Advertisement

ತಾತ್ಕಾಲಿಕ ಮಳಿಗೆಗೆ ತೆರಳದ ಚಿಲ್ಲರೆ ವ್ಯಾಪಾರಸ್ಥರು

09:51 AM May 25, 2020 | mahesh |

ಮಂಗಳೂರು: ಸೆಂಟ್ರಲ್‌ ಮಾರ್ಕೆಟ್‌ನಲ್ಲಿದ್ದ ಸಗಟು ವ್ಯಾಪಾರಸ್ಥರನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಿದ ಬಳಿಕ ಅಲ್ಲಿದ್ದ ಚಿಲ್ಲರೆ ವ್ಯಾಪಾರಸ್ಥರಿಗೆ ತಾತ್ಕಾಲಿಕವಾಗಿ ಸ್ಟೇಟ್‌ಬ್ಯಾಂಕ್‌ ಬಳಿ ಶೆಡ್‌ಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಆದರೆ ಚಿಲ್ಲರೆ ವ್ಯಾಪಾರಸ್ಥರು ಪಾಲಿಕೆ ಗುರುತಿಸಿರುವ ಜಾಗಕ್ಕೆ ಸ್ಥಳಾಂತರಗೊಳ್ಳದ ಕಾರಣ, ಒಂದೂವರೆ ತಿಂಗಳಿಂದ ಶೆಡ್‌ಗಳು ಖಾಲಿ ಬಿದ್ದಿವೆ.

Advertisement

ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಾಣದ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆಯು ಸೆಂಟ್ರಲ್‌ ಮಾರ್ಕೆಟ್‌ನಲ್ಲಿದ್ದ ಸಗಟು ವ್ಯಾಪಾರಸ್ಥರನ್ನು ಬೈಕಂಪಾಡಿಯಲ್ಲಿರುವ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಗೊಳಿಸಿತ್ತು.

ಇತ್ತ ಚಿಲ್ಲರೆ ವ್ಯಾಪಾರಸ್ಥರಿಗಾಗಿ ತಾತ್ಕಾಲಿಕವಾಗಿ ಮಂಗಳೂರು ಪುರಭವನದ ಎದುರು, ಬೀದಿ ಬದಿ ವ್ಯಾಪಾರಿಗಳ ವಲಯ ಮತ್ತು ಲೇಡಿಗೋಶನ್‌ ಎದುರು 100ಕ್ಕೂ ಅಧಿಕ ತಗಡು ಶೀಟಿನ ಶೆಡ್‌ಗಳನ್ನು ನಿರ್ಮಿಸಲಾಗಿದ್ದು ಇವು ಬಳಕೆಯಾಗಿಲ್ಲ.

“ಸೆಂಟ್ರಲ್‌ ಮಾರುಕಟ್ಟೆಯ ಹೊಸ ಸಂಕೀರ್ಣ ನಿರ್ಮಾಣಕ್ಕೆ 4-5 ವರ್ಷಗಳು ತಗಲಬಹುದು. ಹಾಗಾಗಿ ನೆಹರೂ ಮೈದಾನದ ಫುಟ್ಬಾಲ್‌ ಮೈದಾನದ ಪಕ್ಕ ತಾತ್ಕಾಲಿಕ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಳ್ಳುವವರೆಗೆ ಚಿಲ್ಲರೆ ವ್ಯಾಪಾರಸ್ಥರಿಗಾಗಿ ಶೆಡ್‌ಗಳನ್ನು ಹಾಕಿಕೊಡಲಾಗಿದೆ. ಆದರೆ ವ್ಯಾಪಾರಿಗಳು ಇಲ್ಲಿ ವ್ಯಾಪಾರ ನಡೆಸುತ್ತಿಲ್ಲ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಅಗತ್ಯ ವ್ಯವಸ್ಥೆ ಇಲ್ಲ
“ಫುಟ್‌ಪಾತ್‌ನಲ್ಲಿ, ರಸ್ತೆ ಬದಿ ತಗಡು ಶೀಟು ಹಾಕಿ ಮಳಿಗೆಯಂತೆ ಮಾಡಲಾಗಿದೆ. ಆದರೆ ಅಲ್ಲಿ ವ್ಯಾಪಾರಿಗಳಿಗೆ ಬೇಕಾದ ಯಾವುದೇ ಕನಿಷ್ಠ ಅಗತ್ಯಗಳೇ ಇಲ್ಲ. ತರಕಾರಿ, ಹಣ್ಣು ಹಂಪಲುಗಳನ್ನು ರಾತ್ರಿ ವೇಳೆ ಅಂಗಡಿಯಲ್ಲಿಟ್ಟು ಮನೆಗೆ ಹೋಗುವಂತೆಯೂ ಇಲ್ಲ. ಇಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ’ ಎನ್ನುವುದು ಚಿಲ್ಲರೆ ವ್ಯಾಪಾರಸ್ಥರ ಅಹವಾಲು.

