Advertisement

ನಿವೃತ್ತ ಸಿಎಸ್‌ ಮನೆ ದೋಚಿದ್ದು ವಿದೇಶಿ ಕಳ್ಳರು

12:15 PM Jul 14, 2018 | |

ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರ ಮನೆಯಲ್ಲಿ ಕಳವು ಮಾಡಿದ್ದ ಒಬ್ಬ ಮಹಿಳೆ ಸೇರಿ ಐವರು ವಿದೇಶಿ ಪ್ರಜೆಗಳನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತರು ದಕ್ಷಿಣ ಅಮೆರಿಕದ ಕೊಲಂಬಿಯಾದವರು ಎಂದು ತಿಳಿದುಬಂದಿದೆ. ಸ್ಪಾನಿಷ್‌ ಭಾಷೆ ಮಾತನಾಡುತ್ತಿದ್ದು ವಿಚಾರಣೆ ನಡೆಯುತ್ತಿದೆ. ಹೀಗಾಗಿ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಕೊಲಂಬಿಯದಿಂದ ಪ್ರವಾಸ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿಗಳು, ಮನೆ ಕಳವು ಕೃತ್ಯದಲ್ಲಿ ತೊಡಗಿದ್ದಾರೆ. ಶ್ರೀಮಂತರ ಮನೆಗಳನ್ನೇ ಟಾರ್ಗೆಟ್‌ ಮಾಡಿಕೊಂಡು ತಂಡ ಕಳ್ಳತನಕ್ಕೆ ಇಳಿಯುತ್ತಿತ್ತು. ಕಳವು ಮಾಡಬಹುದಾದ ಮನೆಗಳನ್ನು ಮೊದಲೇ ಗುರುತಿಸುತ್ತಿತ್ತು.

ಮಹಿಳೆ ಟಿಪ್‌ಟಾಪ್‌ ಬಟ್ಟೆ ಧರಿಸಿ, ಹೆಗಲಿಗೆ ಬ್ಯಾಗ್‌ ಹಾಕಿಕೊಂಡು ಅಂತಹ ಮನೆಗೆ ಹೋಗುತ್ತಿದ್ದಳು. ಇನ್ನುಳಿದ ನಾಲ್ವರು ಆ ಮನೆಯಿಂದ ಸುಮಾರು ಒಂದೆರಡು ಕಿ.ಮೀ. ದೂರದಲ್ಲಿ ಕಾರಿನಲ್ಲಿ ಕಾಯುತ್ತಿದ್ದರು. ಮನೆ ಬಳಿ ಹೋಗಿ ಕಾಲಿಂಗ್‌ ಬೆಲ್‌ ಒತ್ತುತ್ತಿದ್ದ ಮಹಿಳೆ, ಮನೆಯೊಳಗಿನಿಂದ ಯಾರಾದರೂ ಹೊರ ಬಂದರೆ ವಿಳಾಸ ಕೇಳಿ ಅಲ್ಲಿಂದ ಕಾಲ್ಕಿಲುತ್ತಿದ್ದಳು.

ಒಂದು ವೇಳೆ ಹತ್ತಾರು ಬಾರಿ ಬೆಲ್‌ ಮಾಡಿದರೂ ಪ್ರತಿಕ್ರಿಯೆ ಬಾರದಿದ್ದರೆ 10 ನಿಮಿಷ ಅಲ್ಲಿಯೇ ಕಾದು, ಮನೆಯಲ್ಲಿ ಯಾರು ಇಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಇತರೆ ಆರೋಪಿಗಳಿಗೆ ಸಂದೇಶ ರವಾನಿಸಿ ರೂಟ್‌ ಮ್ಯಾಪ್‌ ಮೂಲಕ ಸ್ಥಳಕ್ಕೆ ಕರೆಸಿಕೊಳ್ಳುತ್ತಿದ್ದಳು. ಬಾಡಿಗೆ ಕಾರಿನಲ್ಲಿ ಬರುತ್ತಿದ್ದ ನಾಲ್ವರು ಯುವಕರು ತಮ್ಮ ಬಳಿಯಿದ್ದ ವಿದೇಶಿ ಉಪಕರಣಗಳನ್ನು ಬಳಸಿ ಬಾಗಿಲು ತೆರೆದು ಮನೆಯೊಳಗಿರುವ ವಸ್ತುಗಳನ್ನು ಕಳವು ಮಾಡಿ ಕಾರಿನಲ್ಲಿ ಪರಾರಿಯಾಗುತ್ತಿದ್ದರು.

