Advertisement

ಸೀಟ್‌ ಬೆಲ್ಟ್ ಎಚ್ಚರಿಕೆ ಸದ್ದು ಸ್ತಬ್ಧಗೊಳಿಸುವ ಸಾಧನಕ್ಕೆ ನಿರ್ಬಂಧ

09:05 PM May 12, 2023 | Team Udayavani |

ನವದೆಹಲಿ: ಕಾರುಗಳಲ್ಲಿ ಕುಳಿತಾಗ ಸೀಟ್‌ ಬೆಲ್ಟ್ ಧರಿಸದಿದ್ದರೆ ಒಳಗಿನಿಂದ ಒಂದು ಶಬ್ದ ಕೇಳಿಸುತ್ತದೆ. ನೀವು ಬೆಲ್ಟ್ ಧರಿಸಿದ ತಕ್ಷಣ ಆ ಸದ್ದು ನಿಲ್ಲುತ್ತದೆ. ಆದರೆ ಇಂತಹ ಸದ್ದೇ ಕೇಳದಂತಹ ಒಂದು ಅಲಾರ್ಮ್ ಸ್ಟಾಪರ್‌ ಕ್ಲಿಪ್‌ಗಳನ್ನು ನೀವು ಕಾರಲ್ಲಿ ಅಳವಡಿಸಿಕೊಂಡರೆ? ಅದನ್ನು ಆನ್‌ಲೈನ್‌ ತಾಣಗಳಲ್ಲಿ ರಾಜಾರೋಷವಾಗಿ ಮಾರಿದರೆ?

Advertisement

ಇಂತಹ ತಪ್ಪನ್ನು ಮಾಡುತ್ತಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌, ಶಾಪ್‌ಕ್ಲೂಸ್‌, ಮೀಶೊಗಳಿಗೆ ಸಿಸಿಪಿಎ (ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ) ಕಟು ಸಂದೇಶವನ್ನು ನೀಡಿದೆ. ತಕ್ಷಣ ಇಂತಹ ಸಾಧನಗಳನ್ನು ಮಾರುವುದನ್ನು ನಿಲ್ಲಿಸಬೇಕು, ಅದನ್ನು ಉತ್ಪಾದಿಸುವ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕೆಂದು ಸೂಚಿಸಿದೆ.
“ಜನರ ಅಮೂಲ್ಯ ಜೀವ ಉಳಿಸಬೇಕೆಂದು ಸಿಸಿಪಿಎ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಯನ್ನು ರವಾನಿಸಿದೆ. ಇ-ಕಾಮರ್ಸ್‌ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ಸ್ವಯಂಸೇವಕ ಗ್ರಾಹಕ ಸಂಘಗಳು ಇಂತಹ ಸಾಧನಗಳನ್ನು ಮಾರುವುದನ್ನು ತಡೆಯಬೇಕು” ಎಂದು ಸಿಸಿಪಿಎ ಹೇಳಿದೆ. ಸ್ವತಃ ಕೇಂದ್ರ ಹೆದ್ದಾರಿ ಸಚಿವಾಲಯದ ಮನವಿ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಹಾಗೆಯೇ ಗ್ರಾಹಕರಿಗೂ ಎಚ್ಚರಿಕೆ ನೀಡಲಾಗಿದೆ. ಸೀಟ್‌ ಬೆಲ್ಟ್ ಅಲಾರ್ಮ್ ತಡೆಯುವ ಕ್ಲಿಪ್‌ ನೀವು ಅಳವಡಿಸಿಕೊಂಡಿದ್ದರೆ ನೀವು ಯಾವುದೇ ವಾಹನ ಅಪಘಾತದಲ್ಲಿ ವಿಮೆ ಪಡೆಯಲು ಸಾಧ್ಯವಿಲ್ಲ. ವಿಮಾ ಅಧಿಕಾರಿ ಅದನ್ನು ತಿರಸ್ಕರಿಸಬಹುದು ಎಂದು ಸಿಸಿಪಿಎ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next