Advertisement

Mangaluru ಕೃಷಿ ಕಾಯ್ದೆ ವಾಪಸು ದುರಂತ ತೀರ್ಮಾನ

11:11 PM Sep 03, 2023 | Team Udayavani |

ಮಂಗಳೂರು: ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸು ಪಡೆದಿರುವುದು ಈ ದೇಶ ಸ್ವಾತಂತ್ರ್ಯಾನಂತರದ ಅತೀ ದೊಡ್ಡ ದುರಂತದ ತೀರ್ಮಾನಗಳಲ್ಲಿ ಒಂದಾಗಿದೆ ಎಂದು ಲೇಖಕ, ಸಂಶೋಧಕ ಡಾ| ಆನಂದ ರಂಗನಾಥನ್‌ ಅಭಿಪ್ರಾಯಪಟ್ಟರು.

Advertisement

ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ರವಿವಾರ ಸ್ವಚ್ಛ ಮಂಗಳೂರು ಫೌಂಡೇಶನ್‌ ಮತ್ತು ಜ| ಕೆ.ಎಸ್‌. ಹೆಗ್ಡೆ ಚಾರಿಟೆಬಲ್‌ ಫೌಂಡೇಶನ್‌ ವತಿಯಿಂದ ಆಯೋಜಿಸಲಾದ ಜಿಜ್ಞಾಸಾ ಸನಾತನ ಚಿಂತನ ಗಂಗಾ ಸರಣಿ ಉಪನ್ಯಾಸ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾರತ 2047ರತ್ತ- ಅವಕಾಶಗಳ ತಾಣ ಎನ್ನುವ ವಿಷಯದ ಕುರಿತು ಉಪನ್ಯಾನ ನೀಡಿದರು.

ಕೃಷಿ ಕಾಯ್ದೆ ರೈತರ ಪರವಾಗಿತ್ತು. ಆದರೆ ರಾಜಕೀಯ ಕಾರಣಕ್ಕಾಗಿಯೇ ಉತ್ತಮ ಕಾಯ್ದೆಯೊಂದು ಬಲಿಯಾಯಿತು. ಕಾಂಗ್ರೆಸ್‌ ಸರಕಾರ ಪ್ರಣಾಳಿಕೆಯಲ್ಲಿಯೂ ಕೃಷಿ ಕಾಯ್ದೆಯ ಜಾರಿಗೊಳಿಸುವ ಪ್ರಸ್ತಾವವಿತ್ತು. ದೇಶದಲ್ಲಿ ಕಾಯ್ದೆಯನ್ನು ಬೆಂಬಲಿಸುವ ರೈತರು ಸಾಕಷ್ಟು ಮಂದಿ ಇದ್ದರೂ, ಅವರ್ಯಾರೂ, ಕಾಯ್ದೆ ಪರವಾಗಿ ರಸ್ತೆಗಿಳಿದದ್ದನ್ನು ಕಾಣಲೇ ಇಲ್ಲ. ಸುಪ್ರೀಂ ಕೋರ್ಟ್‌ ಕೂಡಾ ಮನವರಿಕೆ ಮಾಡುವುದರಲ್ಲಿ ವಿಫಲವಾಯಿತು ಎಂದರು.

ಭಾರತ ಸದ್ಯ ಅವಕಾಶಗಳ ನೆಲವಾಗಿ ಉಳಿದಿಲ್ಲ, 30 ವರ್ಷಗಳ ಹಿಂದೆ ಅವಕಾಶಗಳ ನೆಲವಾಗಿತ್ತು, ಈಗ ಅವಕಾಶಗಳನ್ನು ಕಳೆದುಕೊಂಡ ನೆಲವಾಗಿದೆ ಎಂದರು. ಇನ್ನಾದರೂ ಇರುವ ಅವಕಾಶಗಳನ್ನು ಬಳಸಿಕೊಳ್ಳದಿದ್ದರೆ ನಮ್ಮ ಭವಿಷ್ಯ ಇನ್ನಷ್ಟು ಮಾರಕವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಪ್ರವಾಸೋದ್ಯಮಕ್ಕೆ ನಮಲ್ಲಿ ವಿಪುಲವಾದ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ನದಿಗಳನ್ನು ಜೋಡಿಸುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾದ ನಾವು ರೈಲಿನಲ್ಲಿ ನೀರಿನ ಸಾಗಾಟಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದೇವೆ ಎಂದರು.

Advertisement

ರಾಮಕೃಷ್ಣ ಮಠ ಮಂಗಳೂರು ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ ಅವರು ಆಶೀರ್ವಚನ ನೀಡಿ, ವಿವಿಧ ವಿಚಾರಗಳಲ್ಲಿ ವಿಶ್ವಕ್ಕೆ ಭಾರತ ನೀಡಿರುವ ಕೊಡುಗೆ ಅವಿಸ್ಮರಣೀಯವಾದುದು. ಅನಾದಿ ಕಾಲದಿಂದಲೂ ಸಾಕಷ್ಟು ಉತ್ತಮ ವಿಚಾರಗಳನ್ನ ಹೊಂದಿದ್ದು, ಬಹುತೇಕ ದಾಖಲೆಯಾಗದೇ ಹೋಗಿದೆ. ಕೆಲವು ವಿಚಾರಗಳನ್ನು ಮುಂದಿನ ತಲೆಮಾರಿಗೆ ಕಲಿಸಿಕೊಡುವಲ್ಲಿ ವಿಫಲವಾಗಿದ್ದೇವೆ. ಅದರೂ ದೇಶ ವಿವೇಕಾನಂದರ ಚಿಂತನೆಯಂತೆ ವಿಶ್ವದಲ್ಲೇ ಗುರುವಿನ ಸ್ಥಾನ ಪಡೆಯುವತ್ತ ಮುನ್ನಡೆಯುತ್ತಿದೆ ಎಂದರು.

ನಿಟ್ಟೆ (ಡೀಮ್ಡ್ ಟುಬಿ) ಯುನಿವರ್ಸಿಟಿ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಆನಂದ್‌ ರಂಗನಾಥನ್‌ ಅವರ ಕೃತಿ “ಹಿಂದೂಸ್‌ ಇನ್‌ ಹಿಂದೂ ರಾಷ್ಟ್ರ’ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮ ಸಂಚಾಲಕ ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು. ಸಹ ಸಂಚಾಲಕ, ಪ್ರೊ| ಧನೇಶ್‌ ಕುಮಾರ್‌ ವಂದಿಸಿದರು. ಐಶ್ವರ್ಯ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next