ಬೆಂಗಳೂರು: ನೆರೆ ಪರಿಹಾರ ವಿತರಣೆ ವಿಳಂಬ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕಾರಣ ಕೇಳಿ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ ಜಾರಿ ಮಾಡಿದ್ದ ನೋಟಿಸ್ ಹಿಂಪಡೆಯಬೇಕು ಎಂದು ಶ್ರೀಶೈಲ ಮಠದ 1008 ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ನೆರೆ ಸಂತ್ರಸ್ತರ ಪರವಾಗಿ ದನಿ ಎತ್ತಿದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಿರುವುದು ಪಕ್ಷಕ್ಕೆ ಹಾನಿಯಾಗಲಿದೆ. ಯತ್ನಾಳ್ ಅವರಿಗೆ ಪಂಚ ಪೀಠದ ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದು, ಅವರು ದನಿ ಎತ್ತಿದ್ದರಿಂದ ಏನಾದರೂ ತೊಂದರೆಯಾಗಿದ್ದರೆ ಮನ್ನಿಸಿ, ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದು, ಪತ್ರದ ವಿವರ ಹೀಗಿದೆ:
ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದ ಪ್ರಮುಖ ಬಿಜೆಪಿ ನಾಯಕರಾಗಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಭೀಕರ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿದ ಜನರ ಪರ ಅವರು ದನಿ ಎತ್ತಿದ್ದಾರೆ. ಅವರ ಮಾತಿನಲ್ಲಿ ಯಾವುದೇ ಅನ್ಯ ಹಿತಾಸಕ್ತಿಯಿಲ್ಲ. ಪಕ್ಷದ ಹಿರಿಯ ನಾಯಕರಾದ ಅವರು ನೇರ, ನಿಷ್ಠುರವಾಗಿ ಮಾತನಾಡುವವರಾಗಿದ್ದಾರೆ.
ನೆರೆಯಿಂದ ಬೀದಿಗೆ ಬಿದ್ದ ಸ್ಥಿತಿಯಲ್ಲಿರುವ ಬಡವರು, ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳ ಪರ ಅವರು ದನಿ ಎತ್ತಿದ್ದಾರೆ. ರಾಜ್ಯದ ಅರ್ಧ ಭಾಗದ ಜನ ಸಂಕಷ್ಟದಲ್ಲಿರುವಾಗ ಅವರು ಸಕಾಲದಲ್ಲಿ ದನಿ ಎತ್ತಿದ್ದಾರೆ. ಹಾಗಾಗಿ ದಯಮಾಡಿ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ ನೀಡಿರುವ ನೋಟಿಸ್ ಹಿಂಪಡೆಯಬೇಕೆಂದು ಮನವಿ ಮಾಡಲಾಗುತ್ತಿದ್ದು, ಆದಷ್ಟು ಶೀಘ್ರವಾಗಿ ಹಿಂಪಡೆಯುತ್ತೀರೆಂದು ಆಶಿಸುತ್ತೇವೆ. ಪಂಚ ಪೀಠದ ಸ್ವಾಮೀಜಿಗಳು ಸೇರಿ ನಾವೆಲ್ಲಾ ರಾಜ್ಯದ ಜನರ ಪರವಾಗಿ ದನಿ ಎತ್ತಿದ ಯತ್ನಾಳ್ ಅವರನ್ನು ಬೆಂಬಲಿಸುತ್ತೇವೆ.
ಒಂದೊಮ್ಮೆ ಪಕ್ಷ ಯತ್ನಾಳ್ ಅವರ ವಿಚಾರದಲ್ಲಿ ಏನಾದರೂ ಕ್ರಮ ಕೈಗೊಂಡರೆ ರಾಜ್ಯದ ನೆರೆ ಸಂತ್ರಸ್ತರು ಯತ್ನಾಳ್ ಅವರ ದನಿ, ನಿಲುವಿನ ಪರ ನಿಲ್ಲಲಿದ್ದಾರೆ. ಈ ರೀತಿಯ ನೋಟಿಸ್ ನೀಡುವುದು ಪಕ್ಷಕ್ಕೆ ಹಾನಿಯಾಗುವುದೇ ಹೊರತು ಯತ್ನಾಳ್ ಅವರಿಗೆ ಯಾವುದೇ ಹಾನಿಯಾಗದು. ಅವರು ದನಿ ಎತ್ತಿದ್ದರಿಂದ ಏನಾದರೂ ತೊಂದರೆಯಾಗಿದ್ದರೆ ಮನ್ನಿಸಿ ಎಂದು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.