Advertisement

ನಮ್ಮ ಜಿರಳೆಗಳನ್ನು ವಾಪಸ್‌ ಕೊಡಿ! ಹರಾಜು ಸಂಸ್ಥೆಗೆ ನಾಸಾ ಸೂಚನೆ

06:43 PM Jun 24, 2022 | Team Udayavani |

ಬೋಸ್ಟನ್‌: “ನಮ್ಮ ಜಿರಳೆಗಳು ಮತ್ತು ಚಂದ್ರನ ಧೂಳನ್ನು ನಮಗೆ ವಾಪಸ್‌ ಕೊಡಿ…’

Advertisement

ಹೀಗೆಂದು ಕೇಳಿರುವುದು ಯಾರು ಗೊತ್ತಾ? ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ! ಬೋಸ್ಟನ್‌ ಮೂಲದ ಆರ್‌ಆರ್‌ ಹರಾಜು ಸಂಸ್ಥೆಗೆ ನಾಸಾ ಇಂಥದ್ದೊಂದು ಮನವಿ ಮಾಡಿದೆ. ಅಷ್ಟೇ ಅಲ್ಲ, 1969ರ ಅಪೋಲೋ 11 ಯೋಜನೆಯ ವೇಳೆ ಚಂದ್ರನ ನೆಲದಿಂದ ತರಲಾದ ಧೂಳಿನ ಕಣಗಳ ಮಾರಾಟವನ್ನು ಕೂಡಲೇ ನಿಲ್ಲಿಸುವಂತೆಯೂ ಸಂಸ್ಥೆಗೆ ನಾಸಾ ಸೂಚಿಸಿದೆ.

ವಿಷಯ ಇಷ್ಟೆ: 1969ರ ಚಂದ್ರಯಾನದ ವೇಳೆ ನಾಸಾವು ಚಂದ್ರನ ಮೇಲ್ಮೈನಿಂದ 21.3 ಕೆ.ಜಿ. ಕಲ್ಲು ಹಾಗೂ ಧೂಳನ್ನು ತಂದಿತ್ತು. ನಂತರ ಆ ಧೂಳನ್ನು ಜಿರಳೆಗಳು, ಕೀಟಗಳು, ಮೀನುಗಳಿಗೆ ತಿನ್ನಿಸಲಾಗಿತ್ತು.

ಚಂದ್ರನಲ್ಲಿನ ಕಲ್ಲು ಹಾಗೂ ಧೂಳಿನ ಕಣಗಳಲ್ಲಿ ಜೀವಿಗಳ ಪ್ರಾಣಕ್ಕೆ ಅಪಾಯ ಉಂಟುಮಾಡುವಂಥ ರೋಗಕಾರಕ ಅಂಶಗಳಿವೆಯೇ ಎಂಬುದನ್ನು ಪರೀಕ್ಷಿಸುವುದು ಇದರ ಉದ್ದೇಶವಾಗಿತ್ತು.

ಧೂಳನ್ನು ಸೇವಿಸಿದ್ದ 3 ಜಿರಳೆಗಳನ್ನು ಮಿನ್ನೆಸೋಟಾ ವಿವಿಗೆ ತಂದು ಪ್ರಯೋಗ ನಡೆಸಲಾಗಿತ್ತು. ಅದನ್ನು ಅಧ್ಯಯನ ನಡೆಸಿದ್ದ ವಿಜ್ಞಾನಿ ಮೇರಿಯನ್‌ ಬ್ರೂಕ್ಸ್‌, “ಚಂದ್ರನ ಮಣ್ಣಲ್ಲಿ ರೋಗಕಾರಕ ಅಂಶ ಕಂಡುಬಂದಿಲ್ಲ’ ಎಂದಿದ್ದರು. ಅವರು 2007ರಲ್ಲಿ ನಿಧನರಾದ ನಂತರ ಆ ಮಾದರಿಗಳನ್ನು ನಾಸಾಗೆ ಹಿಂದಿರುಗಿಸಿರಲಿಲ್ಲ. ಬದಲಿಗೆ, ಬ್ರೂಕ್ಸ್‌ ಅವರ ಪುತ್ರಿ ಆ ಜಿರಳೆಗಳು ಮತ್ತು ಧೂಳನ್ನು ಹರಾಜು ಏಜೆನ್ಸಿಗೆ ಮಾರಾಟ ಮಾಡಿದ್ದರು.

Advertisement

ಹರಾಜು ಮಾಡುವಂತಿಲ್ಲ:
40 ಮಿ.ಗ್ರಾಂ. ಧೂಳಿನ ಕಣ ಮತ್ತು 3 ಜಿರಳೆಗಳ ಕಳೇಬರವನ್ನು 4 ಲಕ್ಷ ಡಾಲರ್‌ ಮೊತ್ತಕ್ಕೆ ಹರಾಜು ಹಾಕಲು ಆರ್‌ಆರ್‌ ಏಜೆನ್ಸಿ ಸಿದ್ಧತೆ ನಡೆಸಿದ್ದು, ಇದನ್ನು ತಡೆಯಲು ನಾಸಾ ವಕೀಲರ ಮೂಲಕ ನೋಟಿಸ್‌ ಕಳುಹಿಸಿದೆ. ಈ ಮಾದರಿಗಳು ನಾಸಾಗೆ ಸೇರಿದ್ದು, ಯಾವುದೇ ವ್ಯಕ್ತಿ, ವಿವಿ ಅಥವಾ ಸಂಸ್ಥೆಗೆ ಅದನ್ನು ಮಾರಲು ಅನುಮತಿಯಿಲ್ಲ.

ಕೂಡಲೇ ಹರಾಜು ಸ್ಥಗಿತಗೊಳಿಸಿ, ಮಾದರಿಗಳನ್ನು ನಮಗೆ ವಾಪಸ್‌ ಕೊಡಿ ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next