Advertisement

ಪ್ರವಾಸಿಗರಿಗೆ ನಿರ್ಬಂಧ: ಸಫಾರಿ ಬಂದ್‌

05:47 AM Jul 10, 2020 | Lakshmi GovindaRaj |

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ತಡೆಗಟ್ಟಲು ಶುಕ್ರವಾರದಿಂದ ಎಚ್‌.ಡಿ.ಕೋಟೆ ತಾಲೂಕಿಗೆ ಹೊರರಾಜ್ಯ/ವಿದೇಶ/ಹೊರಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌  ನಿರ್ಬಂಧ ವಿಧಿಸಿದ್ದಾರೆ.

Advertisement

ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್‌-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಸಮುದಾಯದ ತುರ್ತು ಪರಿಸ್ಥಿತಿ ಎದುರಿಸಲು ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿರುವ ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶದಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಜು.10ರಿಂದ ಮುಂದಿನ ಆದೇಶದವರೆಗೆ ಕೋವಿಡ್‌-19 ಸೋಂಕು ಹರಡದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಚ್‌.ಡಿ.ಕೋಟೆ ತಾಲೂಕಿನ ಎಲ್ಲ ಹೋಟೆಲ್‌, ರೆಸಾರ್ಟ್‌, ಲಾಡ್ಜ್, ಹೋಂ ಸ್ಟೇ, ವಸತಿ ಗೃಹಗಳಲ್ಲಿ ವಸತಿ ಸೌಕರ್ಯ ನೀಡದಂತೆ ಆದೇಶ ಹೊರಡಿಸಿದ್ದಾರೆ. ಹೊರ ಜಿಲ್ಲೆ, ರಾಜ್ಯ, ಹಾಗೂ ವಿದೇಶಗಳಿಂದ ಬರುವ  ಪ್ರವಾಸಿಗರಿಗೆ ವಸತಿ ಸೌಕರ್ಯ ನೀಡುವಂತಿಲ್ಲ.

ಅಲ್ಲದೇ ಇನ್ನು ಮುಂದೆ ಹೊರಗಿನ ಪ್ರವಾಸಿಗರ ಆನ್‌ ಲೈನ್‌, ಆಫ್ಲೈನ್‌ ಬುಕ್ಕಿಂಗ್‌ ಸ್ವೀಕರಿಸುವಂತಿಲ್ಲ ಎಂದು ಸೂಚಿಸಿದ್ದಾರೆ. ಈಗಾಗಲೇ ಆಗಮಿಸಿ ವಸತಿ ಸೌಕರ್ಯ ಹೊಂದಿರುವ  ವಾಸಿಗರನ್ನು  ಬಲವಂತವಾಗಿ ವಾಪಸ್‌ ಕಳುಹಿಸದೇ ಅವರನ್ನು ಅವಧಿ ಪೂರ್ಣಗೊಳ್ಳುವವರೆಗೂ ಕಾಯ್ದಿರಿಸುವುದು ಹಾಗೂ ಈಗಾಗಲೇ ಮುಂಗಡ ಬುಕ್ಕಿಂಗ್‌ ಮಾಡಿ ಬಂದಿಲ್ಲದಿದ್ದರೆ ಬುಕ್ಕಿಂಗ್‌ ರದ್ದು ಪಡಿಸುವಂತೆ ತಿಳಿಸಿದ್ದಾರೆ.

ಈ ನಿರ್ಬಂಧಗಳು  ಎಚ್‌.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ, ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಲ್ಲಿ ಬರುವ ಎಲ್ಲ ಸಫಾರಿಗಳಿಗೂ ಅನ್ವಯವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಸಭೆ ಸಮಾರಂಭಗಳು ರದ್ದು: ಕೋವಿಡ್‌-19 ಹರಡುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸಭೆ, ಸಮಾರಂಭಗಳನ್ನು ಕೈ ಬಿಡಬೇಕು. ಜನದಟ್ಟಣೆ ಕಾರ್ಯಕ್ರಮಗಳು ಹಾಗೂ ಜನ ಸೇರುವುದನ್ನು ತಡೆಗಟ್ಟಲು ಭೂಮಿ  ಪೂಜೆ, ಉದ್ಘಾಟನೆ ಹಾಗೂ ಇತರೆ ಸಮಾರಂಭಗಳನ್ನು ಕೈ ಬಿಡುವಂತೆ ಹಾಗೂ ಅನಿವಾರ್ಯ ಪರಿಸ್ಥಿತಿ ಯಲ್ಲಿ ಸಾಂಕೇತಿಕವಾಗಿ 20 ಜನರು ಮೀರದ ಹಾಗೆ ಕಾರ್ಯಕ್ರಮ ವನ್ನು ನಡೆಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next