Advertisement

ಅರ್ಧವಾರ್ಷಿಕ ಸಿನಿಮಾ ಫ‌ಲಿತಾಂಶ

11:34 AM Jun 08, 2019 | mahesh |

ಗಾಂಧಿನಗರದ ಅರ್ಧವಾರ್ಷಿಕ ಸಿನಿಮಾ ಪರೀಕ್ಷೆ ಇನ್ನೇನು ಮುಗಿಯುವ ಹಂತ ತಲುಪಿದೆ. 2019ರ ಅರ್ಧ ವರ್ಷದ ಅವಧಿಗೆ ಇನ್ನು ಮೂರು ವಾರ ಮಾತ್ರ ಬಾಕಿ. ಈ ವಾರವೂ ಸೇರಿ ಇಲ್ಲಿಯವರೆಗೆ ಬರೋಬ್ಬರಿ 90 ಪ್ಲಸ್‌ ಚಿತ್ರಗಳ ಬಿಡುಗಡೆ ದಾಖಲಾಗಿದೆ. ಉಳಿದ ಮೂರು ವಾರಗಳಲ್ಲಿ ವಾರಕ್ಕೆ ಅಂದಾಜು ಮೂರು, ನಾಲ್ಕು ಚಿತ್ರಗಳು ಬಿಡುಗಡೆಯಾದರೂ ನೂರರ ಗಡಿ ದಾಟಲಿದೆ! ಅಲ್ಲಿಗೆ 6 ತಿಂಗಳಲ್ಲಿ ಬಿಡುಗಡೆ ಸಂಖ್ಯೆ ನೂರರ ಗಡಿ ದಾಟಿದರೆ ಮತ್ತೂಂದು ದಾಖಲೆ. ಈ ಅವಧಿಯಲ್ಲಿ ಚಿತ್ರಗಳ ಸಂಖ್ಯೆ ಹೆಚ್ಚಿದೆಯೇ ಹೊರತು, ಗೆಲುವಿನ ಸಂಖ್ಯೆ ವಿರಳ. ಹಳಬರು, ಹೊಸಬರು ಜಂಟಿ ಖಾತೆ ತೆರೆದರೂ ಇಲ್ಲಿ ಹೇಳುವಂತಹ ಸಕ್ಸಸ್‌ ದಾಖಲಾಗಲಿಲ್ಲ. ಇದುವರೆಗೆ ಬಿಡುಗಡೆಯಾದ ಚಿತ್ರಗಳಲ್ಲಿ ರಿಮೇಕ್‌ಗಿಂತ ಸ್ವಮೇಕ್‌ ಚಿತ್ರಗಳದ್ದೇ ಕಾರುಬಾರು. ಅದರಲ್ಲೂ ಹೊಸಬರೇ ಜೋರು. ಈವರೆಗೆ ಸ್ವಮೇಕ್‌ ಸಂಖ್ಯೆ ಹೆಚ್ಚು. ಅವುಗಳ ಹಿಂದೆ ಬಿದ್ದವರು ಸುದ್ದಿಯಾಗಲಿಲ್ಲ. ಪ್ರಯೋಗಾತ್ಮಕ ಚಿತ್ರ ಇಣುಕಿದರೂ ಗೆಲುವಿನ ಗೆರೆ ಮುಟ್ಟಿದ್ದು ಕಡಿಮೆ. ಈ ಅವಧಿಯಲ್ಲಿ ತುಳು ಚಿತ್ರಗಳೂ ಬಿಡುಗಡೆಯಾಗಿವೆ. ಹಾಗೆ ಬಂದ ಸಿನಿಮಾಗಳು ಹೇಗಿದ್ದವು, ನಿರೀಕ್ಷೆ ಹುಟ್ಟಿಸಿದ್ದ ಚಿತ್ರಗಳ ಕಥೆ ಏನಾಯಿತು ಇತ್ಯಾದಿ ಕುರಿತ ವರದಿ ಇಲ್ಲಿದೆ.

Advertisement

ಕನ್ನಡ ಚಿತ್ರರಂಗಕ್ಕೆ 2019 ರ ಜನವರಿಯಲ್ಲಿ ಚಾಲನೆ ಸಿಕ್ಕಿದ್ದೇ ಹಿರಿಯ ನಿರ್ದೇಶಕ ದೊರೆ-ಭಗವಾನ್‌ ನಿರ್ದೇಶನದ “ಆಡುವ ಗೊಂಬೆ’ ಚಿತ್ರದ ಮೂಲಕ. ಬಿಡುಗಡೆ ಮುನ್ನ ತಕ್ಕಮಟ್ಟಿಗೆ ನಿರೀಕ್ಷೆ ಹುಟ್ಟಿಸಿದ್ದೇನೋ ನಿಜ. ಕಾರಣ, 85 ನೇ ವಯಸ್ಸಲ್ಲಿ ನಿರ್ದೇಶನಕ್ಕಿಳಿದದ್ದು, ಎರಡು ದಶಕಗಳ ಬಳಿಕ ನಿರ್ದೇಶಿಸಿದ ಚಿತ್ರ ಎಂಬುದು. ಹೆಸರೊಂದೇ ಚಿತ್ರದ ಆಕರ್ಷಣೆಯಾಗಿತ್ತೇ ಹೊರತು, ನಿರೀಕ್ಷೆ ನಿಜವಾಗಲಿಲ್ಲ. ಈ ಸಿನಿಮಾ ಮೂಲಕ ಶುರುವಾದ ಬಿಡುಗಡೆ ಯಾನದಲ್ಲಿ ಶಿವರಾಜ್‌ಕುಮಾರ್‌ ಅವರ “ಕವಚ’, ಪುನೀತ್‌ರಾಜ್‌ಕುಮಾರ್‌ ಅವರ “ನಟಸಾರ್ವಭೌಮ’, ದರ್ಶನ್‌ ಅವರ “ಯಜಮಾನ’, ಗಣೇಶ್‌ ಅಭಿನಯದ “99′ ಚಿತ್ರಗಳ ಪೈಕಿ ಯಾವ ಚಿತ್ರವೂ ಹಿಟ್‌ಲಿಸ್ಟ್‌ಗೆ ಸೇರಲಿಲ್ಲ ಎಂಬುದೇ ವಿಪರ್ಯಾಸ. “ಕವಚ’ಕ್ಕೆ ಒಳ್ಳೆಯ ಮಾತುಗಳು ಕೇಳಿಬಂದಿದ್ದು ಬಿಟ್ಟರೆ, ಯಾವ ಪವಾಡ ಆಗಲಿಲ್ಲ. “ನಟಸಾರ್ವಭೌಮ’ನ ನಿರೀಕ್ಷೆ ಕೂಡ ಹುಸಿಯಾಯಿತು. “ಯಜಮಾನ’ಕ್ಕೆ ಸಿಕ್ಕ ಮೆಚ್ಚುಗೆ ಕಡಿಮೆಯೇನು ಇರಲಿಲ್ಲ. “99′ ರ ಫ‌ಲಿತಾಂಶ ಕೂಡ ನಗುವಿನ ಗೆರೆ ಮೂಡಿಸಲಿಲ್ಲ. ಉಳಿದಂತೆ ಯೋಗೇಶ್‌ ಅಭಿನಯದ “ಲಂಬೋದರ’, ವಿನೋದ್‌ ಪ್ರಭಾಕರ್‌ ಅವರ “ರಗಡ್‌’, ದಿಗಂತ್‌ ಅವರ “ಫಾರ್ಚುನರ್‌’, ವಿಜಯರಾಘವೇಂದ್ರ ಅವರ “ಧರ್ಮಸ್ಯ’, ಚಿತ್ರಗಳು ಬಂದರೂ ಸದ್ದು ಕೇಳಿಸಲಿಲ್ಲ. ನಾಲ್ವರು ಸ್ಟಾರ್‌ ಚಿತ್ರ ಬಂದರೂ ಗಟ್ಟಿ ನೆಲೆ ಕಾಣಲಿಲ್ಲ. ಮುಂದಿನ ದಿನಗಳಲ್ಲಿ ಸದ್ಯಕ್ಕೆ ಸ್ಟಾರ್‌ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಉಪೇಂದ್ರ ಅಭಿನಯದ “ಐ ಲವ್‌ ಯು’, ಸುದೀಪ್‌ ಅವರ ಪೈಲ್ವಾನ್‌’, ದರ್ಶನ್‌ ನಟನೆಯ “ಮುನಿರತ್ನ ಕುರುಕ್ಷೇತ್ರ’, ಶ್ರೀ ಮುರಳಿಯ “ಭರಾಟೆ’, ರಕ್ಷಿತ್‌ಶೆಟ್ಟಿ ಅವರ “ಅವನೇ ಶ್ರೀಮನ್ನಾರಾಯಣ’ ಪುನೀತ್‌ ನಟನೆಯ “ಯುವರತ್ನ’, ಧ್ರುವ ಸರ್ಜಾರ “ಪೊಗರು’ ಚಿತ್ರಗಳು ತೆರೆಕಂಡ ಬಳಿಕ ಪ್ರೇಕ್ಷಕ ಕೊಡುವ ಮಾರ್ಕ್ಸ್ ಮೇಲೆ ಫ‌ಲಿತಾಂಶ ಅಡಗಿದೆ.