Advertisement

ಸುಳಿವು ಕೊಟ್ಟ ಕಾರು ನಂಬರ್‌: ಇತ್ತೀಚೆಗೆ ಜಯನಗರ 5ನೇ ಹಂತದ ನಿವಾಸಿ ಮುರಳಿಕೃಷ್ಣ ಎಂಬುವರು ಜೂ.22ರಂದು ಮನೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಸಂಬಂಧಿಕರ ಮನೆಗೆ ಹೋಗಿದ್ದರು. ಅದೇ ದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ವಾಪಸ್‌ ಬಂದಾಗ ಬಾಗಿಲು ಒಡೆದಿರುವುದು ಬೆಳಕಿಗೆ ಬಂದಿತ್ತು.

ಬಳಿಕ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಐವರು ಆರೋಪಿಗಳು ಬಾಗಿಲು ಒಡೆಯುತ್ತಿರುವ ದೃಶ್ಯ ಹಾಗೂ ಮನೆ ಮುಂದೆ ಕಾರು ನಿಲ್ಲಿಸಿ ಒಳಬರುವ ದೃಶ್ಯ ಕೂಡ ಸೆರೆಯಾಗಿತ್ತು. ಆ ಸಂಬಂಧ ಜಯನಗರ ಠಾಣೆಗೆ ಮುರಳಿಕೃಷ್ಣ ದೂರು ನೀಡಿದ್ದರು.

ಕಾರು ನಂಬರ್‌ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೊದಲಿಗೆ ಶಿವಾಜಿನಗರದ ಕಾರು ಮಾಲೀಕನ ಮಾಹಿತಿ ಸಂಗ್ರಹಿಸಿದರು. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ, ತಾನು ಕಾರು ಬಾಡಿಗೆ ನೀಡುವ ವ್ಯವಹಾರ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ಮೂವರು ವಿದೇಶಿಗರು ಕಾರನ್ನು ಬಾಡಿಗೆಗೆ ಪಡೆದಿದ್ದರು. ಬನ್ನೇರುಘಟ್ಟದ ಅಪಾರ್ಟ್‌ಮೆಂಟ್‌ವೊಂದರ ವಿಳಾಸ ನೀಡಿದ್ದರು ಎಂಬ ಮಾಹಿತಿ ನೀಡಿದ್ದರು.

ಈ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿ ಐವರನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ನಿವೃತ್ತ ಮುಖ್ಯಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಮನೆಯಲ್ಲಿ ಕೃತ್ಯವೆಸಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳು ಸ್ಪಾನಿಷ್‌ ಭಾಷೆ ಮಾತನಾಡುತ್ತಿರುವುದರಿಂದ 7 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ಜಯನಗರ ಮಾತ್ರವಲ್ಲದೆ ಬೇರೆಡೆಯೂ ಕೃತ್ಯ ಎಸಗಿರುವ ಮಾಹಿತಿಯಿದ್ದು, ವಿಚಾರಣೆ ಬಳಿಕ ತಿಳಿಯಲಿದೆ. ಈ ಹಂತದಲ್ಲಿ ಆರೋಪಿಗಳ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ.
-ಡಾ ಶರಣಪ್ಪ, ಡಿಸಿಪಿ ದಕ್ಷಿಣ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next