ಬೆಂಗಳೂರು: ಸಣ್ಣ ವ್ಯಾಪಾರಿಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಆಗ್ರಹಿಸಿದ್ದ ಕಾಂಗ್ರೆಸ್‌ನ ಶಿವಲಿಂಗೇಗೌಡ, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಯ ಮೇಲೆ ಸರಕಾರ ಕಣ್ಣು ಬಿಡಲಿ ಎನ್ನುವ ಮೂಲಕ ವರ್ತಕರಿಗೆ ತೆರಿಗೆ ವಿಧಿಸುವಂತೆ ಸಲಹೆ ನೀಡಿದ್ದರು. ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗುಳಿದ ವಹಿವಾಟುಗಳ ಮೇಲೆ ಚರ್ಚೆ ನಡೆಯುತ್ತಿರುವಾಗ ಕ್ರಷರ್‌ಗಳನ್ನೂ ಜಿಎಸ್‌ಟಿ ಅಡಿ ತರಬೇಕೆಂದು ಜೆಡಿಎಸ್‌ನ ಎಚ್.ಡಿ.ರೇವಣ್ಣ ಆಗ್ರಹಿಸಿದರು.
ಕ್ರಷರನ್ನು ಜಿಎಸ್‌ಟಿ ವ್ಯಾಪ್ತಿಗೆೆ ಸೇರಿಸುವ ಬಗ್ಗೆ ಸಚಿವ ಎಚ್.ಕೆ. ಪಾಟೀಲ್ ತಮ್ಮ ಉತ್ತರದಲ್ಲಿ ತಿಳಿಸಿರಲಿಲ್ಲ. ಮತ್ತೆ ಸರಕಾರದ ಗಮನ ಸೆಳೆದ ರೇವಣ್ಣ, ರಾಜ್ಯ ಹೆದ್ದಾರಿ ಕಾಮಗಾರಿಗೆ ಕಲ್ಲು ಪೂರೈಸಿದ್ದಕ್ಕೆ ಬಿಲ್ ಕೊಡುವುದೇ ಇಲ್ಲ. ನಮ್ಮ ಜಿಲ್ಲೆಯಲ್ಲಿ ಕ್ರಷರ್ ಹಾವಳಿ ಜಾಸ್ತಿಯಾಗಿದೆ. ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದಾದರೆ ಸೇರಿಸಿ, ಲೂಟಿ ನಡೆಯುವುದಕ್ಕಾದರೆ ಬಿಟ್ಟು ಬಿಡಿ ಎಂದು ಒತ್ತಿ ಹೇಳಿದರು. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ರೇವಣ್ಣ ವಿರುದ್ಧ ಹರಿಹಾಯ್ದರು.
ರೇವಣ್ಣ ಪದೇಪದೆ ಕ್ರಷರ್ ಎನ್ನುತ್ತಿದ್ದಾರೆ. ನಂದೂ ಕ್ರಷರ್ ಇದೆ. ಅದಕ್ಕೇ ಹೇಳುತ್ತಿದ್ದಾರೆಂಬುದು ನನಗೂ ಗೊತ್ತಿದೆ. ಲೋಕೋಪಯೋಗಿ ಇಲಾಖೆಯವರು ಎಷ್ಟು ರಾಯಧನ ಸಂಗ್ರಹಿಸುತ್ತಾರೆ ಗೊತ್ತಿದೆಯೇ ಎಂದು ಪ್ರಶ್ನಿಸಿದರು. ರೇವಣ್ಣ ಮಾತನಾಡುತ್ತಾ, ನಾನೇನು ಕ್ರಷರ್ ಮಾಲಕನಲ್ಲ, ನಿಮಗಿರುವಷ್ಟು ಅನುಭವ ನನಗಿಲ್ಲ. ನಾವು ರೈತರ ಮಕ್ಕಳು ಎನ್ನುತ್ತಿದ್ದಂತೆ ನಂದೂ 1,500 ತೆಂಗಿನ ಗಿಡ ಇದೆ, ಕ್ರಷರೂ ಇದೆ ಎಂದು ಶಿವಲಿಂಗೇಗೌಡ ಪ್ರತ್ಯುತ್ತರ ನೀಡಿದರು.
ಇಷ್ಟಕ್ಕೇ ಸುಮ್ಮನಾಗದ ರೇವಣ್ಣ, ಕ್ರಷರ್‌ಗೆ ಎಷ್ಟು ಖರ್ಚು ಮಾಡಿದ್ದಾರೆ ಕೇಳಿ? ಡ್ರೋನ್ ಸರ್ವೇ ಮಾಡಬಾರದೇಕೆ ಎಂದು ಪ್ರಶ್ನಿಸಿದರು. ಸಿಟ್ಟಾದ ಶಿವಲಿಂಗೇಗೌಡ, ನೀವೆಷ್ಟು ಖರ್ಚು ಮಾಡಿದ್ದೀರಿ ಹೇಳಿ. ನನ್ನದಾದರೂ ಒಬ್ಬನ ಖರ್ಚು. ನಿಮಗೆ ಕುಟುಂಬದ 5 ಜನರ ಖರ್ಚಿದೆಯಲ್ಲ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಮತ್ತೆ ಮಾತಿಗಿಳಿದ ರೇವಣ್ಣ, ನೀವು ಪ್ರಾಮಾಣಿಕರೇ ಗೌಡರೇ, ನಿಮಗೆ ನಾನು ಹೇಳಿರಲೇ ಇಲ್ಲ. ಕ್ರಷರ್‌ಗಳ ಬಗ್ಗೆ ಮಾತನಾಡಿದ್ದೆ. ಹೇಳುವುದು ಹೇಳಿದ್ದೇನೆ. ಲೂಟಿ ಹೊಡೆಯಲು ಬಿಡುವುದಾದರೆ ಬಿಡಿ ಎನ್ನುತ್ತಾ ಎಚ್.ಕೆ. ಪಾಟೀಲರತ್ತ ತಿರುಗಿದರು. ಯಾಕಿಗೆ ಹೊಟ್ಟೆಕಿಚ್ಚು ಪಟ್ಟು ಸಾಯ್ತಿರ್ರೀ ಎಂದ ಶಿವಲಿಂಗೇಗೌಡರನ್ನು ಸಮಾಧಾನಪಡಿಸಿದ ಸಚಿವ ಪಾಟೀಲ್, ಕ್ರಷರ್‌ಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಚಿಂತಿಸುತ್ತೇವೆ ಎಂದು ಚರ್ಚೆಗೆ ತೆರೆ ಎಳೆದರು.