ಮೋಡಿ ಮಾಡದ ರೀಮೇಕ್‌
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಐದು ತಿಂಗಳ ಅವಧಿಯಲ್ಲಿ ಬಿಡುಗಡೆಯಾದ ರಿಮೇಕ್‌ ಚಿತ್ರಗಳ ಸಂಖ್ಯೆ ಕಡಿಮೆ. ಇಷ್ಟು ಚಿತ್ರಗಳ ಪೈಕಿ ಬೆರಳೆಣಿಕೆ ಚಿತ್ರಗಳು ಮಾತ್ರ ರಿಮೇಕ್‌ ಎನಿಸಿಕೊಂಡಿವೆ. ಹಾಗಂತ ಅವ್ಯಾವೂ ಹೇಳುವ ಮಟ್ಟಿಗೆ ಗಮನಸೆಳೆಯಲಿಲ್ಲ. “ಕವಚ’ ಮಲಯಾಳಂ ಚಿತ್ರದ “ಒಪ್ಪಂ’ ರಿಮೇಕ್‌. ಕಥೆ, ನಿರೂಪಣೆ, ಅಭಿನಯ ಇತ್ಯಾದಿ ಚೆನ್ನಾಗಿದ್ದರೂ, ಚಿತ್ರಮಂದಿರದಲ್ಲಿ ಹೆಚ್ಚು ಸಮಯ ಉಳಿಯಲಿಲ್ಲ. ಹಾಗೆಯೇ, ಗಣೇಶ್‌ ಅಭಿನಯದ “99′ ಕೂಡ ತಮಿಳಿನ “”96′ ಚಿತ್ರದ ಅವತರಣಿಕೆ. ಇದು ನೋಡುಗರನ್ನು ಖುಷಿಪಡಿಸಲಿಲ್ಲ. ಉಳಿದಂತೆ ಸ್ಫೂರ್ತಿ ಪಡೆದ ಚಿತ್ರಗಳು ಬಂದರೂ ದೊಡ್ಡ ಪವಾಡ ನಡೆಯಲಿಲ್ಲ.

ಹೊಸಬರ ಲೆಕ್ಕಾಚಾರ
ಪ್ರತಿ ವರ್ಷ ಹೊಸ ನಿರ್ದೇಶಕರ ಸಂಖ್ಯೆ ಹೆಚ್ಚುತ್ತದೆ. ಹಾಗೆ, ಬಂದವರಲ್ಲಿ ಹೊಸ ನಿರ್ದೇಶಕರು ಒಂದಷ್ಟು ಮೋಡಿ ಮಾಡುವುದುಂಟು. ಈ ಸಲವೂ ಸಹ ಸಾಕಷ್ಟು ಹೊಸ ನಿರ್ದೇಶಕರು ಗಾಂಧಿನಗರಕ್ಕೆ ಧುಮುಕಿದರೂ, ಪ್ರಯತ್ನಕ್ಕೆ ಮೆಚ್ಚುಗೆ ಪಡೆದವರ ಸಂಖ್ಯೆ ತೀರಾ ಕಡಿಮೆ. ಹಾಗೆ ಹೆಸರಿಸುವುದಾದರೆ, “ಅನುಕ್ತ’, “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’, “ಕೆಮಿಸ್ಟ್ರಿ ಆಫ್ ಕರಿಯಪ್ಪ’, “ಒಂದ್‌ ಕಥೆ ಹೇಳಾÉ’, “ಅಡಚಣೆಗಾಗಿ ಕ್ಷಮಿಸಿ’, “ಸೂಜಿದಾರ’, “ಪ್ರೀಮಿಯರ್‌ ಪದ್ಮಿನಿ’ “ಮೂಕ ವಿಸ್ಮಿತ’,”ಗಿಣಿ ಹೇಳಿದ ಕಥೆ’, “ಲಂಬೋದರ’, ಚಿತ್ರಗಳ ಹೊಸ ನಿರ್ದೇಶಕರು ತಕ್ಕಮಟ್ಟಿಗೆ ಗಮನಸೆಳೆದರು. ಇದಷ್ಟೇ ಅಲ್ಲ, ಇವುಗಳೊಂದಿಗೆ ಅನುಭವಿ ನಿರ್ದೇಶಕರು ಸಹ ಬೇರೆ ಏನನ್ನೋ ಹೇಳಬೇಕು ಅಂತ ಬಯಸಿದರು. ಆದರೆ, ದೊಡ್ಡ ಮಟ್ಟದ ಪವಾಡ ಆಗಲಿಲ್ಲ. “ಸೀತಾರಾಮ ಕಲ್ಯಾಣ’, “ಪಂಚತಂತ್ರ’, “99′,”ಬಜಾರ್‌’,”ನಟಸಾರ್ವಭೌಮ’, “ಚಂಬಲ್‌’, “ಉದ^ರ್ಷ’, “ಪಡ್ಡೆಹುಲಿ’, “ಅಮರ್‌’, “ತ್ರಯಂಬಕಂ’,”ಕವಲುದಾರಿ’ ಹೀಗೆ ಅನುಭವಿ ನಿರ್ದೇಶಕರು ನಿರ್ದೇಶಿಸಿದ ಚಿತ್ರಗಳಾವೂ ಸರಿಯಾದ ಲೆಕ್ಕಾಚಾರ ಹೊಂದಲಿಲ್ಲ.