Advertisement

ಜನಸಾಮಾನ್ಯರ ಮೇಲೂ ಪ್ರಭಾವ
“ಬೇರೆ ಕಡೆಗಳಿಗಿಂತ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ತರಕಾರಿ ಕಡಿಮೆ ಬೆಲೆಗೆ ಸಿಗುತ್ತಿತ್ತು. ವಿವಿಧ ರೀತಿಯ ತರಕಾರಿ, ಹಣ್ಣು ಹಂಪಲು ಒಂದೇ ಕಡೆ ಸಿಗುತ್ತಿತ್ತು. ಈಗ ಅಂಗಡಿಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ. ಕೆಲವು ಕಡೆ ಹೆಚ್ಚು ಬೆಲೆ ತೆರಬೇಕಾಗಿದೆ’ ಎನ್ನುತ್ತಾರೆ ಖಾಯಂ ಆಗಿ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಖರೀದಿ ಮಾಡುತ್ತಿದ್ದ ನಾಗರಿಕರು.

 ವ್ಯಾಪಾರ ಅಸಾಧ್ಯ
ಸೆಂಟ್ರಲ್‌ ಮಾರ್ಕೆಟ್‌ನಲ್ಲಿ 346 ಮಂದಿ ಚಿಲ್ಲರೆ ವ್ಯಾಪಾರಸ್ಥರಿದ್ದರು. ಅವರೆಲ್ಲ ಈಗ ಬೀದಿ ಪಾಲಾಗಿದ್ದಾರೆ. ತಾತ್ಕಾಲಿಕವಾಗಿ ಮಾಡಿಕೊಟ್ಟಿರುವ ಶೆಡ್‌ಅಸಮರ್ಪಕವಾಗಿವೆ. ಅಲ್ಲಿ ತಾತ್ಕಾಲಿಕ ನೆಲೆಯಲ್ಲಿಯೂ ವ್ಯಾಪಾರ ಮಾಡುವುದು ಅಸಾಧ್ಯ.
-ಸುನಿಲ್‌ ಕುಮಾರ್‌ ಬಜಾಲ್‌ ಕಾರ್ಯಾಧ್ಯಕ್ಷ, ಸೆಂಟ್ರಲ್‌ ಮಾರಕಟ್ಟೆ ವ್ಯಾಪಾರಸ್ಥರ ಸಂಘ.

ಪಾಲಿಕೆಯಿಂದ ಸಮರ್ಪಕ ವ್ಯವಸ್ಥೆ
ತಾತ್ಕಾಲಿಕ ಕಟ್ಟಡ ಆಗುವವರೆಗೂ ಚಿಲ್ಲರೆ ವ್ಯಾಪಾರಿಗಳಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಈಗಾಗಲೇ ಮಳಿಗೆಗಳನ್ನು ನಿರ್ಮಿಸಿಕೊಡಲಾಗಿದೆ. ಮಳಿಗೆಗಳನ್ನು ಸಮರ್ಪಕವಾಗಿ, ವ್ಯವಸ್ಥಿತವಾಗಿಯೇ ಮಾಡಲಾಗಿದ್ದು ಇಲ್ಲಿ ವ್ಯಾಪಾರ ನಡೆಸುವಂತೆ ಈಗಾಗಲೇ ಸೂಚಿಸಲಾಗಿದೆ.
-ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ ಆಯುಕ್ತ, ಮನಪಾ.

Advertisement

Udayavani is now on Telegram. Click here to join our channel and stay updated with the latest news.

Next