ಬೆಂಗಳೂರು: ಯಲಹಂಕ ಸಮೀಪದ ರೇವಾ ವಿಶ್ವವಿದ್ಯಾಲಯ ಹಚ್ಚ ಹಸಿರಿನ ನಿತ್ಯ ತೋರಣದ ವಿದ್ಯಾ ದೇವಾಲಯ ಎಂದು ನಾದಬ್ರಹ್ಮ ಹಂಸಲೇಖ ಅವರು ಬಣ್ಣಿಸಿದರು. ಸೋಮವಾರ ಅವರು ರೇವಾ ವಿವಿ ಕ್ಯಾಂಪಸ್‌ನಲ್ಲಿ ನಿರ್ಮಿಸಿರುವ ನೂತನ ಮಾಧ್ಯಮ ಕೇಂದ್ರ(ಮೀಡಿಯಾ ಸೆಂಟರ್)ವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ನಗರ ಒತ್ತಡದ ಮತ್ತು ಸಂಚಾರ ದಟ್ಟಣೆಯ ಕಿಷ್ಕಿಂದೆ ಎಂದು ಹೆಸರಾಗುತ್ತಿದೆ. ಅಂತಹ ಆಲೋಚನೆಗಳಿಂದ ಹೊರ ಬರಲು ಬೆಂಗಳೂರಿನಿಂದ ಕೊಂಚ ಹೊರ ವಲಯದಲ್ಲಿ ರೇವಾ ವಿದ್ಯಾ ದೇವಾಲಯವಿದೆ. ಇದರ ಮಾಧ್ಯಮ ಕೇಂದ್ರದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿರುವುದು ನನ್ನ ಪುಣ್ಯ. ಈ ವಿಶ್ವವಿದ್ಯಾಲಯದ ಬಗ್ಗೆ ಕೇಳಿದ್ದೆ. ಆದರೆ ಇವತ್ತು ನೋಡುವಂತಹ ಭಾಗ್ಯ ಲಭಿಸಿದೆ.
ಒಳಗೆ ಬಂದು ನೋಡಿದಾಗ ಇದೊಂದು ಹಚ್ಚ ಹಸಿರಿನ ನಿತ್ಯ ತೋರಣವೆಂದು ಭಾಸವಾಯಿತು. ಇಲ್ಲಿ ಮಾಧ್ಯಮ ಕೇಂದ್ರವನ್ನು ವೃತ್ತಿಪರವಾಗಿ ನಿರ್ಮಾಣ ಮಾಡಲಾಗಿದೆ. ಈ ಕೇಂದ್ರ ಉದ್ಘಾಟನೆಗೊಳ್ಳುವ ಮೂಲಕ ರೇವಾ ವಿವಿ ಕುಲಾಧಿಪತಿ ಡಾ. ಪಿ. ಶ್ಯಾಮರಾಜು ಅವರ ಕನಸು ನನಸಾಗಿದೆ ಎಂದರು.
ಇವತ್ತು ಸುದ್ದಿಯಿಂದ ಜೀವನ. ಆದರೆ ಶಿಕ್ಷಕರಾದ ನಾವು ಸುದ್ದಿವೊಳಗಿನ ವೈಬ್ರೆಂಟ್‌ನಿಂದ ಜೀವನ ಎನ್ನುತ್ತೇವೆ. ಪ್ರತಿಯೊಂದು ವೈಬ್ರೆಷನ್ ಒಂದು ಮೆಸೇಜ್ ಇದ್ದಂತೆ. ಇವತ್ತಿನಿಂದ ಮೀಡಿಯಾ ಸೆಂಟರ್‌ನಲ್ಲಿ ಪಾಸಿಟಿವ್ ವೈಬ್ರೆಷನ್ ಪ್ರಾರಂಭವಾಗಿದೆ.
ಈ ವಿಶ್ವದ್ಯಾಲಯದಲ್ಲಿ ಪ್ರತಿವರ್ಷ ಐದು ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೊರ ಹೋಗುತ್ತಿದ್ದಾರೆ. ಅವರೆಲ್ಲ ಈ ನಾಡಿಗೆ ಕೊಡುಗೆಯನ್ನು ನೀಡಲಿ ಎಂದು ಹಾರೈಸಿದರು. ಈ ಸ್ಟುಡಿಯೋದಲ್ಲಿ ಪ್ರದರ್ಶನ ಕಲೆಗೆ ಒಂದು ಪ್ರತ್ಯೇಕ ಭಾಗ ತೆರೆಯಲಾಗಿದೆ.
ಜೊತೆಗೆ ಇದಕ್ಕೆ ಪ್ರತಿಭಾನ್ವಿತ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವಾಗ ನಾನು ಇವರ ಜೊತೆ ಕೈಜೋಡಿಸುತ್ತೇನೆ ಎಂದು ಅವರು ತಿಳಿಸಿದರು.
ರೇವಾ ವಿಶ್ವದ್ಯಾಲಯದ ಕುಲಾಧಿಪತಿ ಡಾ. ಪಿ. ಶ್ಯಾಮರಾಜು, ಉಪಕುಲಪತಿಗಳಾದ ಡಾ. ಎಸ್. ವೈ ಕುಲಕರ್ಣಿ, ಕುಲಸಚಿವರಾದ ಡಾ. ಧನಂಜಯ್, ವಿಭಾಗದ ಮುಖ್ಯಸ್ಥೆ ಡಾ. ಬೀನಾ ಜಿ., ಡಾ. ಪಾಯಲ್ ದತ್ತ ಚೌಧರಿ ಮತ್ತು ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.