ಸೇಫ್ ಸಿನ್ಮಾಗಳು
ಚಿತ್ರರಂಗದಲ್ಲಿ ಎಷ್ಟೇ ಚಿತ್ರಗಳು
ಬಂದರೂ ಸೇಫ್ ಆಗುವ ಚಿತ್ರಗಳ ಸಂಖ್ಯೆ ಕಡಿಮೆ. ಯಾಕೆಂದರೆ, ಇಲ್ಲಿ ಹಾಕಿದ ಕಾಸಿಗೆ ಗ್ಯಾರಂಟಿ ಇರೋದಿಲ್ಲ. ಒಂದು ವೇಳೆ ಪ್ರೇಕ್ಷಕ ಜೈ ಅಂದರೆ ಅದು ಪವಾಡ. ಕೆಲ ನಿರ್ದೇಶಕರ ಹಾಗು ಹೀರೋಗಳ ಚಿತ್ರಗಳು ಇಲ್ಲಿ ಮಿನಿಮಮ್‌ ಗ್ಯಾರಂಟಿ. ಎಷ್ಟೇ ಬಜೆಟ್‌ ಹಾಕಿ ಚಿತ್ರ ಮಾಡಿದರೂ, ಕೆಲವೊಮ್ಮೆ ಲಾಭ ಬರದಿದ್ದರೂ, ನಷ್ಟ ಆಗಲ್ಲ. ಕಾರಣ, ಆಯಾ ನಿರ್ದೇಶಕ, ಹೀರೋಗೆ ಒಂದು ನೋಡುವ ವರ್ಗ ಇರುತ್ತೆ. ಅದಕ್ಕೂ ಹೆಚ್ಚಾಗಿ, ಟಿವಿ, ಡಬ್ಬಿಂಗ್‌ ರೈಟ್ಸ್‌ ಇತ್ಯಾದಿ ಮೂಲಗಳಿಂದ ಹಾಕಿದ ಹಣದ ಅರ್ಧದಷ್ಟು ಕಾಸು ಬಂದಿರುತ್ತೆ. ಹಾಗಾಗಿ ಈ ಅವಧಿಯಲ್ಲಿ ಬಿಡುಗಡೆಯಾಗಿರುವ ಒಂದಷ್ಟು ಚಿತ್ರಗಳಿಗೆ ನಷ್ಟ ಆಗಿಲ್ಲ ಎಂಬುದನ್ನು ಗಮನಿಸಬೇಕು. ಮೊದಲನೆಯದಾಗಿ “ಬೆಲ್‌ ಬಾಟಂ’ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತು. ಹಾಕಿದ ಕಾಸಿಗೆ ಮೋಸವಾಗಲಿಲ್ಲ. ಉಳಿದಂತೆ “ಯಜಮಾನ’,”ಕವಲುದಾರಿ’,”ನಟಸಾರ್ವಭೌಮ’, “ಕೆಮಿಸ್ಟ್ರಿ ಆಫ್ ಕರಿಯಪ್ಪ’,”ಪ್ರೀಮಿಯರ್‌ ಪದ್ಮಿನಿ’,”ಕವಚ’, “ಪಂಚತಂತ್ರ’ ಸೇರಿದಂತೆ ಕೆಲ ಚಿತ್ರಗಳಿಗೆ ನಷ್ಟದ ಮಾತಿಲ್ಲ. ಯಾಕೆಂದರೆ, ಕೆಲವು ಸ್ಟಾರ್ ಸಿನಿಮಾಗಳು. ಅವುಗಳಿಗೆ ಮಿನಿಮಮ್‌ ಗ್ಯಾರಂಟಿ ಇರುತ್ತೆ. ಇನ್ನು, ಗೆದ್ದಿರುವ ಹೊಸಬರ ಚಿತ್ರಗಳು ಕಾಸು ಮಾಡಿಕೊಂಡಿವೆ. ಕೆಲವು ಚಿತ್ರಗಳು ಚಿತ್ರಮಂದಿರದಲ್ಲಿ ಹೆಚ್ಚು ಸಮಯ ಇರದಿದ್ದರೂ ಟಿವಿ ರೈಟ್ಸ್‌ ಇತ್ಯಾದಿ ಮೂಲಕ ಸೇಫ್ ಆಗಿವೆ. ವಾರದ ಹಿಂದಷ್ಟೇ ತೆರೆಕಂಡ “ಅಮರ್‌’, “ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರಗಳಿಗೆ ಮೆಚ್ಚುಗೆ ಸಿಕ್ಕಿದೆಯಾದರೂ ಎಷ್ಟರಮಟ್ಟಿಗೆ ಸೇಫ್ ಎಂಬುದು ಗೊತ್ತಿಲ್ಲ.

