Advertisement

ಒಂದೇ ವರ್ಷದಲ್ಲಿ 8 ಸರಕಾರಿ ಹುದ್ದೆಗೆ ಆಯ್ಕೆಯಾದ ನಿವೃತ್ತ ಯೋಧ : ಪರಿಶ್ರಮಕ್ಕೆ ತಕ್ಕ ಫಲ

04:40 PM Mar 21, 2022 | Team Udayavani |

ವಿಜಯಪುರ : ಸಾಧಿಸುವ ಛಲವಿದ್ದರೆ ಬದ್ಧತೆಯಿಂದ ಮಾಡುವ ಪರಿಶ್ರಮ ಫಲ ನೀಡುತ್ತದೆ ಎಂಬುದಕ್ಕೆ ಸೇನಾ ನಿವೃತ್ತ ಹವಲ್ದಾರ ಮಹೇಶ ಸಂಖ ನಿದರ್ಶನವಾಗಿ ನಿಂತಿದ್ದಾರೆ. ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ ಸರ್ಕಾರದ 8 ಹುದ್ದೆಗಳಿಗೆ ಆಯ್ಕೆಯಾಗಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕ ದಾಸ್ಯಾಳ ಗ್ರಾಮದ ಕೃಷಿ ಹಿನ್ನೆಲೆಯ ಸಂಖ ಕುಟುಂಬದ ಮಹೇಶ ಸಂಖ ಅಪರೂಪದ ಸಾಧನೆ ಮಾಡಿರುವ ಸೇನಾ ನಿವೃತ್ತ ಹವಾಲ್ದಾರ. ಸರ್ಕಾರದಲ್ಲಿ ಒಂದು ಸಣ್ಣ ಹುದ್ದೆಗೆ ನೇಮಕವಾಗಲು ಎಷ್ಟೆಲ್ಲ ಪ್ರತಿಭೆ ಇದ್ದರೂ ವಿಫಲವಾಗುವ ಪ್ರತಿಭಾವಂತರ ಮಧ್ಯೆ ನಿವೃತ್ತ ಹವಾಲ್ದಾರ ಮಹದೇವ 8 ಹುದ್ದೆಗೆ ಆಯ್ಕೆಯಾಗಿದ್ದು, ಅವರ ಪ್ರತಿಭಾವಂತಿಕೆ ಇತರರಿಗೆ ಮಾದರಿ ಎನಿಸಿದೆ.

6 ಅಣ್ಣ-ತಮ್ಮಂದಿರ ಇವರ ಕುಟುಂಬದಲ್ಲಿ ಓರ್ವ ಸಹೋದರ ಗಡಿ ಭಧ್ರತಾ ಪಡೆಯಲ್ಲಿ ಸೇವೆಯಲ್ಲಿದ್ದರೆ, ಇನ್ನೋರ್ವ ಸಹೋದ ವಿಜಯಪುರ ನಗರದ ಬಿಎಲ್‍ಡಿಇ ಸಂಸ್ಥೆಯಲ್ಲಿ ಸೇವೆಯಲ್ಲಿದ್ಧಾರೆ. ಮೂವರು ಸಹೋದರರು ಕೃಷಿ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅಲ್ಲಿಗೆ ದಾಶ್ಯಾಳ ಗ್ರಾಮದ ಸಂಖ ಕುಟುಂಬದವರ ಸಾಧನೆಗೆ ಜೈ ಜವಾನ್, ಜೈ ಕಿಸಾನ್ ಎನ್ನುವಂತಿದೆ.

20 ವರ್ಷದ ಹಿಂದೆ ಪಿಯುಸಿ ವಿಜ್ಞಾನ ಮುಗಿಸುತ್ತಲೇ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಮಹೇಶ ಅವರು, ಸೇನೆಯಲ್ಲಿದ್ದಾಗಲೇ ಬಾಹ್ಯ ಅಭ್ಯರ್ಥಿಯಾಗಿ ಬಿಎಸ್ಸಿ ಪದವಿ ಪಡೆದಿದ್ದರು. ಬಾಲ್ಯದಲ್ಲೇ ನಾಯಕತ್ವ ಗುಣದ ಹಿನ್ನೆಲೆ ಇದ್ದ ಇವರನ್ನು ಉನ್ನತ ಹುದ್ದೆಯಲ್ಲಿ ನೋಡಬೇಕು ಎಂಬ ಮಹದಾಸೆ ಹೆತ್ತವರಿಗೆ ಇತ್ತು. ಅದರಂತೆ ದೇಶ ರಕ್ಷಣೆಗೆ ಆಯ್ಕೆಯಾಗಿ ಜಮ್ಮು-ಕಾಶ್ಮೀರ, ಪಂಜಾಬ್ ಗಡಿಯಲ್ಲಿ ತಲಾ 3 ವರ್ಷ, ರಾಜಸ್ಥಾನದಲ್ಲಿ 2 ವರ್ಷ, ಆಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ 7 ವರ್ಷ ಭಾರತಾಂಬೆಯ ರಕ್ಷಣೆ ಮಾಡಿ 2019 ಜನೇವರಿಯಲ್ಲಿ ನಿವೃತ್ತಿ ಹೊಂದಿದ್ದರು.

