ವಿಜಯಪುರ: ಜಿಲ್ಲೆಯ ಇಂಡಿ ಹಾಗೂ ವಿಜಯಪುರ ತಾಲೂಕುಗಳ ರೈತರಿಗೆ ವರದಾನವಾಗಲಿರುವ ಮಹತ್ವಾಕಾಂಕ್ಷೆಯ ಹೊರ್ತಿ ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಪರಿಸರ ತಜ್ಞರ ಸಮಿತಿ ನಿರಪೇಕ್ಷಣಾ ಪತ್ರ ನೀಡಲು ಪರಿಸರ ಇಲಾಖೆಗೆ ಶಿಫಾರಸ್ಸು ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ, ಇಂಡಿ, ಚಡಚಣ ಸೇರಿದಂತೆ ಮಳೆ ಆಶ್ರಿತ ಭಾಗಗಳ ರೈತರಿಗೆ ಸದರಿ ಯೋಜನೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಿದ್ದು, ಜಿಲ್ಲೆಯ ಮಹತ್ವದ ನೀರಾವರಿ ಯೋಜನೆಗಳಲ್ಲಿ ಒಂದಾಗಲಿದೆ ಎಂದು ವಿವರಿಸಿದ್ದಾರೆ.
ಈ ಯೋಜನೆ ಅನುಷ್ಠಾನದ ಸಂಕಲ್ಪದೊಂದಿಗೆ ಪರಿಸರ ಇಲಾಖೆಯ ನಿರಪೇಕ್ಷಣಾ ಪತ್ರ ಪಡೆದುಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದರಿ ಪ್ರಸ್ತಾವನೆಯನ್ನು ರಾಜ್ಯ ಮಟ್ಟದ ಪರಿಸರ ತಜ್ಞರ ಸಮಿತಿಯಲ್ಲಿ ಯೋಜನೆ ಕುರಿತು ಸಮಗ್ರ ಚರ್ಚೆಯ ಬಳಿಕ ಪರಿಸರ ತಜ್ಞರ ಸಮಿತಿಯು ಪರಿಸರ ತೀರುವಳಿ ನೀಡಲು ಶಿಫಾರಸ್ಸು ಮಾಡಿದೆ. ಈ ನಿರ್ಧಾರ ಸಮಸ್ತ ಇಂಡಿ, ವಿಜಯಪುರ ತಾಲೂಕಿನ ರೈತರಿಗೆ ಅತ್ಯಂತ ಸಂಭ್ರಮ ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಇ.ಡಿ ತನಿಖೆಯ ಭಯ? ಶಿವಸೇನಾದ ಮತ್ತೊಬ್ಬ ಹಿರಿಯ ನಾಯಕ ಅರ್ಜುನ್ ಶಿಂಧೆ ಪಾಳಯಕ್ಕೆ
ಸದರಿ ಯೋಜನೆಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಮತ್ತು ವಿಜಯಪುರ ತಾಲೂಕಿನ ಸುಮಾರು 56 ಹಳ್ಳಿಗಳ ಒಟ್ಟಾರೆ 49,730 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಇಂಡಿ ತಾಲೂಕಿನ 28,000 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ವಿವರಿಸಿದ್ದಾರೆ.