ಬೆಂಗಳೂರು: ತೀವ್ರ ಪೈಪೋಟಿಯ ನಡುವೆಯೂ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟಕ್ಕೆ ಸೇರಲಿರುವ ಶಾಸಕರ ಪಟ್ಟಿಯನ್ನು ಜೆಡಿಎಸ್ ಅಂತಿಮಗೊಳಿಸಿದ್ದು, ಬುಧವಾರ ಬೆಳಗ್ಗೆ ಪಟ್ಟಿ ಅಧಿಕೃತವಾಗಿ ಘೋಷಣೆಯಾಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಲು ಒಕ್ಕಲಿಗ ಮತಗಳೇ ಕಾರಣವಾಗಿರುವುದರಿಂದ ಹೆಚ್ಚು ಸಚಿವ ಸ್ಥಾನಗಳು ಬೇಕೆಂಬ ಬೇಡಿಕೆ ಈ ಸಮುದಾಯದ ಶಾಸಕರಿಂದ ಕೇಳಿ ಬಂದಿತ್ತು. ಆದರೆ, ಜೆಡಿಎಸ್ ವರಿಷ್ಠ ಎಚ್ .ಡಿ.ದೇವೇಗೌಡ ಮಾತ್ರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಸಂಪುಟದಲ್ಲಿ ಐದಕ್ಕಿಂತ ಹೆಚ್ಚು ಒಕ್ಕಲಿಗರು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದು, ಇದನ್ನು ಪಾಲಿಸುವಂತೆ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ. ಹೀಗಾಗಿ ಒಕ್ಕಲಿಗ ಸಮುದಾಯದಿಂದ ಎಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು ಬುಧವಾರ ಸಚಿವರಾಗುವುದು ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕೆ ಶಿರಾ ಶಾಸಕ ಸತ್ಯನಾರಾಯಣ ಮತ್ತು ಗುಬ್ಬಿ ಶ್ರೀನಿವಾಸ ಮಧ್ಯೆ ಪೈಪೋಟಿ ಇದ್ದು, ಬುಧವಾರ ಅಂತಿಮವಾಗಿ ಒಬ್ಬರ ಹೆಸರು ಘೋಷಣೆಯಾಗಲಿದೆ. ಆದರೆ, ಒಕ್ಕಲಿಗ ಕೋಟಾದಡಿ ಡಿ.ಸಿ.ತಮ್ಮಣ್ಣ, ಎ.ಟಿ.ರಾಮಸ್ವಾಮಿ ಮತ್ತು ಕೆ.ಶ್ರೀನಿವಾಸ ಗೌಡ ಸಹ ಸಂಪುಟ ಸೇರಲು ಅಂತಿಮ ಹಂತದ ಪ್ರಯತ್ನ ನಡೆಸುತ್ತಿದ್ದಾರೆ.
ದಲಿತ ಸಮುದಾಯದಿಂದ ಎಚ್. ಕೆ.ಕುಮಾರಸ್ವಾಮಿ ಅವರನ್ನು ಸಚಿವರನ್ನಾಗಿ ಮಾಡುವುದು ಬಹುತೇಕ ಖಚಿತ. ಹೀಗಾಗಿ, ಜೆಡಿಎಸ್‌ನ ಪಾಲುದಾರ ಪಕ್ಷವಾಗಿರುವ ಬಿಸ್‌ಪಿಯ ಮಹೇಶ್‌ಗೆ ಪ್ರಮುಖ ನಿಗಮ ಅಥವಾ ಮಂಡಳಿಯ ಅಧ್ಯಕ್ಷ ಸ್ಥಾನ ಕೊಡಿಸುವ ಭರವಸೆ ನೀಡಲಾಗಿದೆ ಎನ್ನಲಾಗಿದೆ. ಈ ಮಧ್ಯೆ ಪರಿಶಿಷ್ಟ ಪಂಗಡದಿಂದ ರಾಜಾ ವೆಂಕಟಪ್ಪ ನಾಯಕ ಅವರ ಹೆಸರು ಕೇಳಿ ಬರುತ್ತಿದೆ. ಆದರೆ, ಪರಿಶಿಷ್ಟ ಜಾತಿ ಅಥವಾ ಪಂಗಡದ ಪೈಕಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕು ಎಂದಾದರೆ ಎಚ್. ಕೆ.ಕುಮಾರಸ್ವಾಮಿ ಹೆಸರು ಅಂತಿಮ. ಎರಡೂ ಸಮುದಾಯಕ್ಕೆ ನೀಡಬೇಕು ಎಂದಾದರೆ ಆಗ ವೆಂಕಟಪ್ಪ ನಾಯಕ ಅವರಿಗೆ ಅವಕಾಶ ಸಿಗಬಹುದು.
