Advertisement

Light House ಪಕ್ಕದಲ್ಲಿ ಸಮುದ್ರಕ್ಕೆ ಇಳಿಯುವುದು ಹಾಗೂ ಬಂಡೆ ಮೇಲಿನ ಪ್ರವೇಶಕ್ಕೆ ನಿರ್ಬಂಧ

01:58 PM Jul 10, 2023 | Team Udayavani |

ಕಾಪು: ಬೀಚ್‌ನಲ್ಲಿ ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಲೈಟ್‌ಹೌಸ್ ಪಕ್ಕದಲ್ಲಿ ಸಮುದ್ರಕ್ಕೆ ಇಳಿಯುವುದು ಮತ್ತು ಲೈಟ್‌ಹೌಸ್ ಬಂಡೆ ಮೇಲಿನ ಪ್ರವೇಶ ನಿರ್ಬಂಧಿಸಲಾಗಿದೆ.

Advertisement

ಕಡಲು ಪ್ರಕ್ಷುಬ್ಧಗೊಂಡು, ಲೈಟ್‌ಹೌಸ್ ಬಳಿಯಲ್ಲಿ ಸಮುದ್ರ ಮತ್ತು ಹಿನ್ನೀರಿನ ಹೊಳೆ ಪರಸ್ಪರ ಜೋಡಣೆಯಾಗಿದೆ. ಇದರಿಂದಾಗಿ ಲೈಟ್‌ಹೌಸ್ ಇರುವ ಬಂಡೆ ಮೇಲೆ ಪ್ರವೇಶಿಸುವುದೇ ಕಷ್ಟಕರವಾಗಿದೆ. ಇಷ್ಟಿದ್ದರೂ ಕೆಲವೊಂದು ಪ್ರವಾಸಿಗರು ಪ್ರಯಾಸಪಟ್ಟು ಮೆಟ್ಟಿಲುಗಳನ್ನೇರಿ ಲೈಟ್ ಹೌಸ್ ಪಕ್ಕಕ್ಕೆ ಹೋಗಲು ಪ್ರಯತ್ನಿಸುತ್ತಿರುವುದರಿಂದ ಆ ಪ್ರದೇಶಕ್ಕೆ ಹೋಗುವುದನ್ನೇ ನಿರ್ಬಂಧಿಸಿ ಹಗ್ಗ ಕಟ್ಟಿ ಎಚ್ಚರಿಕೆ ಫಲಕ ಅಳವಡಿಸಲಾಗಿದೆ.

ಈಗಾಗಲೇ ಸಮುದ್ರ ಎರಡು ಅಡಿಯಷ್ಟು ಆಳದವರೆಗಿನ ಮರಳನ್ನು ತನ್ನ ಒಡಲಿಗೆ ಎಳೆದುಕೊಂಡಿದ್ದು ಲೈಟ್ ಹೌಸ್ ಮತ್ತು ಸಮುದ್ರದ ನಡುವೆ ಒಂದೂವರೆ ಅಡಿಯಷ್ಟು ಆಳಕ್ಕೆ ಇಳಿದಿದೆ. ಇದರಿಂದಾಗಿ ಲೈಟ್‌ಹೌಸ್ ಹೋಗುವ ದಾರಿ ಬಂದ್ ಆಗಿದೆ. ಕಳೆದ 3-4 ದಿನಗಳಿಂದ ಲೈಟ್ ಹೌಸ್‌ಗೂ ಬೀಗ ಜಡಿಯಲಾಗಿದ್ದು, ಪ್ರವಾಸಿಗರಿಗೆ ಒಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ.

ಕಾಪು ಬೀಚ್‌ನಲ್ಲಿ ಸುಮಾರು 200-300 ಮೀಟರ್ ಉದ್ದದವರೆಗೂ ಸಮುದ್ರಕ್ಕೆ ಇಳಿಯುವುದು ಅಪಾಯಕಾರಿ ಎಂಬ ಫಲಕ ಅಳವಡಿಸಲಾಗಿದ್ದು ಪೊಲೀಸ್ ಮತ್ತು ಗೃಹರಕ್ಷದಳ ಸಿಬಂದಿಗಳು ಹಾಗೂ ಬೀಚ್ ನಿರ್ವಹಣಾ ಸಿಬಂದಿಗಳು ಹಗಲು ರಾತ್ರಿ ಬೀಚ್‌ನಲ್ಲಿ ಕಾವಲು ಕಾಯುವಂತಾಗಿದೆ.

ರವಿವಾರ ರಜಾದಿನವಾಗಿದ್ದರಿಂದ ಹೊರಗಿನ ಪ್ರವಾಸಿಗರು ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಅವರಿಗೆ ಪದೇ ಪದೇ ಎಚ್ಚರಿಕೆ ನೀಡಿ ಭದ್ರತಾ ಸಿಬಂದಿಗಳು ಹೈರಾಣಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next