ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಗರದ ಹೊರ ವಲಯದ ಕ್ವಾರಿಗಳಲ್ಲಿ ಸುರಿಯುತ್ತಿದ್ದು, ಕ್ವಾರಿಗಳ ಬಳಿ ಪ್ರತಿಭಟನೆ ಹಾಗೂ ಅತಿಕ್ರಮ ಪ್ರವೇಶ ನಿಯಂತ್ರಿಸಲು ಹಾಗೂ ಭದ್ರತೆಗಾಗಿ ನಿವೃತ್ತ ಯೋಧರನ್ನು ನೇಮಿಸಲಾಗಿದೆ.
ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ಘನತ್ಯಾಜ್ಯ ಸಂಸ್ಕರಣೆ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ನಗರದ ಹೊರ ವಲಯದಲ್ಲಿರುವ ಕ್ವಾರಿಗಳಿಗೆ ಸುರಿಯಲಾಗುತ್ತಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಕ್ವಾರಿಗಳಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರೊಂದಿಗೆ ರಾತ್ರಿ ವೇಳೆ ಸಿಬ್ಬಂದಿ ವೇಳೆ ದಾಳಿ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭದ್ರತೆಗಾಗಿ ನಿವೃತ್ತ ಯೋಧರನ್ನು ನೇಮಿಸಿಕೊಳ್ಳಲಾಗಿದೆ.
ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿ ಹಾಗೂ ಬಾಗಲೂರು ಬಳಿಯ ಕ್ವಾರಿಗಳ ಬಳಿ ಭದ್ರತೆಗಾಗಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಮೂಲಕ 20 ನಿವೃತ್ತ ಯೋಧರನ್ನು ಭದ್ರತೆಗಾಗಿ ನೇಮಿಸಿಕೊಳ್ಳಲಾಗಿದೆ.ಅವರಿಗೆ ಪಾಲಿಕೆಯ ವತಿಯಿಂದ ತರಬೇತಿ ನೀಡಲಾಗಿದ್ದು, ಸೋಮವಾರದಿಂದ ಮೂರು ಪಾಳಿಯಲ್ಲಿ ಯೋಧರು ಕ್ವಾರಿಗಳ ಬಳಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ.
ಮಾರ್ಷಲ್‌ಗಳ ಒಪ್ಪದ ಕೌನ್ಸಿಲ್: ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಹಾಗೂ ತ್ಯಾಜ್ಯ ವಿಂಗಡಣೆ ಮಾಡದವರಿಗೆ ದಂಡ ವಿಧಿಸುವ ಉದ್ದೇಶದಿಂದ ಪಾಲಿಕೆಯ ಘನತ್ಯಾಜ್ಯ ವಿಭಾಗ 208 ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲು ಯೋಜನೆ ರೂಪಿಸಿದೆ. ಆದರೆ, ಕೌನ್ಸಿಲ್‌ನಿಂದ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಕ್ವಾರಿಗಳ ಬಳಿ ಅತಿಕ್ರಮ ಪ್ರವೇಶ, ಅಕ್ರಮ ತ್ಯಾಜ್ಯ ವಿಲೇವಾರಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕಾಗಿ ನಿವೃತ್ತ ಸೇನಾ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಿಕೊಳ್ಳಲಾಗಿದೆ.
ಬಿಬಿಎಂಪಿ ವತಿಯಿಂದ ತ್ಯಾಜ್ಯ ಸರಿಯುವ ಕ್ವಾರಿಗಳ ಬಳಿ ಅತಿಕ್ರಮ ಪ್ರವೇಶ ಹಾಗೂ ಅಕ್ರಮ ತ್ಯಾಜ್ಯ ವಿಲೇವಾರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಮೂಲಕ 20 ನಿವೃತ್ತ ಯೋಧರನ್ನು ಭದ್ರತೆಗೆ ನೇಮಿಸಲಾಗಿದೆ. ವಾರ್ಡ್ ಮಟ್ಟದ ಮಾರ್ಷಲ್‌ಗಳಿಗೆ ಇದು ಸಂಬಂಧಿಸಿಲ್ಲ.
-ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ತ್ಯಾಜ್ಯವನ್ನು ತೆಗೆದುಕೊಂಡು ಹೋಗುವ ಕಾಂಪ್ಯಾಕ್ಟರ್ ಚಾಲಕರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸುತ್ತಿದ್ದಾರೆ. ಎಲ್ಲ ಸಂದರ್ಭಗಳಲ್ಲಿ ಪೊಲೀಸರು ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಾಲಿಕೆಯಿಂದಲೇ ಭದ್ರತೆಗೆ ನಿವೃತ್ತ ಯೋಧರನ್ನು ನೇಮಿಸಿಕೊಳ್ಳಲಾಗಿದೆ.
-ಸಫ್ರಾಜ್ ಖಾನ್, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