ಹಿಂದುಳಿದ ವರ್ಗದಿಂದ ಬಂಡೆಪ್ಪ ಕಾಶೆಂಪೂರ ಹೆಸರು ಮುಂಚೂಣಿಯಲ್ಲಿದೆ. ಇನ್ನೊಂದೆಡೆ ವಿಧಾನ ಪರಿಷತ್ ಸದಸ್ಯ ಮನೋಹರ್ ಕೂಡ ಸಚಿವರಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರೂ ಕಾಶೆಂಪೂರ ಬಗ್ಗೆ ಒಲವು ವ್ಯಕ್ತಪಡಿಸಿರುವುದರಿಂದ ಅವರ ಹೆಸರೇ ಅಂತಿಮಗೊಳ್ಳಬಹುದು. ಲಿಂಗಾಯತ ಸಮುದಾಯದಿಂದ ವೆಂಕಟರಾವ್ ನಾಡಗೌಡ ಹೆಸರು ಅಂತಿಮಗೊಂಡಿದೆ. ಇದರಿಂದ ಕಾಶೆಂಪೂರ ಸೇರಿದಂತೆ ಹೈ.ಕರ್ನಾಟಕಕ್ಕೆ 2 ಸಚಿವ ಸ್ಥಾನ ನೀಡಿದಂತಾಗುತ್ತದೆ. ಫಾರೂಕ್‌ಗೆ ಸಚಿವ ಸ್ಥಾನ: ಅಲ್ಪಸಂಖ್ಯಾತ ಸಮುದಾಯದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಬಿ.ಎಂ.ಫಾರೂಕ್ ಸಚಿವರಾಗಿ ನೇಮಕಗೊಳ್ಳುವುದು ಖಚಿತವಾಗಿದೆ.
ಹೊರಟ್ಟಿ, ವಿಶ್ವನಾಥ್‌ಗೆ ಅನುಮಾನ
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಜೆಡಿಎಸ್ ಸೇರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್.ವಿಶ್ವನಾಥ್ ಮತ್ತು ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಅವಕಾಶ ಸಿಗುವುದು ಬಹುತೇಕ ಅನುಮಾನ. ಈ ಮಧ್ಯೆ, ವಿಶ್ವನಾಥ್ ಅವರನ್ನು ವಿಧಾನಸಭೆ ಉಪಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆಯಾದರೂ ವಿಶ್ವನಾಥ್ ನಯವಾಗಿಯೇ ಅದನ್ನು ತಿರಸ್ಕರಿಸಿದ್ದಾರೆ. ಅದೇ ರೀತಿ, ಹೊರಟ್ಟಿ ಅವರನ್ನು ವಿಧಾನ ಪರಿಷತ್ ಉಪಸಭಾಪತಿಯಾಗಿ ನೇಮಕ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ.
ಸಚಿವ ಸ್ಥಾನ ನೀಡಿದರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ. ಇಲ್ಲವಾದಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ. ನಾನು ಸಂಪುಟ
ದರ್ಜೆ ಸಚಿವನಾಗಿದ್ದವನು. ಹೀಗಾಗಿ ಉಪಸಭಾಪತಿ ಹುದ್ದೆ ಬಗ್ಗೆ ನನಗೆ ಆಸಕ್ತಿ ಇಲ್ಲ.
● ಎಚ್.ವಿಶ್ವನಾಥ್, ಶಾಸಕ