Advertisement

ಮೈಸೂರು ನಿವೃತ್ತ ಪ್ರಾಂಶುಪಾಲ ಹತ್ಯೆ ಪ್ರಕರಣ : ಸುಪಾರಿ ಹಂತಕರು ಸೇರಿ ಐವರ ಬಂಧನ

10:40 AM Oct 29, 2020 | sudhir |

ಮೈಸೂರು: ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದಿದ್ದ ನಿವೃತ್ತ ಪ್ರಾಂಶುಪಾಲರ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಐವರನ್ನು ಬಂಧಿಸಿದ್ದಾರೆ.

Advertisement

ಮೈಸೂರು ತಾಲೂಕಿನ ಭೂಗತಗಳ್ಳಿ ನಿವಾಸಿಗಳಾದ ನಾಗೇಶ್‌ (37), ನಿರಂಜನ್‌ (22), ಮೈಸೂರಿನವರಾದ ಸಿದ್ದರಾಜು (54), ವಿಶ್ವನಾಥ್‌ (52) ಹಾಗೂ ಪರಶಿವ (55) ಬಂಧಿತರು.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಸ್ಕೃತ ಶಿಕ್ಷಕ ವಿಶ್ವನಾಥ್‌ ಎಂಬಾತ ಗಾಯಕಿ ಅನನ್ಯಭಟ್‌ ಅವರ ತಂದೆ ಎಂದು
ತಿಳಿದು ಬಂದಿದ್ದು, ವಿಶ್ವನಾಥ್‌ ಸಂಸ್ಕೃತ ಶಾಲೆಯೊಂದರ ಮುಖ್ಯಶಿಕ್ಷಕರಾಗಿದ್ದಾರೆ. ಉಳಿದಂತೆ ಬಂಧಿತರಾಗಿರುವ ನಾಲ್ವರ ಪೈಕಿ
ಇಬ್ಬರು ಶಿಕ್ಷಕರಾಗಿದ್ದರೆ, ಮತ್ತಿಬ್ಬರ ಪೈಕಿ ಒಬ್ಬರು ಖಾಸಗಿ ಬ್ಯಾಂಕ್‌ ಅಧಿಕಾರಿ, ಇನ್ನೋರ್ವ ಗಾರೆ ಕೆಲಸಗಾರನಾಗಿದ್ದಾನೆ.

ಇದನ್ನೂ ಓದಿ :ದೊಡ್ಡಬಳ್ಳಾಪುರ: ಮತದಾನದ ವೇಳೆ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ಘರ್ಷಣೆ

ಘಟನೆ ಹಿನ್ನೆಲೆ: ಸೆಪ್ಟೆಂಬರ್‌ 20ರಂದು ನಿವೇದಿತಾನಗರ ಬಡಾವಣೆ ನಿವಾಸಿ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ (67) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮನೆಯಲ್ಲಿ ಒಬ್ಬಂಟಿಯಾಗಿದ್ದ ನಿವೃತ್ತ ಪ್ರಾಂಶುಪಾಲರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿಪುರಂ ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

Advertisement

ಹತ್ಯೆಗೊಳಗಾದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ನಗರದ ನಿವೇದಿತಾನಗರ ದಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದು, ಹೆಂಡತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇವರಿಗೆ ಮಕ್ಕಳಿರದ ಕಾರಣ ಒಬ್ಬ ಬಾಲಕನನ್ನು ದತ್ತು ಪಡೆದು ಸಾಕುತ್ತಿದ್ದರು. ಸೆಪ್ಟೆಂಬರ್‌ 20ರಂದು ಒಂಟಿಯಾಗಿದ್ದ ಪರಶಿವಮೂರ್ತಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೋಲಿಸರಿಗೆ ಕೊಲೆ ಹಿನ್ನೆಲೆಯಲ್ಲಿ ಸುಪಾರಿ ಹಂತಕರ
ಕೈವಾಡವಿರುವುದು ಬೆಳಕಿಗೆ ಬಂದಿದೆ. ಬಳಿಕ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಕೊಲೆ ಮಾಡುವುದಕ್ಕೆ
ಸಿದ್ದರಾಜು ಹಾಗೂ ಪರಶಿವ ಸುಪಾರಿ ನೀಡಿರುವುದು ತಿಳಿದು ಬಂದಿದೆ.

ಕೊಲೆಯಾದ ಪರಶಿವಮೂರ್ತಿ ನಡೆಸುತ್ತಿದ್ದ ಸಂಸ್ಕೃತ ಪಾಠ ಶಾಲೆಯಲ್ಲಿನ ಶಿಕ್ಷಕರು ಪ್ರತಿ ತಿಂಗಳು ತಾವು ಪಡೆಯುವ
ವೇತನದಲ್ಲಿ ನಿರ್ದಿಷ್ಟ ಭಾಗವನ್ನು ತಮಗೆ ನೀಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಶಿಕ್ಷಕರಿಗೆ ಕಿರುಕುಳ, ಹಿಂಸೆ ಹಾಗೂ ಅವಾಚ್ಯ ವಾಗಿ ಬೈಯುತ್ತಿದ್ದರು ಎಂದು ಗೊತ್ತಾಗಿದೆ. ಈ ಕಾರಣಕ್ಕಾಗಿ ಸುಪಾರಿ ನೀಡಿ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಯಿತು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಪೋಲಿಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next