Advertisement

Woman ಸಂತ್ರಸ್ತೆ ಅಪಹರಣಕ್ಕೆ ರೇವಣ್ಣ ಕುಮ್ಮಕ್ಕು: ಚಾರ್ಜ್‌ಶೀಟ್‌

12:16 AM Aug 02, 2024 | Team Udayavani |

ಬೆಂಗಳೂರು: ಮೈಸೂರಿನ ಕೆ.ಆರ್‌. ನಗರ ಠಾಣೆಯಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆಯ ಅಪಹರಣ ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡವು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

Advertisement

ಅಪಹರಣಕ್ಕೆ ಕುಮ್ಮಕ್ಕು ನೀಡಿದ ಬಗ್ಗೆ ಉಲ್ಲೇಖಿಸಲಾಗಿದೆ.ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಎಚ್‌.ಡಿ. ರೇವಣ್ಣ ಹಾಗೂ ಇತರ ಆರೋಪಿಗಳ ವಿರುದ್ಧ ನೂರಾರು ಪುಟಗಳ ದೋಷಾರೋಪ ಪಟ್ಟಿಯನ್ನು ಎಸ್‌ಐಟಿ ತಂಡವು ಕಳೆದ ಜುಲೈ 29ರಂದು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.

ದೋಷಾರೋಪ ಪಟ್ಟಿಯಲ್ಲೇನಿದೆ?
ಕೆಲವು ತಿಂಗಳ ಹಿಂದೆ ಹಾಸನದ ಅಶ್ಲೀಲ ವೀಡಿಯೋ ಭಾರೀ ಪ್ರಮಾಣದಲ್ಲಿ ವೈರಲ್‌ ಆಗಿತ್ತು. ಈ ಬೆಳವಣಿಗೆ ಬಳಿಕ ಮಾಜಿ ಸಚಿವ ರೇವಣ್ಣ, ಭವಾನಿ ರೇವಣ್ಣ ಹಾಗೂ ಇತರರು ಸೇರಿ ಸಂಚು ರೂಪಿಸಿದ್ದರು.

ವೀಡಿಯೋದಲ್ಲಿರುವ ಸಂತ್ರಸ್ತ ಮಹಿಳೆಯು ಮುಂದೆ ತಮ್ಮ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಬಾರದು ಎಂಬ ರೀತಿಯಲ್ಲಿ ಆಕೆಯ ಬಾಯಿ ಮುಚ್ಚಿಸಬೇಕು ಎಂಬ ದುರಾಲೋಚನೆಯಿಂದ ಆಕೆಯನ್ನು ಕರೆಸಿ ಸುಮಾರು 4 ದಿನಗಳ ಕಾಲ ಒಂದು ಕಡೆ ಇರಿಸಿದ್ದರು ಎಂಬ ಅಂಶಗಳನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 60ಕ್ಕೂ ಅಧಿಕ ಮಂದಿ ಸಾಕ್ಷಿಗಳು ಸೇರಿ ಪ್ರಕರಣದ ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಾಧಾರಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ.

ಅಶ್ಲೀಲ ವೀಡಿಯೋ ಮಾಫ್ì ಅಲ್ಲ: ಎಫ್ಎಸ್‌ಎಲ್‌
ಬೆಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಹಾಸನದ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಶೀಘ್ರದಲ್ಲೇ ವಿಶೇಷ ತನಿಖಾ ತಂಡವು (ಎಸ್‌ಐಟಿ) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸುವ
ಸಾಧ್ಯತೆಗಳಿವೆ.

Advertisement

ಮತ್ತೊಂದೆಡೆ ವೈರಲ್‌ ಆಗಿರುವುದು ನೈಜ ವೀಡಿಯೋ ಹೊರತು ನಕಲಿ ಅಥವಾ ಮಾಫ್ì ಮಾಡಿರುವುದಲ್ಲ ಎಂಬ ಸಂಗತಿ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ದೃಢಪಟ್ಟಿದೆ. ಪ್ರಜ್ವಲ್‌ ಅವರದ್ದು ಎನ್ನಲಾದ ವೀಡಿಯೋ ಪ್ರಕರಣದ ಸಂಬಂಧ ಎಸ್‌ಐಟಿ ಅಧಿಕಾರಿಗಳು ಸುದೀರ್ಘ‌ ತನಿಖೆ ನಡೆಸಿದ್ದು, ಅಂತಿಮ ಹಂತದಲ್ಲಿದೆ. ಮುಂದಿನ 2 ವಾರದೊಳಗೆ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸುವ ಸಾಧ್ಯತೆಗಳಿವೆ. ತನಿಖೆ ವೇಳೆ ಪತ್ತೆಯಾಗಿರುವ ಮಾಜಿ ಸಂಸದರ ವಿರುದ್ಧದ ಸಾಕ್ಷ್ಯವನ್ನೂ ಚಾರ್ಜ್‌ ಶೀಟ್‌ನಲ್ಲಿ ತನಿಖಾಧಿಕಾರಿಗಳು ಉಲ್ಲೇಖಿಸಲಿದ್ದಾರೆ. ವೇಗವಾಗಿ ತನಿಖೆ ಮುಗಿಸಿ ಚಾರ್ಜ್‌ಶೀಟ್‌ ಸಿದ್ಧಪಡಿಸುವಂತೆ ಎಸ್‌ಐಟಿ ಮುಖ್ಯಸ್ಥರೂ ಸಹ ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅಶ್ಲೀಲ ವೀಡಿಯೋ ನಕಲಿಯೋ ಅಥವಾ ಅಸಲಿಯೋ ಎಂಬ ಬಗ್ಗೆ ಇಷ್ಟು ದಿನ ಇದ್ದ ಗೊಂದಲಕ್ಕೆ ಇದೀಗ ತೆರೆಬಿದ್ದಿದೆ. ಆದರೆ ಅಲ್ಲಿರುವ ವ್ಯಕ್ತಿಗಳು ಯಾರು ಎಂಬುದನ್ನು ತನಿಖೆ ನಡೆಸಿ ಪತ್ತೆಹಚ್ಚಬೇಕಾಗುತ್ತದೆ.

ರೇವಣ್ಣ ಜಾಮೀನು ರದ್ದು ಅರ್ಜಿ: ತೀರ್ಪು ಕಾದಿರಿಸಿದ ಹೈಕೋರ್ಟ್‌
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಅಪಹರಣ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ವಿಚಾರಣ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪನ್ನು ಕಾದಿರಿಸಿದೆ.

ವಿಚಾರಣ ನ್ಯಾಯಾಲಯ ಎಚ್‌.ಡಿ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಸುದೀರ್ಘ‌ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ತೀರ್ಪು ಕಾದಿರಿಸುವುದಾಗಿ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next