Advertisement

ಆರ್ಥಿಕ ನಷ್ಟದ ವಿಟಿಯುದಲ್ಲಿ ನಿವೃತ್ತರೇ ನೌಕರರು!

07:00 AM Oct 13, 2017 | |

ಬೆಳಗಾವಿ: ರಾಜ್ಯದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆರ್ಥಿಕ ದಿವಾಳಿ ಎದುರಿಸುತ್ತಿರುವಾಗಲೇ ಸರಕಾರದ ಅನುಮತಿ ಪಡೆಯದೇ ನಿವೃತ್ತಿ ನೌಕರರ ಮರು ನೇಮಕ ಹಾಗೂ ಪ್ರಾಧ್ಯಾಪಕರನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡು ವಿವಾದಕ್ಕೆ ಸಿಲುಕಿದೆ.

Advertisement

ತಾಂತ್ರಿಕ ಶಿಕ್ಷಣದ ಅರಿವೇ ಇಲ್ಲದ ಸುಮಾರು 15 ಜನ ನಿವೃತ್ತ ನೌಕರರನ್ನೇ ಮರು ನೇಮಕ ಮಾಡಿಕೊಳ್ಳಲಾಗಿದೆ. ಜತೆಗೆ 25 ಜನ ಪ್ರಾಧ್ಯಾಪಕರನ್ನು ಬೋಧನೆ ಮಾಡುವ ಕೆಲಸ ಬಿಡಿಸಿ ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಿಕೊಂಡಿದೆ.

ಈಗಾಗಲೇ ಆದಾಯ ತೆರಿಗೆ ಇಲಾಖೆ ದಾಳಿಯಿಂದ ನಲುಗಿರುವ ವಿಟಿಯು 400 ಕೋಟಿ ರೂ. ದಂಡ ಪಾವತಿಸಬೇಕಿದೆ. ಆರ್ಥಿಕ ನಷ್ಟ ಅನುಭವಿಸಿರುವಾಗಲೇ 15 ಜನ ನಿವೃತ್ತರಾದವರ ಮರು ನೇಮಕ ಹಾಗೂ ವಿಶೇಷ ಅಧಿಕಾರಿಗಳ ನೇಮಕ ಮಾಡಿಕೊಂಡು ಸಂಬಳ ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಲಕ್ಷ ಲಕ್ಷ ಸಂಬಳ:
ನಿವೃತ್ತ ನೌಕರರಿಗೆ ಪ್ರತಿ ತಿಂಗಳು 5,42,542 ರೂ. ಹಾಗೂ ವಿಶೇಷ ಅಧಿಕಾರಿಗಳಿಗೆ ಪ್ರತಿ ತಿಂಗಳು 16,93,780 ರೂ. ಸಂಬಳ ನೀಡಲಾಗುತ್ತಿದೆ. ವಿವಿ ನಿಯಮ ಗಾಳಿಗೆ ತೂರಿ ಭಾರಿ ಮೊತ್ತದ ವೇತನ ಪಾವತಿಗೆ ಅನುಮತಿ ನೀಡಿದೆ.

20 ವರ್ಷಗಳ ಸೇವಾವ ಧಿ ಪರಿಗಣಿಸಿ ಸುಮಾರು 330 ಬೋಧಕೇತರ ಸಿಬ್ಬಂ ದಿ ನೇಮಿಸಲು ಹೈಕೋರ್ಟ್‌ ಅನುಮತಿ ನೀಡಿತ್ತು. ಆದರೆ, ಸಹ ತಾಂತ್ರಿಕ ಶಿಕ್ಷಣದ ಮಾಹಿತಿ ಇಲ್ಲದ ಹಾಗೂ ಗಣಕಯಂತ್ರಗಳ ಜ್ಞಾನವೇ ಇಲ್ಲದ 15ರಿಂದ 20 ನಿವೃತ್ತ ನೌಕರರನ್ನು ಆಡಳಿತಾತ್ಮಕ ನಿರ್ಣಯ ತೆಗೆದುಕೊಳ್ಳಲು ಮರು ನೇಮಕ ಮಾಡಿಕೊಡಿದೆ.