Advertisement

ಸಸ್ಪೆನ್ಸ್‌-ಥ್ರಿಲ್ಲರ್‌ ಆಟ
ಇಲ್ಲಿಯವರೆಗೆ ಬಿಡುಗಡೆಯಾದ ಚಿತ್ರಗಳ ಪೈಕಿ ಹಾರರ್‌, ಸಸ್ಪೆನ್ಸ್‌, ಕ್ರೈಮ್‌, ಸೈಕಲಾಜಿಕಲ್‌ ಮತ್ತು ಕಾಮಿಡಿ ಥ್ರಿಲ್ಲರ್‌ ಚಿತ್ರಗಳು ಸದ್ದು ಮಾಡಿದ್ದೇ ಹೆಚ್ಚು. “ಅನುಕ್ತ’, “ಬೀರ್‌ಬಲ್‌’,”ಲಾಕ್‌’, ಮಿಸ್ಡ್ ಕಾಲ್‌’, “ಭೂತಕಾಲ’,”ಮಟಾಶ್‌’, “ತ್ರಯೋದಶ’, “ಗಹನ’, “ಒಂದ್‌ ಕಥೆ ಹೇಳಾ’, “ಫೇಸ್‌ 2 ಫೇಸ್‌’, “ಉದ^ರ್ಷ’, “ಕವಚ’, “ಕವಲುದಾರಿ’, “ನೈಟ್‌ ಔಟ್‌’, “ತ್ರಯಂಬಕಂ’, “ಖನನ’, “ತ್ರಯ’, “ದಿಗ½ಯಂ’, “ಕಮರೊಟ್ಟು ಚೆಕ್‌ಪೋಸ್ಟ್‌’ ಸೇರಿದಂತೆ ಇನ್ನು ಕೆಲವು ಚಿತ್ರಗಳು ಥ್ರಿಲ್‌ ಎನಿಸಿದವು ಹೊರತು, ಮೋಡಿ ಮಾಡಲಿಲ್ಲ.”ಕವಚ’, “ಕವಲುದಾರಿ’, “ಸೂಜಿದಾರ’, “ಅನುಕ್ತ’,”ಒಂದ್‌ ಕಥೆ ಹೇಳಾ’,”ಮಿಸ್ಸಿಂಗ್‌ ಬಾಯ್‌’,”ಪ್ರೀಮಿಯರ್‌ ಪದ್ಮಿನಿ’,”ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’,”ಬೀರ್‌ಬಲ್‌’,”ಕಳ್ಬೆಟ್ಟದ ದರೋಡೆಕೋರರು’,”ಅಮ್ಮನ ಮನೆ’, “ಅರಬ್ಬೀ ಕಡಲ ತೀರದಲ್ಲಿ’,””ಉದ್ಗರ್ಷ’,”ಮೂಕ ವಿಸ್ಮಿತ’, “ಡಾಟರ್‌ ಆಫ್ ಪಾರ್ವತಮ್ಮ’ ಸೇರಿದಂತೆ ಬೆರಳೆಣಿಕೆ ಚಿತ್ರಗಳು ಪ್ರಯತ್ನವಾಗಿ ಸುದ್ದಿಯಾದವು.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next