲ್ಲಿ ಎಸ್‌.ಟಿ. ಸೋಮಶೇಖರ್‌, ನನ್‌ ಬಗ್ಗೆ ಮಾತಾಡಿದ್ರೆ ಮಾತ್ರ ಹುಷಾರ್‌ ಅಂತಾರೆ ಎನ್ನುತ್ತಿದ್ದಂತೆ, ನೀವ್‌ ಸಸ್ತ ಅದೀರಿ, ನಾವಾದ್ರೆ ಹಂಗಲ್ಲ ಎಂದು ಎಚ್‌.ಕೆ. ಪಾಟೀಲ್‌ ಧ್ವನಿಗೂಡಿಸಿದರು. ಈ ಎಚ್‌.ಕೆ. ಪಾಟೀಲ್‌ಗ‌ೂ, ಎಂ.ಬಿ. ಪಾಟೀಲ್‌ಗ‌ೂ ಕಾನೂನು, ಕೈಗಾರಿಕೆ ಕೊಟ್ಟವ್ರೆ. ಏನ್‌ ಕೆಲ್ಸ ಮಾಡಿಸ್ಕಳದು? ಎಚ್‌.ಕೆ. ಪಾಟೀಲ್‌ ಹತ್ರ ಹೋಗಿ ಯಾವ್‌ ಕಾನೂನು ಸರಿ ಮಾಡಿಸ್ಕಳ್ಳಿ? ಎಂ.ಬಿ. ಪಾಟೀಲ್‌ ಹತ್ರ ಹೋಗಿ ಯಾವ್‌ ಇಂಡಸ್ಟ್ರಿ ತರ್ಲಿ? ಮೋಸ ಆಗೋಯ್ತು ನಂಗೆ ಎಂದು ರೇವಣ್ಣ ಚಟಾಕಿ ಹಾರಿಸಿ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next