Advertisement

2 ವರ್ಷ ಕಳೆದರೂ ಬಾರದ ಫ‌ಲಿತಾಂಶ: ವಿದ್ಯಾರ್ಥಿಯಿಂದ ಪ್ರಧಾನಿಗೆ ದೂರು

02:27 AM Jul 10, 2019 | Team Udayavani |

ಪುತ್ತೂರು: ದೇಶಾದ್ಯಂತ ಹಲವಾರು ವಿದ್ಯಾರ್ಥಿಗಳು ಭಾರತ್‌ ಸ್ಕೌಟ್ ಹಾಗೂ ಗೈಡ್ಸ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರ್‌ ರಾಷ್ಟ್ರೀಯ ಪರೀಕ್ಷೆ ಬರೆದು ಎರಡು ವರ್ಷ ಕಳೆದರೂ ಇನ್ನೂ ಫಲಿತಾಂಶ ಬಂದಿಲ್ಲ ಎಂದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಾತ್ವಿಕ್‌ ಶರ್ಮ ಬಿ.ಎಸ್‌. ಅವರು ಪ್ರಧಾನಮಂತ್ರಿಗೆ ದೂರು ನೀಡಿದ್ದಾರೆ.

Advertisement

2017ರ ಪರೀಕ್ಷೆಯ ಫಲಿತಾಂಶ ಇನ್ನೂ ಬಂದಿಲ್ಲ. ಈ ಕುರಿತು 2018ರ ಡಿಸೆಂಬರ್‌ನಲ್ಲಿ ವಿದ್ಯಾರ್ಥಿಯು ಪಿಜಿ ಪೋರ್ಟಲ್ ಮೂಲಕ ಪ್ರಧಾನಿಗೆ ದೂರು ನೀಡಿದ್ದು, ಆ ದೂರನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಿ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಪ್ರತಿಕ್ರಿಯಿಸಲಾಗಿತ್ತು. ಅಲ್ಲಿಂದ ಅದನ್ನು ಭಾರತ್‌ ಸ್ಕೌಟ್ ಹಾಗೂ ಗೈಡ್ಸ್‌ಗೆ ಕಳುಹಿಸಲಾಗಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿತ್ತು.

ಆದರೂ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ತಂದೆ ರಾಜೇಶ ಕೃಷ್ಣಪ್ರಸಾದ ಅವರು ಆರ್‌ಟಿಐ ಮೂಲಕವೂ ವಿಚಾರಿಸಿದರು. ಒಮ್ಮೆ ಫಲಿತಾಂಶ ಸಿದ್ಧವಾಗಿದೆ ಎಂಬ ಉತ್ತರ ಬಂದರೆ, ಮತ್ತೂಮ್ಮೆ ಫಲಿತಾಂಶದ ಪ್ರಕ್ರಿಯೆ ನಡೆಯುತ್ತಿದೆ ಎಂಬ ಉತ್ತರ ಲಭ್ಯವಾಗಿತ್ತು.

ಹೀಗಾಗಿ ಸಾತ್ವಿಕ್‌ ಶರ್ಮ ಜೂ. 7ರಂದು ಮತ್ತೆ ಪ್ರಧಾನಿಗೆ ದೂರು ನೀಡಿದ್ದಾರೆ. ಜತೆಗೆ ಸ್ಕೌಟ್, ಗೈಡ್ಸ್‌ ಪ್ರಧಾನ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅದು ರಾಷ್ಟ್ರಪತಿ ಭವನದಲ್ಲಿ ಬಾಕಿ ಇದೆ ಎಂಬ ಉತ್ತರ ನೀಡುತ್ತಾರೆ ಎಂದು ರಾಜೇಶ್‌ ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.

ಸಾತ್ವಿಕ್‌ ಅವರು 2017ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿರುವಾಗ ಈ ಪರೀಕ್ಷೆ ಬರೆದಿದ್ದರು. ರಾಷ್ಟ್ರಪತಿ ಪುರಸ್ಕಾರ್‌ ಪರೀಕ್ಷೆ ಬರೆಯಬೇಕಾದರೆ ಬಹಳ ಶ್ರಮ ಪಡಬೇಕಿದ್ದು, 14 ಪ್ರಾಜೆಕ್ಟ್ಗಳನ್ನು ಮಾಡಬೇಕಾಗುತ್ತದೆ. ಜತೆಗೆ ಒಂದು ವಾರ ಕಾಲ ಬೆಂಗಳೂರಿನಲ್ಲಿ ಪರೀಕ್ಷೆ ನಡೆಯುತ್ತದೆ. ಒಟ್ಟು ಪ್ರಕ್ರಿಯೆಗೆ ಅವರು ತಿಂಗಳುಗಳ ಕಾಲ ಶಾಲೆಗೆ ರಜೆ ಮಾಡಬೇಕಾಗುತ್ತದೆ.

Advertisement

ಎಂಜಿನಿಯರಿಂಗ್‌, ಮೆಡಿಕಲ್ ಸೇರಿದಂತೆ ತಮ್ಮ ಉನ್ನತ ವ್ಯಾಸಂಗದ ವೇಳೆ ಮೀಸಲಾತಿ ಇರುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಾರೆ. ಆದರೆ ಫಲಿತಾಂಶ ವರ್ಷಗಟ್ಟಲೆ ವಿಳಂಬವಾದರೆ ಪ್ರಯೋಜನ ಏನು ಎಂದು ರಾಜೇಶ್‌ ಕೃಷ್ಣಪ್ರಸಾದ್‌ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next