Advertisement

ನಿವೃತ್ತ ಪೊಲೀಸ್‌ ಅಧಿಕಾರಿ ಪುತ್ರ ಜೈಲಿಗೆ

04:33 PM May 13, 2019 | Lakshmi GovindaRaj |

ಬೆಂಗಳೂರು: “ಸಾರ್ವಜನಿಕ ಪ್ರದೇಶದಲ್ಲಿ ಸಿಗರೇಟ್‌ ಸೇದಿ, ಗಲಾಟೆ ಮಾಡಬೇಡಿ’ ಎಂದ ಪೊಲೀಸರಿಗೇ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ, ನಿವೃತ್ತ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌(ಎಎಸ್‌ಐ) ಪುತ್ರ ಪೊಲೀಸರ ಅತಿಥಿಯಾಗಿದ್ದಾರೆ.

Advertisement

ಖಾಸಗಿ ಕಂಪನಿ ಉದ್ಯೋಗಿ ಪಾಂಡು (32) ಬಂಧಿತ ಆರೋಪಿ. ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಆರೋಪ ಪ್ರಕರಣದಲ್ಲಿ ಪಾಂಡುನನ್ನು ಬಂಧಿಸಿರುವ ರಾಜಗೋಪಾಲನಗರ ಠಾಣೆ ಪೊಲೀಸರು, ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಾಗಿ ತಿಳಿಸಿದರು.

ಕೆಎಸ್‌ಆರ್‌ಪಿ ಎಎಸ್‌ಐ ಆಗಿ ನಿವೃತ್ತರಾಗಿದ್ದ ಆರೋಪಿ ಪಾಂಡು ತಂದೆ, ಹಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಶನಿವಾರ ರಾತ್ರಿ 7.30ರ ಸುಮಾರಿಗೆ ಪಿಎಸ್‌ಐ ಶಿವರಾಜು ಹಾಗೂ ಪ್ರೊಬೇಷನರಿ ಪಿಎಸ್‌ಐ ಬಸವರಾಜು, ರಾಜಗೋಪಾಲನಗರದಲ್ಲಿ ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದರು.

ಈ ವೇಳೆ ಸೂರ್ಯ ಬಾರ್‌ ಮುಂಭಾಗ ಪಾಂಡು ಸೇರಿ ಎಂಟು ಯುವಕರು ಸಿಗರೇಟ್‌ ಸೇದುತ್ತಾ ಗಲಾಟೆ ಮಾಡುತ್ತಿದ್ದರು. ಇದನ್ನು ಗಮನಿಸಿ ಅಲ್ಲಿಗೆ ತೆರಳಿದ ಪಿಎಸ್‌ಐಗಳು, ಸಾರ್ವಜನಿಕ ಪ್ರದೇಶದಲ್ಲಿ ಸಿಗರೇಟ್‌ ಸೇದಿಕೊಂಡು ಗಲಾಟೆ ಮಾಡಬೇಡಿ ಮನೆಗೆ ಹೋಗಿ ಎಂದಿದ್ದಾರೆ.

ಇದಕ್ಕೆ ಕೋಪಗೊಂಡ ಪಾಂಡು, ಇಲ್ಲಿ ನಿಂತರೆ ತಪ್ಪೇನು? ಸ್ನೇಹಿತರ ಜತೆ ಮಾತನಾಡುತ್ತಾ ನಿಂತಿದ್ದೇವೆ. ಅದನ್ನು ಕೇಳಲು ನೀವ್ಯಾರು? ನಿಮ್ಮ ಪಾಡಿಗೆ ನೀವು ಡ್ಯೂಟಿ ಮಾಡಿ, ನಮಗೆ ಹೇಳಲು ಬರಬೇಡಿ ಎಂದಿದ್ದಾನೆ. ಪೊಲೀಸರ ಜತೆ ಈ ರೀತಿ ನಡೆದುಕೊಳ್ಳಬಾರದು ಎಂದು ಪಿಎಸ್‌ಐ ತಿಳಿ ಹೇಳಿದರೂ ಕೇಳದ ಪಾಂಡು, “ನಾನು ಕೂಡ ಪೊಲೀಸ್‌ ಅಧಿಕಾರಿ ಮಗ.

Advertisement

ಪೊಲೀಸರ ಡ್ಯೂಟಿ ಎಂದರೆ ಏನು ಎಂದು ನನಗೂ ಗೊತ್ತಿದೆ ಅದನ್ನೆಲ್ಲಾ ನನಗೆ ಹೇಳಿಕೊಡಲು ಬರಬೇಡಿ. ಪೊಲೀಸರೇನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಾ? ನಿಮ್ಮದೆಲ್ಲಾ ನನಗೆ ಗೊತ್ತಿದೆ’ ಎಂದು ನಿಂದಿಸಿ ಅನುಚಿತವಾಗಿ ನಡೆದುಕೊಂಡಿದ್ದಾನೆ.

ಈ ವೇಳೆ ತನ್ನನ್ನು ವಶಕ್ಕೆ ಪಡೆಯಲು ಮುಂದಾದ ಪಿಎಸ್‌ಐಗಳಿಬ್ಬರನ್ನೂ ಪಾಂಡು ತಳ್ಳಾಡಿದ್ದಾನೆ. ಘಟನೆ ನಡೆದ ಸ್ಥಳದಿಂದ ಠಾಣೆಗೆ ಬಂದ ನಂತರ ತನ್ನ ವರಸೆ ಬದಲಿಸಿದ ಪಾಂಡು, ‘ತಪ್ಪಾಗಿದೆ, ಇದೊಂದು ಬಾರಿ ಕ್ಷಮಿಸಿಬಿಡಿ, ಇನ್ಮುಂದೆ ಹೀಗೆ ನಡೆದುಕೊಳ್ಳುವುದಿಲ್ಲ’ ಎಂದು ಗೋಳಾಡಿದ್ದಾನೆ.

ಪಿಎಸ್‌ಐ ಶಿವರಾಜ್‌ ನೀಡಿದ ದೂರಿನ ಅನ್ವಯ ಪಾಂಡುನನ್ನು ಬಂಧಿಸಲಾಗಿದೆ. ಎಂಬಿಎ ಪದವೀಧರನಾಗಿರುವ ಆರೋಪಿ ಪಾಂಡು, ಪ್ರತಿಷ್ಠಿತ ಖಾಸಗಿ ಕಂಪನಿ ಒಂದರ ಉದ್ಯೋಗಿಯಾಗಿದ್ದಾನೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next