Advertisement

ಈ ರೀತಿಯ ನಿವೃತ್ತ ನೌಕರರ ಮರು ನೇಮಕಾತಿಗಳಿಗೆ ವಿಶ್ವವಿದ್ಯಾಲಯ ನಿಯಮಗಳನ್ವಯ ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಮರು ನೇಮಕಾತಿ ಮಾಡಿಕೊಳ್ಳಬೇಕಾಗಿರುತ್ತದೆ. ಆದರೆ, ವಿಶ್ವವಿದ್ಯಾಲಯ ಮರು ನೇಮಕಾತಿಗೆ ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿಲ್ಲ.

ಪಾಠ ಬಿಟ್ಟು ಅಧಿಕಾರಿಯಾದ್ರು:
ಸರ್ಕಾರದ ಆದೇಶಗಳ ಹೊರತಾಗಿಯೂ ನಿಯಮ ಬಾಹಿರವಾಗಿ 25 ಜನ ಪ್ರಾಧ್ಯಾಪಕರನ್ನು ವಿಶೇಷ ಅಧಿಕಾರಿಗಳನ್ನು ವಿವಿಧ ವಿಭಾಗಗಳಿಗೆ ವಿಶ್ವವಿದ್ಯಾಲಯದ ನೇಮಕಾತಿಗೆ ವ್ಯತಿರಿಕ್ತವಾಗಿ ನೇಮಿಸಿಕೊಂಡು ಭಾರಿ ಮೊತ್ತದ ಹಣ ಸಂಭಾವನೆಯಾಗಿ ಪಾವತಿಸುತ್ತಿದೆ. ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾದ ಪ್ರಾಧ್ಯಾಪಕರು ಆಡಳಿತಾತ್ಮಕ ಕೆಲಸದಲ್ಲೇ ತಲ್ಲೀನರಾಗಿದ್ದಾರೆ. ವಿವಿಧ ತಾಂತ್ರಿಕ ಕಾಲೇಜು ಹಾಗೂ ವಿಟಿಯು ಕ್ಯಾಂಪಸ್‌ನಲ್ಲಿ ಉಪನ್ಯಾಸಕರೆಂದು ನೇಮಕಗೊಂಡರೂ ವಿಶೇಷ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಒಂದು ವೇಳೆ ಇಲ್ಲಿ ಅನುಭವಿ ಬೋಧಕೇತರ ಸಿಬ್ಬಂದಿಗಳನ್ನೇ ಮಾಡಿಕೊಳ್ಳಬೇಕಾದರೆ ಹೆಚ್ಚುವರಿಯಾಗಿ ಬೇರೆ ಕಡೆಯಿಂದ ನೇಮಕ ಮಾಡಿಕೊಳ್ಳಬಹುದಾಗಿತ್ತು. ಇದೆಲ್ಲವನ್ನೂ ಬಿಟ್ಟು ನಿವೃತ್ತರನ್ನೇ ನೇಮಕ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಟಿಯುದಲ್ಲಿ ನೇಮಕಗೊಂಡಿರುವ ನಿವೃತ್ತ ನೌಕರರು ಹಾಗೂ ವಿಶೇಷ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯಲು ವಿಟಯು ಕುಲಸಚಿವರನ್ನು ಸಂಪರ್ಕಿಸಿದಾಗ ಅವರ ಮೊಬೈಲ್‌ ವ್ಯಾಪ್ತಿ ಪ್ರದೇಶದ ಹೊರಗಿತ್ತು.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಸಿಬ್ಬಂದಿಗಳಾಗಿ ನಿವೃತ್ತ ನೌಕರರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬೆಂಗಳೂರಿಗೆ ಬಂದ ಬಳಿಕ ಈ ಬಗ್ಗೆ ನೋಡಿ ಮಾಹಿತಿ ನೀಡಲಾಗುವುದು.
– ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

– ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next