ಕೋಲಾರ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಜಿಲ್ಲೆಯಲ್ಲಿ ಶೇ.100 ಸಾಧನೆಯ ಶಾಲೆಗಳ ಸಂಖ್ಯೆ 113 ರಿಂದ 135ಕ್ಕೇರಿದೆ ಮತ್ತು ಪೂರಕ ಪರೀಕ್ಷೆಯಲ್ಲೂ ಶೇ. 76.40 ಫಲಿತಾಂಶ ಬಂದಿದೆ ಎಂದು ಡಿಡಿಪಿಐ ಕೆ. ಎಂ.ಜಯರಾಮರೆಡ್ಡಿ ತಿಳಿಸಿದರು.
ಈ ಸಂಬಂಧ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಮರುಮೌಲ್ಯಮಾಪನದಲ್ಲಿ 150 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕೋಲಾರ ತಾಲೂಕಿನಲ್ಲಿ 45, ಬಂಗಾರಪೇಟೆ 18, ಕೆಜಿಎಫ್ 17, ಮಾಲೂರು 33, ಶ್ರೀನಿವಾಸಪುರ 17, ಮುಳಬಾಗಿಲು ತಾಲೂಕಿನಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಣಾತ್ಮಕತೆಗೆ ಒತ್ತು ನೀಡಿದ್ದು, ಈ ಬಾರಿ ಜಿಲ್ಲೆಯಲ್ಲಿ 1239 ಮಂದಿ ಎ+ ಶ್ರೇಣಿ ಹಾಗೂ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಒಟ್ಟು ಶೇ.80.63 ಎಂದು ತಿಳಿಸಿದರು.
ಕಳೆದ 2019ರಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 12927 ಇತ್ತು. ಆದರೆ, ಈ ಬಾರಿ 14160ಕ್ಕೇರಿದೆ ಎಂದು ತಿಳಿಸಿದರು. ಅನೇಕ ಸರ್ಕಾರಿ ಶಾಲೆಗಳ ಶಿಕ್ಷಕರೂ ಆನ್‌ಲೈನ್ ಪಾಠಮಾಡುತ್ತಿದ್ದಾರೆ. ರಜೆ ನಡುವೆಯೂಅನೇಕರು ಮಕ್ಕಳಪರ ಕಾಳಜಿ ವಹಿಸಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಮಕ್ಕಳಿಗೆ ಗೃಹಪಾಠ ನೀಡಿ, ಅವರಿಂದ ಉತ್ತರ ಪಡೆದು ಮೌಲ್ಯಮಾಪನ ಮಾಡಿ ಕಲಿಸುತ್ತಿದ್ದಾರೆಂದರು.
ವಿದ್ಯಾಗಮ ಮುಂದುವರಿಕೆ ಸರ್ಕಾರದ ತೀರ್ಮಾನಕ್ಕೆ ಬಿಟ್ಟಿದ್ದು,ಕೋವಿಡ್ ಶೀಘ್ರ ನಾಶವಾಗಿಶಾಲೆಗಳು ಮತ್ತೆ ಪುನಾರಂಭವಾಗಬೇಕು ಎಂಬುದೇ ಇಲಾಖೆಯ ಆಶಯ ಎಂದರು. ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್, ಇದಾದ ನಂತರ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲೂ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಶೇ.76.40 ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ಪರೀಕ್ಷೆಗೆ ಕುಳಿತ 1801 ವಿದ್ಯಾರ್ಥಿಗಳ ಪೈಕಿ 1376 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ 1061 ಬಾಲಕರ ಪೈಕಿ773 ಮಂದಿ ಹಾಗೂ ಪರೀಕ್ಷೆಗೆ ಕುಳಿತಿದ್ದ 740 ಬಾಲಕಿಯರ ಪೈಕಿ 603 ಮಂದಿ ಉತ್ತೀರ್ಣರಾಗಿದ್ದಾರೆಂದರು. ಪೂರಕ ಪರೀಕ್ಷಾ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಿಗೆ ಶೇ.70.28 ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳಿಗೆ 79.07, ಅನುದಾನ ರಹಿತ ಶಾಲೆಗಳಿಗೆ ಶೇ.87.07 ಫಲಿತಾಂಶ ಬಂದಿದೆ ಎಂದು ತಿಳಿಸಿದರು.
ಒಟ್ಟಾರೆ ಫಲಿತಾಂಶ ಶೇ.1 ಹೆಚ್ಚಳ : ಮರು ಮೌಲ್ಯಮಾಪನದ ನಂತರ ರಾಜ್ಯದಲ್ಲೇ6ನೇ ಸ್ಥಾನ ಪಡೆದಿದ್ದ ಜಿಲ್ಲೆಯ ಒಟ್ಟಾರೆ ಫಲಿತಾಂಶವೂ ಶೇ.1 ಹೆಚ್ಚಳವಾಗಿದೆ. ಜತೆಗೆ ನಗರದ ಬೆಂಗಳೂರು ಮಾಂಟೋಸ್ಸರಿ ಶಾಲೆ ವಿದ್ಯಾರ್ಥಿನಿ ಸಾಯಿಮೇಘನಾ625ಕ್ಕೆ625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹಿರಿಮೆಯೂ ಸೇರಿಕೊಂಡಿದೆ. ಮರು ಮೌಲ್ಯಮಾಪನದಲ್ಲಿ11 ಸರ್ಕಾರಿ,3 ಅನುದಾನಿತ ಹಾಗೂ 8 ಅನುದಾನ ರಹಿತ ಶಾಲೆಗಳು ಶೇ.100 ಸಾಧನೆ ಗೌರವಕ್ಕೆ ಪಾತ್ರವಾಗಿವೆ ಎಂದು ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು