Advertisement

ಹಾಸನಾಂಬೆ ದರ್ಶನಕ್ಕೆ ಈ ವರ್ಷವೂ ನಿರ್ಬಂಧ!

04:35 PM Oct 08, 2021 | Team Udayavani |

ಹಾಸನ: ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರಜಾತ್ರೆಯನ್ನು ಅ.28 ರಿಂದ ನ. 6ರವರೆಗೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿರುವ ಜಿಲ್ಲಾಡಳಿತ, ಭಕ್ತರು ದೇವರ ದರ್ಶನಕ್ಕೆ ಬರುವುದನ್ನು ನಿರ್ಬಂಧಿಸಲು ನಿರ್ಧರಿಸಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಕೆಲ ಶಾಸಕರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ಈ ನಿರ್ಧಾರ ಕೈಗೊಂಡ ಸಭೆಯು ಜಾತ್ರಾ ಮಹೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.

ಸರಳ ಆಚರಣೆ ಸೂಕ್ತ: ಸಭೆಯ ಪ್ರಾರಂಭದಲ್ಲಿಯೇ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ನಾಲ್ಕು ದಿನಗಳ ಹಿಂದೆ ಶೇ. 0.90 ಇದ್ದದ್ದು ಈಗ ಶೇ. 1.27ಕ್ಕೆ ಏರಿಕೆಯಾಗಿದೆ. ಆದ್ದರಿಂದ ಹಾಸನಾಂಬ ಉತ್ಸವ ಸರಳವಾಗಿ ಆಚರಿಸುವುದು ಸೂಕ್ತ. ಕೊರೊನಾ ನಿಯಂತ್ರಣ ಕ್ರಮವಾಗಿ ಮೈಸೂರು ದಸರಾಕ್ಕೆ ಸರ್ಕಾರ ಸಾರ್ವಜನಿಕರ ಪ್ರವೇಶವನ್ನು ಮಹೋತ್ಸವಕ್ಕೂ ಸಾರ್ವಜನಿಕರ ಪ್ರವೇಶವನ್ನು ಕಳೆದ ವರ್ಷದಂತೆಯೇ ನಿರ್ಬಂಧಿಸುವ ಅಗತ್ಯವಿದೆ ಎಂದರು.

ಜಿಲ್ಲಾಧಿಕಾರಿ ಅಭಿಪ್ರಾಯಕ್ಕೆ ಸಭೆಯಲ್ಲಿ ಹಾಜರಿದ್ದ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂ ಗೌಡ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್‌.ಬಾಲಕೃಷ್ಣ, ಕೆ.ಎಸ್‌. ಲಿಂಗೇಶ್‌ ಸಮ್ಮತಿಸಿ ಕಳೆದ ವರ್ಷದದಂತೆಯೇ ಈವರ್ಷವೂ ಜಾತ್ರೋತ್ಸವ ಆಚರಿಸಿ, ಜಾತ್ರೋತ್ಸವದ ವಿಜೃಂಭಣೆ, ಸಂಪ್ರದಾಯ ಆಚರಣೆ ಮುಂದುವರಿಯಲಿ ಎಂದರು. ಹಾಸನಾಂಬಾ ದೇವಾಲಯದಲ್ಲಿ ಪುಷ್ಪಾಲಂಕಾರ, ಹಾಸನ ನಗರದಲ್ಲಿ ದೀಪಾಲಂಕಾರ ಮತ್ತಿತರ ವಿಜೃಂಭಣೆಯ ಕಾರ್ಯಕ್ರಮಗಳು ಹಾಗೂ ಸಾಂಪದಾಯಿಕ ಪೂಜಾ ಕಾರ್ಯಕ್ರಮಗಳನ್ನು ಕಳೆದವರ್ಷದಂತೆಯೇ ಈ ವರ್ಷವೂ ಮುಂದುವರಿಸಲು ಹಾಗೂ ದೇವಾಲಯದ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದನ್ನೂ ಓದಿ:– ಆಡಳಿತಾತ್ಮಕ ಹಿತದೃಷ್ಟಿಯಿಂದ ಹೇಮಾವತಿ ಎಡದಂಡೆ ನಾಲಾ ವಿಭಾಗ ಕಚೇರಿಗಳ ಸ್ಥಳಾಂತರ

Advertisement

ದೇವಿ ದರ್ಶನ ಸಿಗಲಿಲ್ಲ: ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರನ್ನು ನಿರ್ಬಂಧಿಸಿದರೂ ಜನಪ್ರತಿನಿಧಿಗಳು ಹಾಗೂ ವಿವಿಐಪಿಗಳುದರ್ಶನಕ್ಕೆ ಬಂದಾಗ ನೂರಾರು ಜನರು ದೇವಾಲಯ ಪ್ರವೇಶಿಸಿ ದೇವರ ದರ್ಶನ ಪಡೆಯುತ್ತಾರೆ ಎಂಬ ದೂರು ಸಭೆಯಲ್ಲಿ ಕೇಳಿ ಬಂತು. ಆ ಸಂದರ್ಭದಲ್ಲಿ ಶಾಸಕ ಪ್ರೀತಂ ಜೆ.ಗೌಡ ಅವರು, ಕಳೆದ ವರ್ಷ ತಮ್ಮ ಹಿಂಬಾಲಕರೆಲ್ಲರನ್ನೂ ಹಾಸನಾಂಬೆ ದರ್ಶನಕ್ಕೆ ಕಳುಹಿಸಿದ್ದರು. ಆದರೆ ಭಕ್ತರಿಗೆ ದೇವಿ ದರ್ಶನದ ಅವಕಾಶ ಸಿಗಲಿಲ್ಲ ಎಂದು ಛೇಡಿಸಿದರು.

ಆನ್‌ಲೈನ್‌ನಲ್ಲೇ ದೇವಿ ದರ್ಶನಕ್ಕೆ ಅವಕಾಶ ಕಳೆದ ವರ್ಷದಂತೆ ಈ ವರ್ಷವೂ ವಿವಿಐಪಿ, ವಿಐಪಿಗಳು ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸುವುದು. ಅದಕ್ಕಾಗಿ ಪಾಸ್‌ ವ್ಯವಸ್ಥೆ ಮಾಡಲಾಗುವುದು. ಭಕ್ತರು ದೇವಾಲಯದಲ್ಲಿ ಹಾಸನಾಂಬೆಯ ನೇರ ದರ್ಶನಕ್ಕೆ ಅವಕಾಶ ಕೊಡದಿದ್ದರೂ ಆನ್‌ಲೈನ್‌ನಲ್ಲಿ ಹಾಗೂ ಹಾಸನ ಪ್ರಮುಖ 7ರಿಂದ 8 ಸ್ಥಳಗಳಲ್ಲಿ ಎಲ್‌ಇಡಿ ಪರದೆಯ ಮೇಲೆ ಹಾಸನಾಂಬೆಯ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಶಾಸಕರ ಸ್ವಾಮಿ ನಿಷ್ಠೆ ಪ್ರದರ್ಶನ ಹಾಸನಾಂಬ ಜಾತ್ರಾ ಮಹೋತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಹೇಳಿದ ತಕ್ಷಣ ಶಾಸಕ ಸಿ.ಎನ್‌. ಬಾಲಕೃಷ್ಣ ಅವರು, ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡ ಅವರನ್ನೂ ಆಹ್ವಾನಿಸಬೇಕು. ಉಸ್ತುವಾರಿ ಸಚಿವರೇ ಖುದ್ದು ದೇವೇಗೌಡರ ಭೇಟಿಯಾಗಿ ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.

ಈ ಸಲಹೆ ಬಂದ ತಕ್ಷಣವೇ ಶಾಸಕ ಪ್ರೀತಂ ಜೆ.ಗೌಡ ಅವರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಆಹ್ವಾನಿಸಬೇಕು ಎಂದು ಹೇಳಿದರು. ಶಾಸಕರಿಬ್ಬರು ಸ್ವಾಮಿ ನಿಷ್ಠೆ ಪ್ರದರ್ಶಿಸಿದ್ದನ್ನುಕಂಡು ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಎಲ್ಲ ಮಾಜಿಗಳನ್ನೂ ಆಹ್ವಾನಿಸಿ ಬಿಡಿ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next