ಹೊಸದಿಲ್ಲಿ: ಆಹಾರ ವಸ್ತುಗಳ ದರದಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾದ ಕಾರಣ ಅಕ್ಟೋಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ನಾಲ್ಕು ತಿಂಗಳ ಕನಿಷ್ಠಕ್ಕೆ ತಲುಪಿದ್ದು, ಶೇ. 4.87ಕ್ಕೆ ಇಳಿದಿದೆ. ಈ ಮೂಲಕ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ ಶೇ. 4ರ ಗುರಿಯ ಸಮೀಪಕ್ಕೆ ತಲುಪಿದೆ.
ಸೋಮವಾರ ಕೇಂದ್ರ ಸರಕಾರ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ಮಾಹಿತಿ ನೀಡಲಾಗಿದೆ.
ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿತ ಚಿಲ್ಲರೆ ಹಣದುಬ್ಬರವು ಸೆಪ್ಟಂಬರ್‌ನಲ್ಲಿ 3 ತಿಂಗಳ ಕನಿಷ್ಠಕ್ಕೆ ಇಳಿದು, ಶೇ.5.02ಕ್ಕೆ ತಲುಪಿತ್ತು. ಜೂನ್ ನಲ್ಲಿ ಇದು ಶೇ. 4.87 ಆಗಿತ್ತು. ಪ್ರಸಕ್ತ ವಿತ್ತ ವರ್ಷದ ಜುಲೈ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಶೇ. 7.44ಕ್ಕೇರಿತ್ತು. ಅನಂತರ ಕಡಿಮೆ ಯಾಗುತ್ತ ಬಂದಿತ್ತು.
ರಾಜ್ಯಗಳ ಪೈಕಿ ಒಡಿಶಾ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಚಿಲ್ಲರೆ ಹಣ ದುಬ್ಬರ ಶೇ. 6ಕ್ಕಿಂತಲೂ ಮೇಲಿದ್ದು, ಕರ್ನಾಟಕ, ಗುಜರಾತ್, ತೆಲಂಗಾಣ, ಬಿಹಾರ ಸಹಿತ ಕೆಲವು ರಾಜ್ಯಗಳಲ್ಲಿ ಹಣದುಬ್ಬರ ಶೇ. 4.87ಕ್ಕಿಂತ ಹೆಚ್ಚಿದೆ. ದಿಲ್ಲಿ ಮತ್ತು ಛತ್ತೀಸ್‌ಗಢದಲ್ಲಿ ಅತೀ ಕಡಿಮೆ ಹಣದುಬ್ಬರವಿದೆ ಎಂದು ದತ್ತಾಂಶ ತಿಳಿಸಿದೆ.