Advertisement

Prajwal Revanna ವಿರುದ್ಧ 3ನೇ ದೋಷಾರೋಪ ಪಟ್ಟಿ

12:27 AM Sep 14, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಭಾರೀ ವಿವಾದಕ್ಕೀಡಾಗಿದ್ದ ಹಾಸನದ ಅಶ್ಲೀಲ ವೀಡಿಯೋ ವೈರಲ್‌ ಪ್ರಕರಣದ ಸಂಬಂಧ ಜಿ.ಪಂ. ಮಾಜಿ ಸದಸ್ಯೆಯೊಬ್ಬರ ಮೇಲೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಜನಪ್ರತಿನಿಧಿಗಳ ವಿಶೇಷ ನ್ಯಾಯಾ ಲಯಕ್ಕೆ ಶುಕ್ರವಾರ 1,691 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ.

Advertisement

ದೋಷಾರೋಪ ಪಟ್ಟಿಯಲ್ಲಿ 120 ಸಾಕ್ಷಿ ಗಳನ್ನು ಉಲ್ಲೇಖೀಸಲಾಗಿದೆ. ಸಿಐಡಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಈ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಜ್ವಲ್‌ ವಿರುದ್ಧದ 2 ಪ್ರಕರಣಗಳಲ್ಲಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಈಗ 3ನೇ ಪ್ರಕರಣದಲ್ಲೂ ದೋಷಾರೋಪ ಪಟ್ಟಿ ಸಲ್ಲಿಸಿದಂತಾಗಿದೆ.

ದೋಷಾರೋಪ ಪಟ್ಟಿಯಲ್ಲಿ ಏನಿದೆ ?
ಪ್ರಜ್ವಲ್‌ 2019-2024ನೇ ಸಾಲಿನಲ್ಲಿ ಹಾಸನ ಸಂಸದರಾಗಿದ್ದ ವೇಳೆ ಹಾಸನ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಹಂಚಿಕೆಯಾಗಿದ್ದ ಹಾಸನದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಎಂ.ಪಿ. ಕ್ವಾರ್ಟರ್ಸ್‌ ಅನ್ನು ತನ್ನ ಗೃಹ ಕಚೇರಿಯಾಗಿ ಬಳಸುತ್ತಿದ್ದರು. ಆ ವೇಳೆ ದೂರುದಾರ ಸಂತ್ರಸ್ತೆಯು ಹಾಸನದ ಕ್ಷೇತ್ರವೊಂದರ ಜಿ.ಪಂ. ಸದಸ್ಯೆಯಾಗಿದ್ದರು. 2020ರ ಜನವರಿ-ಫೆಬ್ರವರಿ ಸಮಯದಲ್ಲಿ ಒಂದು ದಿನ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಸೀಟು ಕೊಡಿಸುವ ವಿಷಯಕ್ಕೆ ಪ್ರಜ್ವಲ್‌ ಅವರನ್ನು ಭೇಟಿ ಮಾಡಲು ಎಂ.ಪಿ. ಕ್ವಾರ್ಟರ್ಸ್‌ಗೆ ಸಂತ್ರಸ್ತೆ ಹೋಗಿದ್ದರು. ಅಲ್ಲಿದ್ದ ಇತರರು ಹೊರಟ ಬಳಿಕ ಪ್ರಜ್ವಲ್‌ ಸಂತ್ರಸ್ತೆಯ ಕೈ ಹಿಡಿದು ಎಳೆದು ಮೊದಲನೇ ಮಹಡಿಯ ಕೊಠಡಿಗೆ ಕರೆದೊಯ್ದಿದ್ದರು.

ರೂಂ ಬಾಗಿಲ ಚಿಲಕ ಹಾಕಿ ಬಲವಂತಪಡಿಸಿದ್ದರು. ಸಂತ್ರಸ್ತೆ ನಿರಾಕರಿಸಿದಾಗ “ನನ್ನ ಬಳಿ ಬಂದೂಕು ಇದೆ. ನಾನು ಹೇಳಿದಂತೆ ಕೇಳದಿದ್ದರೆ ನಿನ್ನ ಪತಿಯನ್ನು ಮುಗಿಸಿ ಬಿಡುತ್ತೇನೆ’ ಎಂದು ಕೊಲೆ ಬೆದರಿಕೆ ಹಾಕಿ ತಾನು ಹೇಳಿದಂತೆ ನಡೆದುಕೊಳ್ಳಬೇಕು ಎಂದಿದ್ದರು. ಸಂತ್ರಸ್ತೆ ಬೇಡವೆಂದು ಹೇಳಿ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೆ ತಮ್ಮ ಮೊಬೈಲ್‌ನಿಂದ ವೀಡಿಯೋ ಮಾಡಿದ್ದರು. ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿ ಅದನ್ನು ವೀಡಿಯೋ ರೆಕಾರ್ಡ್‌ ಮಾಡಿದ್ದರು.

ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್
ಅದಾದ 2 ದಿನಗಳ ಅನಂತರ ಸಂಜೆ ಸುಮಾರು 7.30ಕ್ಕೆ ಸಂತ್ರಸ್ತೆಗೆ ಕರೆ ಮಾಡಿದ ಪ್ರಜ್ವಲ್‌, ಎರಡು ದಿನದ ಹಿಂದೆ ಮಾಡಿದ್ದ ವೀಡಿಯೋ ಡಿಲೀಟ್‌ ಆಗಿರುವುದಿಲ್ಲ. ಈಗ ನೀನು ಎಂಪಿ ಕ್ವಾರ್ಟರ್ಸ್‌ಗೆ ಬರದೆ ಇದ್ದರೆ ವೀಡಿಯೋವನ್ನು ಬಹಿರಂಗ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಸಂತ್ರಸ್ತೆ ಹೆದರಿ ಕ್ವಾರ್ಟರ್ಸ್‌ಗೆ ಹೋದಾಗ ಮತ್ತೆ ಪ್ರಜ್ವಲ್‌ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. “ನಾನು ನಿನಗೆ ವಾಟ್ಸ್‌ಆ್ಯಪ್‌ ವೀಡಿಯೋ ಕರೆ ಮಾಡಿದಾಗೆಲ್ಲ ಕರೆ ಸ್ವೀಕರಿಸು, ನಾನು ಹೇಳಿದಂತೆ ವೀಡಿಯೋ ಕಾಲ್‌ನಲ್ಲಿ ನಡೆದುಕೊಳ್ಳಬೇಕು. ನನ್ನ ಮಾತನ್ನು ಕೇಳದೆ ಇದ್ದರೆ ನಿನ್ನ ಪತಿಗೆ ತೊಂದರೆ ಮಾಡುತ್ತೇನೆ’ ಎಂದು ಬೆದರಿಸಿದ್ದರು ಎಂದೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ದಸರಾ ದಿನವೂ ಅತ್ಯಾಚಾರ
2020ರ ಜೂನ್‌ನಲ್ಲಿ ಹೊಳೆನರಸೀಪುರದಲ್ಲಿರುವ ತನ್ನ ಮನೆಗೆ ಸಂತ್ರಸ್ತೆಯನ್ನು ಕರೆಸಿಕೊಂಡು ಮತ್ತೆ ಬಲಾತ್ಕಾರ ಮಾಡಿ ಮೊಬೈಲ್‌ನಲ್ಲಿ ಆ ದೃಶ್ಯ ಸೆರೆಹಿಡಿದಿದ್ದರು. ಸಂತ್ರಸ್ತೆ ಮನೆಗೆ ಬಂದಿರುವುದನ್ನು ಪ್ರಜ್ವಲ್‌ ಕಾರಿನ ಚಾಲಕ ಗಮನಿಸಿದ್ದ. ಈ ವಿಚಾರ ಯಾರಿಗಾದರೂ ಹೇಳಿದರೆ ವೀಡಿಯೋ ಬಹಿರಂಗಪಡಿಸಿ ತೊಂದರೆ ಕೊಡುವುದಾಗಿ ಪುನಃ ಬೆದರಿಸಿದ್ದರು. 2022ರ ಅ. 3ರಂದು ಬೇಲೂರಿನಲ್ಲಿ ನಡೆದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಪ್ರಜ್ವಲ್‌ ಭಾಗಿಯಾಗಿದ್ದರು. ಅಲ್ಲಿಂದ ಹೊರಟ ಬಳಿಕ ರಾತ್ರಿ ಸಂತ್ರಸ್ತೆಗೆ ಕರೆ ಮಾಡಿ ಕ್ವಾರ್ಟರ್ಸ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದರು. 2020ರ ಜನವರಿ-ಫೆಬ್ರವರಿಯಿಂದ 2023ರ ಡಿಸೆಂಬರ್‌ವರೆಗೆ ಹಲವಾರು ಬಾರಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಎಲ್ಲ ಅಂಶಗಳೂ ಸಾಕ್ಷ್ಯಾಧಾರಗಳಿಂದ ಕಂಡುಬಂದಿದೆ ಎಂದು ಎಸ್‌ಐಟಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಿದೆ.