Advertisement

ಸೇನೆಯಲಿದ್ದಾಗ ಜೀವನದಲ್ಲಿ ಇನ್ನೂ ಸಾಧಿಸುವ ಛಲವಿದ್ದ ಕಾರಣ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಉನ್ನತ ಹುದ್ದೆ ಪಡೆಯಬೇಕು ಆಸೆಯಿಂದ ಕರ್ನಾಟಕ ಸರ್ಕಾರ ಕರೆದಿದ್ದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ನೇರವಾಗಿ ತವರಿಗೆ ಬರದೇ ಬೆಂಗಳೂರಿನಲ್ಲಿದ್ದುಕೊಂಡು ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಧ್ಯಯನದ ಸಿದ್ಧತೆಯಲ್ಲಿ ತೊಡಗಿದರು.

ಅಂತಿಮವಾಗಿ ಅವರು ಪರೀಕ್ಷೆ ಬರೆದಂತೆ 2019 ರಲ್ಲಿ ಪಿಎಸ್‍ಐ ಪರೀಕ್ಷೆಯಲ್ಲಿ ಅಂತಿಮ ಕ್ಷಣದಲ್ಲಿ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಬೆಂಗಳೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಿವಿಲ್ ಪೊಲೀಸ್, ಬೆಂಗಳೂರಿನಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್, ಜೈಲ್ ವಾರ್ಡರ್, ಕೆಎಸ್‍ಆರ್‍ಪಿ ಪಿಎಸ್‍ಐ, ಪೊಲೀಸ್ ಪರೀಕ್ಷೆಗಳಲ್ಲಿ ಆಯ್ಕೆಯಾದರು. ಎಫ್‍ಡಿಎ-ಎಸ್‍ಡಿಎ ಪರೀಕ್ಷೆಯ ಅಂತಿಮ ಸುತ್ತಿನಲ್ಲಿ ಆಯ್ಕೆಯಾಗಿದ್ದರು.

ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕಾಗಿ ಪೊಲೀಸ್ ಕಂಟ್ರೋಲ್ ರೂಂಗೆ ಪದೇ, ಪದೇ ಕರೆ ಮಾಡಿ ಜೈಲುಪಾಲಾದ!

ಆದರೆ ಈ ಯಾವ ಹುದ್ದೆಗಳಿಗೂ ಅವರು ಮನಸ್ಸು ಮಾಡಲಿಲ್ಲ. ಬದಲಾಗಿ ಮೊದಲ ಪ್ರಯತ್ನದಲ್ಲಿ ವಿಫಲವಾಗಿದ್ದ ಪಿಎಸ್‍ಐ ಹುದ್ದೆಗೆ ಮತ್ತೊಮ್ಮೆ ಪರೀಕ್ಷೆ ಎದುರಿಸಿ, ಇದೀಗ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮೈಸೂರು, ಕಲಬುರ್ಗಿಯಲ್ಲಿ ಪಿಎಸ್‍ಐ ತರಬೇತಿ ಮುಗಿಸಿ ಬೆಳಗಾವಿ ಪೊಲೀಸ್ ಉತ್ತರ ವಲಯಕ್ಕೆ ನೇಮಕಗೊಂಡಿದ್ದರು. ಅಲ್ಲಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದು, ಪ್ರೊಬೇಶನರಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮೂರಿನ ನಿವೃತ್ತ ಸೇನಾ ಹವಾಲ್ದಾರ ಮಹೇಶ ಸಂಖ ಅವರ ವಿಶಿಷ್ಟ ಸಾಧನೆಗೆ ಗ್ರಾಮಸ್ತರು ಹೆಮ್ಮೆ ಪಡುತ್ತಿದ್ದು, ತವರಿನವರು ಇವರ ಸಾಧನೆಗೆ ಸನ್ಮಾನ ಮಾಡಿ ಹರಸಿದ್ದಾರೆ.

ನಾವು ಮಾಡುವ ಪ್ರತಿ ಉತ್ತಮ ಕೆಲಸವೂ ನಮ್ಮ ಹೆತ್ತವರಿಗೆ ಕೊಡುವ ಅತ್ಯುತ್ತಮ ಕೊಡುಗೆಯಾಗಿರುತ್ತದೆ. ನಮ್ಮನ್ನು ಸಲಹಿದ ಸಮಾಕ್ಕೆ, ದೇಶಕ್ಕೆ ಏನಾದರೂ ನೀಡಬೇಕಾದುದು  ಪ್ರತಿಯೊಬ್ಬರ ಕರ್ತವ್ಯ. ಸಾಧಿಸುವ ಛಲ, ಬದ್ಧತೆಯ ಪ್ರಯತ್ನ ಇದ್ದರೆ ಸಾಲದು, ಗುರಿ ಮುಟ್ಟದ ಹೊರತು ಇತರೆಡೆ ಚಿತ್ತ ನೆಡದಿದ್ದರೆ ಸಾಧನೆ ಸಾಧ್ಯವಿದೆ.
– ಮಹಾದೇವ ಸಂಖ
9 ಹುದ್ದೆಗೆ ಆಯ್ಕೆಯಾದ ಪ್ರತಿಭಾವಂತ ಸಾ.ದಾಶ್ಯಾಳ ತಾ.ಬಬಲೇಶ್ವರ.

Advertisement

Udayavani is now on Telegram. Click here to join our channel and stay updated with the latest news.

Next