Advertisement

ಜಿಲ್ಲಾ ಮಾಹಿತಿ ಕೇಂದ್ರದ ಸಾರಥಿ ಮಹಾಲಿಂಗ ನಾಯ್ಕ್ ಸೇವೆಯಿಂದ ನಿವೃತ್ತಿ

04:10 PM May 31, 2019 | Team Udayavani |

ಬದಿಯಡ್ಕ: ಕಾಸರಗೋಡು ಜಿಲ್ಲಾ ಮಾಹಿತಿ ಕೇಂದ್ರದ ಸಾರಥಿಯಾಗಿ ಜನಪರ ವ್ಯಕ್ತಿತ್ವ ಮೆರೆದ, ಕನ್ನಡಿಗ ಸಿಬ್ಬಂದಿ ಮಹಾಲಿಂಗ ನಾಯ್ಕ್ ಪಿ. ಸೇವೆಯಿಂದ ನಿವೃತ್ತರಾಗಿದ್ದಾರೆ.

Advertisement

ಕಳೆದ 11 ವರ್ಷಗಳಿಂದ ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ವಾಹನ ಚಾಲಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಶಾಲಾ ಕಲಿಕೆಯ ನಂತರ ಆಟೋಚಾಲಕ, ಟಾಕ್ಸಿ ಚಾಲಕ, ಬಸ್ ಕಂಡೆಕ್ಟರ್ ಇತ್ಯಾದಿ ಉದ್ಯೋಗದಲ್ಲಿ ಅವರು ತೊಡಗಿ  ಕೊಂಡಿದ್ದರು. 2003ರಲ್ಲಿ ಪಿಲಾಂಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕೇತರ ಸಿಬ್ಬಂದಿಯಾಗಿ ಕರ್ತವ್ಯಕ್ಕೆ ಸೇರಿದ್ದರು. 2008 ಏ.28ರಂದು ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ವಾಹನ ಚಾಲಕರಾಗಿಕರ್ತವ್ಯ ಆರಂಭಿಸಿದ್ದರು.

ಬದಿಯಡ್ಕ ಬಳಿಯ ಕಾಡಮನೆ ಪೆರ್ಮುಂಡ ನಿವಾಸಿಯಾಗಿರುವ ಮಹಾಲಿಂಗನಾಯ್ಕ್ ಅವರು ತಮ್ಮೂರಲ್ಲಿ ಬಾಬು ನಾಯ್ಕ್ ಎಂದು ಪ್ರಸಿದ್ಧರು. ಎಲ್ಲರಿಗೂ ಬೇಕಾದವರಾಗಿ ಜನಪರರರಾಗಿ ಬದುಕುತ್ತಿರುವುದು ಅವರ ದೊಡ್ಡ ಗುಣ.

ವಾಹನ ಚಾಲಕ ಎಂಬ ಕಾರಣಕ್ಕೆ ಆ ಉದ್ಯೋಗಕ್ಕಷ್ಟೇ ಸೀಮಿತರಾಗದ ಮಹಾಲಿಂಗ ನಾಯ್ಕ್ ಅವರು ಕಚೇರಿಯ ಇತರ ಸಣ್ಣ ಪುಟ್ಟ ಜವಾಬ್ದಾರಿಗಳನ್ನೂ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದವರು. ಅಧಿಕಾರಿಗಳನ್ನು ಕ್ಲಪ್ತ ಸಮಯಕ್ಕೆ ತಿಳಿಸಿದ ಜಾಗಗಳಿಗೆ ತಲಪಿಸುವ ಇತ್ಯಾದಿ ಚಟುವಟಿಕೆಗಳಲ್ಲೂ ಪ್ರಾಮಾಣಿಕತೆ ಮೆರೆದವರು. ಸೇವೆಯ ಅವಧಿಯಲ್ಲಿಒಮ್ಮೆಯೂ ವಾಹನ ಅಪಘಾತ, ವಾಹನಕ್ಕೆ ತಾಂತ್ರಿಕ ಸಮಸ್ಯೆಗಳು ಇತ್ಯಾದಿ ಸಂಭವಿಸದಂತೆ ಬಹು ಕಾಳಜಿಯಿಂದ ಸೇವೆ ಸಲ್ಲಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಹಿರಿಯ ಶ್ರೇಣಿಯ (ಸೀನಿಯರ್ ಗ್ರೇಡ್) ಸಿಬ್ಬಂದಿಯಾಗಿ ಬಡ್ತಿ ಪಡೆದು ಅವರು ನಿವೃತ್ತರಾಗಿದ್ದಾರೆ.

ಬೀಳ್ಕೊಡುಗೆ
ಜಿಲ್ಲಾ ಮಾಹಿತಿ ಕೇಂದ್ರದ ಸಾರಥಿ ಎಂದೇ ಪ್ರಸಿದ್ಧರಾಗಿದ್ದ, ವಾಹನ ಚಾಲಕ ಮಹಾಲಿಂಗ ನಾಯ್ಕ್ ಪಿ. ಶುಕ್ರವಾರ ತಮ್ಮ ಔದ್ಯೋಗಿಕ ಸೇವೆಯಿಂದ ನಿವೃತ್ತರಾದರು. ಅವರಿಗೆ ಜಿಲ್ಲಾ ಮಾಹಿತಿ ಕೇಂದ್ರ ವತಿಯಿಂದ ಶುಕ್ರವಾರ ಬೀಳ್ಕೊಡುಗೆ ನಡೆಯಿತು.