ಮೊಬೈಲ್‌ ಕಣ್ಮರೆ
ಸಂತ್ರಸ್ತೆಯ ವೀಡಿಯೋ ಹಾಗೂ ಫೋಟೋಗಳು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳ್ಳಲು ಆರೋಪಿ ಪ್ರಜ್ವಲ್‌ ಕಾರಣರಾಗಿರುವುದು ತನಿಖೆಯ ಕಾಲದಲ್ಲಿ ಸಂಗ್ರಹಿಸಿದ ತಾಂತ್ರಿಕ ವರದಿಗಳು, ತಜ್ಞರ ಪರೀûಾ ವರದಿಗಳಿಂದ ಪತ್ತೆಯಾಗಿದೆ. ಸಂತ್ರಸ್ತೆಯ ಅಶ್ಲೀಲ ಫೋಟೋ, ವೀಡಿಯೋ ಸೆರೆಹಿಡಿದಿದ್ದ ಮುಖ್ಯ ಸಾಕ್ಷ್ಯವಾದ ಸ್ಮಾರ್ಟ್‌ ಮೊಬೈಲ್‌ ಫೋನ್‌ ಬಗ್ಗೆ ಪ್ರಜ್ವಲ್‌ ರೇವಣ್ಣ ತನಿಖೆ ವೇಳೆ ಯಾವುದೇ ಮಾಹಿತಿ ನೀಡದೆ ಮರೆಮಾಚಿದ್ದರು.

ಪೀಡಿಸುತ್ತಿದ್ದ ಪ್ರಜ್ವಲ್‌!
ಪ್ರಜ್ವಲ್‌ ತನ್ನ ಸೋಷಿಯಲ್‌ ಮೀಡಿಯಾ ನಿರ್ವಹಿಸುತ್ತಿದ್ದ ಮಂಜು ನಾಥ್‌, ಭವ್ಯಶ್ರೀ ಹಾಗೂ ಸಂತೋಷ್‌ ಹೆಸರಿನಲ್ಲಿ ಬಳಸುತ್ತಿದ್ದ ಮೊಬೈಲ್‌ ನಂಬರ್‌ಗಳಿಂದ ಪದೇ ಪದೆ ಸಂತ್ರಸ್ತೆಗೆ ವಾಟ್ಸ್‌ಆ್ಯಪ್‌ ವೀಡಿಯೋ ಕರೆಗಳನ್ನು ಮಾಡುತ್ತಿದ್ದರು. ಆಕೆ ಒಬ್ಬರೇ ಇರುವುದನ್ನು ಖಾತ್ರಿಪಡಿಸಿಕೊಂಡು ಅಶ್ಲೀಲವಾಗಿ ಮಾತನಾಡುತ್ತಿದ್ದರು. ಸಂತ್ರಸ್ತೆ ಆತಂಕದಿಂದ ಆರೋಪಿ ಹೇಳಿದಂತೆ ನಡೆದುಕೊಂಡಿದ್ದರು. ಆ ವೇಳೆ ಸಂತ್ರಸ್ತೆಗೆ ತಿಳಿಯದಂತೆ ಆಕೆಯ ಅಶ್ಲೀಲ ಫೋಟೋಗಳ ಸ್ಕ್ರೀನ್‌ ಶಾಟ್‌ ಗಳನ್ನು ತೆಗೆದುಕೊಂಡಿದ್ದರು. ಪ್ರಜ್ವಲ್‌ ಆ ವೇಳೆ ತನ್ನ ಗುರುತನ್ನು ಮರೆಮಾಚುವ ಉದ್ದೇಶದಿಂದ ತನ್ನ ಪೂರ್ಣ ಮುಖ ಕಾಣಿಸದಂತೆ ಗುರುತು ಮರೆಮಾಚಿ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವುದನ್ನು ಚಾಳಿ ಮಾಡಿಕೊಂಡಿದ್ದರು. ತಾನು ಕರೆ ಮಾಡುವ ಯಾವ ನಂಬರ್‌ಗಳನ್ನೂ ಸೇವ್‌ ಮಾಡಬಾರದು ಎಂದು ಬೆದರಿಸಿ ದ್ದರು ಎಂದು ಆರೋಪಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.