ಬೆಳಗಾವಿ: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯನ್ನು ಸ್ವಾಗತಿಸಿ ವಿವಿಧ ರೈತ ಸಂಘಟನೆಗಳು ಶುಕ್ರವಾರ ನಗರದಲ್ಲಿ ವಿಜಯೋತ್ಸವ ಆಚರಿಸಿದವು.
ನಗರದ ಚನ್ನಮ್ಮ ವೃತ್ತದಲ್ಲಿ ರೈತ ಪರ ಘೋಷಣೆ ಕೂಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ರೈತರು, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು
ಸ್ವಾಗತಿಸಿದರು. ಇದು ರೈತರ ನಿರಂತರ ಹೋರಾಟಕ್ಕೆ ಸಂದ ದೊಡ್ಡ ಜಯ ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ ಅವರು, ನವೆಂಬರ್ 19 ರೈತರು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಪ್ರಧಾನಿ ಮೋದಿ ಅವರು ವಾಪಸ್ ಪಡೆದು ರೈತರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಈ ಜಯ ಹುತಾತ್ಮ ರೈತರು ಮತ್ತು ಅವರ ಕುಟುಂಬಸ್ಥರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆದ ಸುದೀರ್ಘ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ವಿಜಯೋತ್ಸವದಲ್ಲಿ ಕರ್ನಾಟಕ ರೈತ ಸಂಘದ ಮುಖಂಡರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ, ಪ್ರಕಾಶ ನಾಯಕ, ಜಿ ಎಲ್ ಕುಲಕರ್ಣಿ, ನಾಗೇಶ ಸಾತೇರಿ ಮೊದಲಾದವರು ಪಾಲ್ಗೊಂಡಿದ್ದರು.