Advertisement

ಅರಬ್‌ ದೇಶಗಳಿಂದ ಕರಾವಳಿಗೆ ವಾಪಸು; 6,533 ಮಂದಿಯಲ್ಲಿ 435 ಪ್ರಯಾಣಿಕರಿಗೆ ಕೋವಿಡ್ ದೃಢ

01:23 PM Jul 24, 2020 | mahesh |

ಮಹಾನಗರ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಪ್ರಿಲ್‌ನಲ್ಲಿ ದೈನಂದಿನ ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಂಡ ಬಳಿಕ ಮಧ್ಯ ಪ್ರಾಚ್ಯದ ಅರಬ್‌ ದೇಶಗಳಲ್ಲಿ ಸಿಲುಕಿದ್ದ ರಾಜ್ಯದ ಕರಾವಳಿ ಕನ್ನಡಿಗರನ್ನು ವಾಪಸ್‌ ಕರೆ ತರುವ ಕೇಂದ್ರ ಸರಕಾರದ “ವಂದೇ ಭಾರತ್‌ ಮಿಶನ್‌’ ಮತ್ತು ಖಾಸಗಿ ವೈಮಾನಿಕ ಸೇವೆಯಡಿ ಸುಮಾರು ಎರಡೂವರೆ ತಿಂಗಳಲ್ಲಿ ಮಂಗಳೂರಿಗೆ 40 ವಿಮಾನಗಳು ಬಂದಿದ್ದು, ಒಟ್ಟು 6,533 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ.

Advertisement

ಸೌದಿ ಅರೇಬಿಯಾ, ದುಬಾೖ, ಕುವೈಟ್‌ ಸಹಿತ ಹಲವು ಕೊಲ್ಲಿ ದೇಶಗಳಿಂದ ಮೇ 12ರಿಂದ ಜು. 22ರ ತನಕ ಸಾವಿರಾರು ಮಂದಿ ತಾಯ್ನಾಡಿಗೆ ವಾಪಾಸಾಗಿದ್ದಾರೆ. ಈ ರೀತಿ ವಿದೇಶದಿಂದ ಬಂದ ಈ ಪ್ರಯಾಣಿಕರ ಪೈಕಿ (ಜು. 16ರ ತನಕ) 435 ಮಂದಿಯ ವರದಿ ಕೋವಿಡ್ ಪಾಸಿಟಿವ್‌ ಬಂದಿದೆ. ಜು. 21, 22ರಂದು ಮಸ್ಕತ್‌ನಿಂದ ಆಗಮಿಸಿದ 2 ವಿಮಾನಗಳಲ್ಲಿ ಬಂದಿಳಿದ 286 ಪ್ರಯಾಣಿಕರ ವರದಿ ಇನ್ನಷ್ಟೇ ಬರಬೇಕಾಗಿದೆ.

ಮೇ 12ರಿಂದ ಜುಲೈ 22ರ ವರೆಗಿನ ಎರಡೂವರೆ ತಿಂಗಳುಗಳ ಅವಧಿಯಲ್ಲಿ ಮಂಗಳೂರಿಗೆ ದುಬಾೖ, ಸೌದಿ ಮತ್ತು ಮಸ್ಕತ್‌ಗಳಿಂದ ಗರಿಷ್ಠ ಸಂಖ್ಯೆಯ ಕನ್ನಡಿಗರು ತಾಯ್ನಾಡಿಗೆ ಮರಳಿ ಬಂದಿದ್ದಾರೆ. ದುಬಾೖಯಿಂದ 17 ವಿಮಾನಗಳು ಬಂದರೆ, ಸೌದಿ ಅರೇಬಿಯಾ, ಮಸ್ಕತ್‌ನಿಂದ ತಲಾ 7, ಕುವೈಟ್‌, ದೋಹಾ- ಕತಾರ್‌, ಶಾರ್ಜಾಗಳಿಂದ ತಲಾ 2, ಅಬುಧಾಬಿ, ದಮಾಮ್‌, ಬಹ್ರೈನ್‌ ದೇಶಗಳಿಂದ ತಲಾ 1 ವಿಮಾನ ಬಂದಿದೆ. ಈ ಎಲ್ಲ ವಿಮಾನಗಳಲ್ಲಿ ಬಂದ ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಪ್ರಯಾಣಿಕರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ, ನೆರೆಯ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಕೇರಳದ ಕಾಸರಗೋಡಿನವರೂ ಇದ್ದರು. ಪ್ರಾರಂಭಿಕ ಹಂತದಲ್ಲಿ ಬೇರೆ ಜಿಲ್ಲೆಯವರನ್ನೂ ಮಂಗಳೂರಿನಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿದ್ದರೂ ಕ್ರಮೇಣ ದಕ್ಷಿಣ ಕನ್ನಡದವರನ್ನು ಹೊರತುಪಡಿಸಿ ಇತರ ಜಿಲ್ಲೆಗಳ ಪ್ರಯಾಣಿಕರನ್ನು ಅವರವರ ಜಿಲ್ಲೆಗಳಲ್ಲಿಯೇ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು. ವಿಮಾನದಿಂದ ಇಳಿಯುವಾಗಲೇ ಪಾಸಿಟಿವ್‌ ಬಂದವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು.

2 ವಿಮಾನಗಳಲ್ಲಿ ಯಾರೂ ಪಾಸಿಟಿವ್‌ ಇಲ್ಲ
ದುಬಾೖಯಿಂದ ಮೇ 20ರಂದು ಬಂದ 63 ಜನರ ಪೈಕಿ ಮತ್ತು ಜೂನ್‌ 18ರಂದು ಬಂದ 9 ಮಂದಿಯ ಪೈಕಿ ಯಾರೊಬ್ಬರಲ್ಲೂ ಪಾಸಿಟಿವ್‌ ಲಕ್ಷಣಗಳಿರಲಿಲ್ಲ.  ಪ್ರಾರಂಭದಲ್ಲಿ ಜಿಲ್ಲೆಗೆ ವಿದೇಶದಿಂದ ಬಂದವರಲ್ಲಿ ಮಾತ್ರ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೂ ಕ್ರಮೇಣ ಮತ್ತು ಇತ್ತೀಚಿನ ದಿನಗಳಲ್ಲಿ ಐಎಲ್‌ಐ ಮತ್ತು ಸಾರಿ ಪ್ರಕರಣಗಳು ಹಾಗೂ ಪ್ರಾಥಮಿಕ ಸಂಪರ್ಕದ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಬಹಳಷ್ಟು ಪಾಸಿಟಿವ್‌ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದ ಪರಿಸ್ಥಿತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next