Advertisement
“ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್ ಫಾರ್ಮ್ ನ ಉತ್ತುಂಗದಲ್ಲಿದ್ದಾರೆ. ಈಗಾಗಲೇ ಈ ಪಂದ್ಯಾವಳಿಯಲ್ಲಿ 3 ಶತಕ ಬಾರಿಸಿದ್ದಾರೆ. ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳುವುದಾಗಿ ಘೋಷಿಸಿದ್ದಾರೆ. ಆದರೆ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಅವರ ಮನ ಒಲಿಸುವುದು ಬಹಳ ಕಷ್ಟ. ಅವರು ಕ್ರಿಕೆಟ್‌ನಿಂದ ದೂರ ಸರಿಯುವುದು ಬೇಸರದ ಸಂಗತಿ. ಆದರೆ ಡಿ ಕಾಕ್ ಗೌರವಯುತ ಹಾಗೂ ಸ್ಮರಣೀಯ ವಿದಾಯ ಬಯಸುತ್ತಿದ್ದಾರೆ. ಬಹುಶಃ ಇದಕ್ಕೆ ವಿಶ್ವಕಪ್ ಪಂದ್ಯಾವಳಿಯೇ ಅತ್ಯಂತ ಸೂಕ್ತ ಎಂಬುದನ್ನು ಅವರು ಮೊದಲೇ ನಿರ್ಧರಿಸಿ ಆಗಿದೆ’ ಎಂಬುದಾಗಿ ಅವರೊಂದಿಗೆ ಪ್ರಚಂಡ ಜತೆಯಾಟ ನಡೆಸಿದ ಕ್ಲಾಸೆನ್ ಅಭಿಪ್ರಾಯಪಟ್ಟರು.
ಡಿ ಕಾಕ್ ನಿವೃತ್ತಿ ನಿರ್ಧಾರದ ಬಗ್ಗೆ ನ್ಯೂಜಿಲ್ಯಾಂಡ್‌ನ ಮಾಜಿ ವೇಗಿ ಶೇನ್ ಬಾಂಡ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಫಾರ್ಮ್ನಲ್ಲಿರುವಾಗಲೇ ಅವರು ಏಕದಿನದಿಂದ ದೂರ ಸರಿಯುವ ನಿರ್ಧಾರಕ್ಕೆ ಬರಬಾರದಿತ್ತು ಎಂದಿದ್ದಾರೆ.
“ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರ. ಬಾಂಗ್ಲಾ ವಿರುದ್ಧ ಅವರು ಪರಿಪೂರ್ಣ ಪ್ರದರ್ಶನ ನೀಡಿದರು. ಬೇಸರವೆಂದರೆ ಅವರಿಗೆ 30 ವರ್ಷ ಮಾತ್ರ. ಇದಕ್ಕೂ ಮಿಗಿಲಾಗಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಇಂಥ ಹೊತ್ತಿನಲ್ಲಿ ಅವರು ಏಕದಿನಕ್ಕೆ ವಿದಾಯ ಹೇಳುತ್ತಿರುವುದು ಸರಿಯಲ್ಲ…’ ಎಂಬುದಾಗಿ ಶೇನ್ ಬಾಂಡ್ ಹೇಳಿದರು. 400 ರನ್ ಸಾಧಕ
ಕ್ವಿಂಟನ್ ಡಿಕಾಕ್ ಈ ವಿಶ್ವಕಪ್‌ನಲ್ಲಿ 400 ರನ್ ಗಡಿ ದಾಟಿದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. ಐದೂ ಪಂದ್ಯಗಳನ್ನು ಆಡಿರುವ ಈ ಎಡಗೈ ಆಟಗಾರ 81.40ರ ಸರಾಸರಿಯಲ್ಲಿ 407 ರನ್ ಒಟ್ಟುಗೂಡಿಸಿದ್ದಾರೆ. ಸ್ಟ್ರೈಕ್‌ರೇಟ್ 114.97. ಶ್ರೀಲಂಕಾ, ಆಸ್ಟ್ರೇಲಿಯ ಮತ್ತು ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದಾರೆ.