Advertisement

ನಿವೃತ್ತ ಸೇನಾಧಿಕಾರಿಗಳು, ಸೇನೆ ರಾಷ್ಟ್ರಪತಿ, ಪತ್ರ ಗೊಂದಲ!

01:12 AM Apr 13, 2019 | mahesh |

ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ವಿವಿಧ ರಾಜಕೀಯ ಪಕ್ಷಗಳ ನಡೆಗಳನ್ನು ವಿರೋಧಿಸಿ 150ಕ್ಕೂ ಹೆಚ್ಚು ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆಂದು ಹೇಳಲಾಗಿದ್ದು, ಅನಂತರದಲ್ಲಿ ಇದು ಗೊಂದಲದ ವಿಚಾರವಾಗಿ ಬದಲಾಗಿದೆ.

Advertisement

ಪತ್ರದಲ್ಲಿರುವ ಸಹಿ ತಮ್ಮದಲ್ಲವೆಂದು ಇಬ್ಬರು ನಿವೃತ್ತ ಅಧಿಕಾರಿಗಳು ಹೇಳಿದ್ದರೆ, ಮತ್ತೆ ಕೆಲವರು ತಾವು ಸಹಿ ಹಾಕಿದ್ದು ಹೌದೆಂದು ಹೇಳಿದ್ದಾರೆ. ಅತ್ತ, ರಾಷ್ಟ್ರಪತಿ ಭವನಕ್ಕೆ ಇಂಥ ಯಾವುದೇ ಪತ್ರ ಬಂದಿಲ್ಲವೆಂದು ಭವನದ ಮೂಲಗಳೇ ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ, ಇಡೀ ಪ್ರಕರಣ ಗೋಜಲಾಗಿ ಬದಲಾಗಿದೆ. ಸೇನೆಯ ನಿವೃತ್ತ ಅಧಿಕಾರಿಗಳ ಸಮೂಹ ಪತ್ರದ ಪರ, ವಿರೋಧ ಚರ್ಚೆಯಲ್ಲಿ ಇಬ್ಭಾಗವಾಗಿದೆ.

ಏನದು ಪತ್ರ?: ಸೇನೆಯ 3 ಪ್ರಮುಖ ವಿಭಾಗಗಳಾದ ಭೂಸೇನೆ, ವಾಯು ಸೇನೆ ಹಾಗೂ ನೌಕಾಪಡೆಯ ವಿವಿಧ ಪ್ರಮುಖ ಇಲಾಖೆಗಳ ಎಂಟು ನಿವೃತ್ತ ಮುಖ್ಯಸ್ಥರು ಸೇರಿದಂತೆ ಒಟ್ಟು 156 ವಿವಿಧ ಶ್ರೇಣಿಯ ನಿವೃತ್ತ ಸೇನಾಧಿ ಕಾರಿಗಳು ರಾಷ್ಟ್ರಪತಿಯವರಿಗೆ ಪತ್ರ ಬರೆದಿರುವುದಾಗಿ ಹೇಳಲಾಗಿದೆ. ಇತ್ತೀಚೆಗೆ, ಕೆಲವು ರಾಜಕೀಯ ನೇತಾರರು ಸೇನೆಯು ಮಾಡಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಗಳನ್ನು ತಮ್ಮ ಸರಕಾರದ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದ್ದು, ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಬಣ್ಣಿಸಿದ್ದಾರೆ. ಹಲವು ರ್ಯಾಲಿಗಳಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಹೆಸರನ್ನು ಪ್ರಸ್ತಾವಿಸಿದ್ದುಂಟು. ಸೈನಿಕರ ತ್ಯಾಗ ಮನದಲ್ಲಿಟ್ಟುಕೊಂಡು ಮತ ಹಾಕಬೇಕೆಂದು ಮತದಾರರಿಗೆ ತಾಕೀತು ಮಾಡಿದ್ದೂ ಇದೆ. ಈ ಬಗ್ಗೆ ಆಕ್ಷೇಪಿಸಿ ನಿವೃತ್ತ ಸೇನಾಧಿಕಾರಿಗಳು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಗೊಂದಲವಾಗಿರುವುದೇಕೆ?: ಈ ಪತ್ರಕ್ಕೆ ತಾವು ಸಹಿ ಮಾಡಿಲ್ಲ ಎಂದು ಕೆಲವು ಅಧಿಕಾರಿಗಳು ಹೇಳಿರುವುದು ಪತ್ರದ ಬಗ್ಗೆ ಅನುಮಾನಗಳನ್ನು ಹುಟ್ಟಿಸಿದೆ. ಆದರೆ, ಕೆಲವು ನಿವೃತ್ತ ಅಧಿಕಾರಿಗಳು ತಾವು ಸಹಿ ಹಾಕಿರುವುದು ನಿಜ ಎಂದಿರುವುದು ಈ ವಿಚಾರವನ್ನು ಗೊಂದಲಮಯ ವಾಗಿಸಿದೆ. “ಪತ್ರದಲ್ಲಿರುವ ಸಹಿ ತಮ್ಮದಲ್ಲ’ ಎಂದು ನಿವೃತ್ತ ಅಧಿಕಾರಿ ರೊಡ್ರಿಗಸ್‌ ಹೇಳಿದ್ದು, ನಿವೃತ್ತ ಏರ್‌ಚೀಫ್ ಮಾರ್ಷಲ್‌ ನಿರ್ಮಲ್‌ ಚಂದ್ರ ಸೂರಿ ಕೂಡ, “ಪತ್ರದಲ್ಲಿ ಉಲ್ಲೇಖವಾಗಿರುವ ಅಂಶಗಳಿಗೂ ನನ್ನ ನಿಲುವುಗಳಿಗೂ ಸಂಬಂಧವಿಲ್ಲ’ ಎಂದರು. ಇವರಿಬ್ಬರ ಹೇಳಿಕೆಯಿಂದ ಪತ್ರದ ಬಗ್ಗೆ ಅನುಮಾನಗಳೇಳುವಷ್ಟರಲ್ಲಿ, “ಈ ಪತ್ರದಲ್ಲಿರುವ ಸಹಿ ನನ್ನದೇ’ ಎನ್ನುವ ಮೂಲಕ ನಿವೃತ್ತ ಮೇಜರ್‌ ಜನರಲ್‌ ಹರ್ಷ ಕಕ್ಕರ್‌ ಪ್ರಕರಣಕ್ಕೆ ಮತ್ತೂಂದು ತಿರುವು ತಂದುಕೊಟ್ಟರು. “ಪತ್ರದಲ್ಲಿನ ಒಕ್ಕಣೆಗೆ ನನ್ನ ಸಮ್ಮತಿಯಿದೆ. ಅದನ್ನು ನೋಡಿದ ಮೇಲೆಯೇ ನಾನು ನನ್ನ ಸಹಿ ಹಾಕಿದ್ದೇನೆ’ ಎಂದು ಹೇಳಿದರು.

ಕಾಂಗ್ರೆಸ್‌ ಪ್ರತಿಕ್ರಿಯೆ: ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಮೋದಿಯವರು ಸೇನೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಹುದು. ಆದರೆ, ಸೇನೆಯು ಎಂದಿಗೂ ಭಾರತದ ಹಿತಾಸಕ್ತಿಗೆ ಬದ್ಧವಾಗಿರುತ್ತದೆ. ಅದು ಯಾರ ಲಾಭಕ್ಕಾಗಿಯೂ ಕೆಲಸ ಮಾಡದು ಎಂದಿದೆ.

Advertisement

ಇದೊಂದು ಷಡ್ಯಂತ್ರ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, “ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿರುವ ಪತ್ರಕ್ಕೂ ತಮಗೂ ಸಂಬಂಧವಿಲ್ಲ ಎಂದು ಈಗಾಗಲೇ ಕೆಲವು ನಿವೃತ್ತ ಸೇನಾಧಿಕಾರಿಗಳು ಹೇಳಿದ್ದಾರೆ. ಹಾಗಾಗಿ, ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು ನಿವೃತ್ತ ಸೇನಾಧಿ ಕಾರಿಗಳ ಹೆಸರು, ಸಹಿಯನ್ನು ದುರುಪಯೋಗ ಮಾಡಿಕೊಂಡಿವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next