ಸಾರ್ವಜನಿಕ ಸಂಪರ್ಕ ಇಲಾಖೆ ಉತ್ತರವಲಯ ನಿರ್ದೇಶಕ ಕೆ.ಪಿ.ಅಬ್ದುಲ್ ಖಾದರ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಹಾಲಿಂಗನಾಯ್ಕ್ ಮತ್ತು ಅವರ ಪತ್ನಿ ಲಕ್ಷ್ಮಿ ಅವರನ್ನು ಅಭಿನಂದಿಸಿದರು. ಒಂದು ಇಲಾಖೆಯಲ್ಲಿ ಸೇವೆಯುದ್ದಕ್ಕೂ ಪ್ರಾಮಾಣಿಕತೆಯಿಂದ ದುಡಿದು, ಬಡ್ತಿಯನ್ನೂ ಸಾಧಿಸಿ, ಉತ್ತಮ ಹೆಸರು ಉಳಿಸಿಕೊಂಡು ನಿವೃತ್ತರಾಗುವುದು ಸಾರ್ಥಕ ಲಕ್ಷಣ ಎಂದವರು ಅಭಿಪ್ರಾಯಪಟ್ಟರು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿತಿ ಕೇಂದ್ರ ಅಧಿಕಾರಿ ಮಧು ಸೂದನನ್ ಎಂ. ಅವರು ಮತನಾಡಿ ನಿಯಮಿತ ಸಿಬ್ಬಂದಿಯನ್ನು ಹೊಂದಿರುವ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸಹಜವಾಗಿಯೇ ಸೇವೆಯಿಂದ ನಿವೃತ್ತರಾಗುವವರ ಸಂಖ್ಯೆಯೂ ಕಡಿಮೆಯಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತೆ ವಲಯದಲ್ಲಿ ಮಾಹಿತಿ ಕೇಂದ್ರದ ವ್ಯಕ್ತಿಗತ ಸಮಾರಂಭಗಳು ಮಹತ್ವ ಪಡೆಯುತ್ತವೆ. ಇಲ್ಲಿ ಸೇವೆಯಿಂದ ನಿವೃತ್ತರಾಗುವವರ ಬೀಳ್ಕೊಡುಗೆಯೂ ಮಹತ್ವ ಪಡೆಯುತ್ತದೆ ಎಂದು ಹೇಳಿದರು.

ಕನ್ನಡ ಮಾಹಿತಿ ಸಹಾಯಕ ವೀಜಿ ಕಾಸರಗೋಡು ಅವರು ಮಾತನಾಡಿ ಮಹಾಲಿಂಗನಾಯ್ಕ್ ಸ್ವಭಾವತಃ ಒಬ್ಬ ಶ್ರಮಜೀವಿ. ಆಟೋ, ಟ್ಯಾಕ್ಸಿ, ಬಸ್ ಚಾಲಕರಾಗಿ, ಕಂಡೆಕ್ಟರ್ ಆಗಿ ದುಡಿದ ಅವರು, ನಂತರ ಶಾಲೆಯೊಂದರಲ್ಲಿ ಶಿಕ್ಷಕೇತರ ಸಿಬ್ಬಂದಿಯಾಗಿದ್ದು, ತದನಂತರ ಮಾಹಿತಿ ಕೇಂದ್ರದ ಸಿಬಂದಿಯಾದವರು. ಹಂತಹಂತವಾಗಿ ಪಡೆದ ಉನ್ನತಿ ಅವರ ಅನುಭವದ ಹಿನ್ನೆಲೆಯಿಂದ ಲಭಿಸಿದ್ದು ಎಂದರು.

ಕಣ್ಣೂರು ಜಿಲ್ಲಧಿಕಾರಿ ಕಚೇರಿ ಸಿಬ್ಬಂದಿ ಸುಜೇಶ್, ಇಲಾಖೆಯ ಛಾಯಾಗ್ರಾಹಕ ಅಖಿಲೇಶ್ ನಗುಮುಗಂ, ಸಿಬ್ಬಂದಿಗಳಾದ ರೇಣುಕಾ, ಮಾಲತಿ, ಸುರೇಶ್ ಬಾಬು, ಕೃಷ್ಣನ್, ಉಪಸಂಪಾದಕಿ ಶಾನಿ ಕೆ.ನಾಯರ್, ಮಾಹಿತಿ ಸಹಾಯಕರಾದ ಗ್ರೀಷ್ಮಾ ದಾಮೋದರನ್, ಶ್ರೀಷ್ಮಾ, ಮಹಾಲಿಂಗ ನಾಯ್ಕ್ ಅವರ ಪತ್ನಿ ಲಕ್ಷ್ಮಿ, ಪುತ್ರ ರಕ್ಷಿತ್ ಎಂ.ಎಲ್.  ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next