Advertisement

ಮರುಗಿದ ತೂಗು ಸೇತುವೆಗಳ ಸರದಾರ !

12:23 AM Aug 13, 2019 | Sriram |

ಸುಳ್ಯ: ಪ್ರತಿ ಮಳೆಗಾಲದಲ್ಲಿ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಿದ್ದ ಎಷ್ಟೋ ಹಳ್ಳಿಗಳ ಜನರ ಬದುಕಿಗೆ ಸಂಪರ್ಕ ಸೇತುವಾದವರು ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಸುಳ್ಯದ ಗಿರೀಶ್‌ ಭಾರದ್ವಾಜ್‌. ಅವರು ರಾಜ್ಯಾದ್ಯಂತ ನಿರ್ಮಿಸಿದ 8 ತೂಗುಸೇತುವೆಗಳು ಮಹಾಮಳೆಯಲ್ಲಿ ಕೊಚ್ಚಿಹೋಗಿವೆ. ಇದರಿಂದಾಗಿ ಭಾರದ್ವಾಜ್‌ ಮಮ್ಮಲ ಮರುಗಿದ್ದಾರೆ.

Advertisement

ಭಾರದ್ವಾಜ್‌ ಅವರು ಹೆತ್ತ ತಾಯಿಯಂತೆ ಮಮತೆಯಲ್ಲಿ ನಿರ್ಮಿಸಿದ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ರಾಮದುರ್ಗ, ಮೊದಗ, ಉತ್ತರ ಕನ್ನಡ ಜಿಲ್ಲೆಯ ಸಹಸ್ರಲಿಂಗ, ಡೋಂಗ್ರಿ, ಕುಮಟಾ, ಬಾಳೆಹೊನ್ನೂರು ಸಮೀಪದ ಕಾಂಡ್ಯ ಸೇತುವೆ, ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ತೂಗುಸೇತುವೆಗಳಿಗೆ ಹಾನಿ ಉಂಟಾಗಿದೆ. ಕೆಲವು ಹಾನಿಗೀಡಾದರೆ, ಮತ್ತೆ ಕೆಲವು ಸೇತುವೆಗಳ ರೋಪ್‌, ಪಿಲ್ಲರ್‌ ಕಳಚಿವೆ. ಕೆಲವು ವರ್ಷಗಳ ಹಿಂದೆ ನಿರ್ಮಿಸಿದ ಮುಗೇರಡ್ಕ ತೂಗು ಸೇತುವೆ ಸಂಪೂರ್ಣ ನಾಶವಾಗಿದೆ.

ಹಳ್ಳಿ ಬೆಸೆದ ಬಳ್ಳಿ ಸೇತುವೆ
ದೇಶಾದ್ಯಂತ ಗಿರೀಶ್‌ ಭಾರದ್ವಾಜ್‌ ಸುಮಾರು 137 ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ. ಇದು ಅವರಿಗೆ ವ್ಯವಹಾರ ಅಲ್ಲ; ಊರಿಂದ ಊರಿಗೆ ಸ್ನೇಹ, ಪ್ರೀತಿ, ಸಂಬಂಧ ಬೆಸೆಯುವ ಕಾಯಕ. ಕೆಲಸ ಮುಗಿಸಿ ಲೆಕ್ಕಾಚಾರ ಚುಕ್ತಾ ಮಾಡಿ ಸಂಬಂಧ ಕಡಿದುಕೊಳ್ಳುವವರೇ ತುಂಬಿರುವ ಈ ಕಾಲದಲ್ಲಿ ಭಾರದ್ವಾಜ್‌ ತಾನು ನಿರ್ಮಿಸಿದ ತೂಗು ಸೇತುವೆಯನ್ನು, ಆಯಾ ಊರಿನ ಜನರನ್ನು ಎಂದಿಗೂ
ಮರೆತಿಲ್ಲ. ಸಣ್ಣಪುಟ್ಟ ಸಮಸ್ಯೆ ಬಂದಾಗಲೂ ಅತ್ಯಂತ ಸ್ನೇಹ ಭಾವದಿಂದ, ಕಾಳಜಿಯಿಂದ ಧಾವಿಸುತ್ತಿದ್ದರು.

ಸಣ್ಣ ಪುಟ್ಟ ಹಾನಿ ಕಂಡಿದ್ದೆ. ಆದರೆ ಈ ಮಟ್ಟದ ಹಾನಿಯ ವಿಷಯ ತಿಳಿದು ನೋವು ತಡೆಯಲಾಗುತ್ತಿಲ್ಲ. ಅಲ್ಲಿನ ಜನರು ಸಂಕಟ ಪದೇ ಪದೇ ನೆನಪಾಗಿ ಮನಸ್ಸು ಮರುಗುತ್ತಿದೆ. ಅವರ ಮುಂದಿನ ಬದುಕು ಹೇಗೆ, ಏನು ಎಂಬ ಚಿಂತೆ ಕಾಡುತ್ತಿದೆ.
– ಗಿರೀಶ್‌ ಭಾರದ್ವಾಜ್‌

Advertisement

Udayavani is now on Telegram. Click here to join our channel and stay updated with the latest news.

Next