ಹೊಸದಿಲ್ಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಸೆಬಿ ಮಾಜಿ ಅಧ್ಯಕ್ಷ ಎಂ.ದಾಮೋದರನ್ ಅವರ ನೇತೃತ್ವದಲ್ಲಿ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂದು ಪೇಟಿಎಂ ಮಾಲೀಕತ್ವದ ಒನ್97 ಕಮ್ಯೂನಿಕೇಶನ್ಸ್ ಶುಕ್ರವಾರ ಘೋಷಿಸಿದೆ.
ಹಣ ಪಾವತಿಗೆ ಸಂಬಂಧಿಸಿದಂತೆ ಆರ್‌ಬಿಐ ರೂಪಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನಿರ್ಬಂಧ ಕ್ರಮವನ್ನು ಎದುರಿಸುತ್ತಿದೆ.
ಸಲಹಾ ಸಮಿತಿಯು ಆರ್‌ಬಿಐ ಮಾರ್ಗಸೂಚಿಗಳ ಪಾಲನೆ ಮತ್ತು ಇತರೆ ವ್ಯವಹಾರಗಳ ವಿಷಯದಲ್ಲಿ ಕಂಪನಿಗೆ ಮಾರ್ಗದರ್ಶನ ನೀಡಲಿದೆ. ದಾಮೋದರನ್ ನೇತೃತ್ವದ ಸಲಹಾ ಸಮಿತಿಯಲ್ಲಿ ಐಸಿಎಐ ಮಾಜಿ ಅಧ್ಯಕ್ಷ ಎಂ.ಎಂ.ಚಿತಾಲೆ ಹಾಗೂ ಆಂಧ್ರ ಬ್ಯಾಂಕ್ ಮಾಜಿ ಅಧ್ಯಕ್ಷ, ಎಂಡಿ ಆರ್.ರಾಮಚಂದ್ರನ್ ಇರಲಿ ದ್ದಾರೆ ಒನ್ 97 ಕಮ್ಯೂನಿಕೇಶನ್ಸ್ ಎಂದು ತಿಳಿಸಿದೆ.
ಷೇರುಗಳ ಮೌಲ್ಯ ಇಳಿಕೆ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದ ನಂತರ ಪೇಟಿಎಂ ಮಾಲೀಕತ್ವದ ಒನ್ 97 ಕಮ್ಯೂನಿಕೇಶನ್ಸ್ ಷೇರುಗಳ ಮೌಲ್ಯ ದಿನೇ ದಿನೆ ಕುಸಿಯತೊಡಗಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಒನ್ 97 ಕಮ್ಯೂನಿಕೇಶನ್ಸ್ ಷೇರುಗಳ ಮೌಲ್ಯ ಶೇ.9ರಷ್ಟು ಇಳಿಕೆ ಕಂಡಿತು.