Advertisement

ನಿರ್ಬಂಧ ಮತ್ತಷ್ಟು ಸಡಿಲ; ಸೋಮವಾರದಿಂದ ಅನ್‌ಲಾಕ್‌ 1.0 ಆರಂಭ

12:28 AM Jun 07, 2020 | Sriram |

ಬೆಂಗಳೂರು: ಲಾಕ್‌ಡೌನ್‌ ಐದನೇ ಹಂತದಲ್ಲಿ ಸೋಮವಾರ, ಜೂ.8ರಿಂದ ಹೊಟೇಲ್‌, ಮಾಲ್‌ ಸಹಿತ ಬಹುತೇಕ ಚಟುವಟಿಕೆ ಪುನರಾರಂಭಗೊಳ್ಳಲಿದ್ದು, ಆರ್ಥಿಕತೆ ಸಾಮಾನ್ಯ ಸ್ಥಿತಿಗೆ ಬರುವ ಸಾಧ್ಯತೆ ಇದೆ.

Advertisement

ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಜೂನ್‌ 30ರ ವರೆಗೆ ಲಾಕ್‌ಡೌನ್‌ ಮುಂದುವರಿದಿದೆಯಾದರೂ ಹಂತಹಂತವಾಗಿ ಸಡಿಲಿಕೆಯನ್ನೂ ಮಾಡಲಾಗುತ್ತಿದೆ.

ಎಲ್ಲ ದೇವಸ್ಥಾನಗಳು, ಚರ್ಚ್‌, ಮಸೀದಿಗಳನ್ನು ತೆರೆದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಡಳಿತ ಮಂಡಳಿಗಳಿಗೆ ಸರಕಾರ ನಿರ್ದೇಶನ ನೀಡಿದೆ. ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಪ್ರಸಾದ ವಿತರಣೆಗೆ ನಿರ್ಬಂಧ ವಿಧಿಸಲಾಗಿದೆ.

ಭಕ್ತರು ಹರಕೆ, ಪೂಜೆ ಮತ್ತು ಸಮರ್ಪಣೆಯ ಸುವಸ್ತುಗಳನ್ನು ತಂದರೂ ಅವುಗಳನ್ನು ಪಡೆದು ದೇವರಿಗೆ ಅರ್ಪಿಸದಂತೆ ದೇವಸ್ಥಾನ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ.

ಆರಾಧನಾಲಯಗಳ ಪ್ರವೇಶದ್ವಾರದಲ್ಲಿ ಎಲ್ಲ ಭಕ್ತರಿಗೂ ಸ್ಯಾನಿಟೈಸರ್‌ ನೀಡಬೇಕು ಮತ್ತು ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದೆ. 65 ವರ್ಷ ಮೀರಿದ ಹಿರಿಯ ನಾಗರಿಕರು ಮತ್ತು 10 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿದೆ.

Advertisement

ಸರಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ದೇವಸ್ಥಾನಗಳು, ಚರ್ಚ್‌ ಮತ್ತು ಮಸೀದಿ ಆಡಳಿತ ಮಂಡಳಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭಿಸಿವೆ.

ರಾತ್ರಿ ಬಸ್‌ ಸಂಚಾರ ಆರಂಭ
ಈ ಮಧ್ಯೆ ಪ್ರಯಾಣಿಕರ ಅಂತರ್‌ ಜಿಲ್ಲಾ ಸಂಚಾರ ಕ್ಕಾಗಿ ಬಸ್‌ ಸಂಖ್ಯೆ ಹೆಚ್ಚಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ರಾತ್ರಿ ಬಸ್‌ ಆರಂಭಿಸಲು ನಿರ್ಧರಿಸಿದೆ.

ಎಸಿ ಬಸ್‌ಗಳಲ್ಲಿ ನಿರ್ದಿಷ್ಟ ಉಷ್ಣತೆ ಕಾಪಾಡಿಕೊಳ್ಳುವಂತೆ ಸಂಬಂಧಪಟ್ಟ ಸಿಬಂದಿಗೆ ಇಲಾಖೆ ನಿರ್ದೇಶನ ನೀಡಿದೆ.

ಮಾಸ್ಕ್ ಇದ್ದರೆ ಮಾತ್ರ ಮಾಲ್‌
ಸೋಮವಾರದಿಂದ ಶಾಪಿಂಗ್‌ ಮಾಲ್‌ಗ‌ಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರ ದೇಹ ಉಷ್ಣತೆ ತಪಾಸಣೆ, ಸ್ಯಾನಿಟೈಸರ್‌ ಬಳಕೆ ಮತ್ತು ಮಾಸ್ಕ್ ಹಾಕಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ.ಜೂ. 8ರಿಂದ ಸಾಂಸ್ಥಿಕ ಕ್ವಾರಂಟೈನ್‌ ವ್ಯವಸ್ಥೆಯನ್ನು ಬಹುತೇಕ ಕಡಿತಗೊಳಿಸಿ 14 ದಿನಗಳ ಹೋಂ ಕ್ವಾರಂಟೈನ್‌ ಕಡ್ಡಾಯಗೊಳಿಸುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಯಾವುದು ಇದೆ?
 ದೇವಸ್ಥಾನ
ಮಸೀದಿ
ಚರ್ಚ್‌
ರೆಸಾರ್ಟ್‌,
ಜಂಗಲ್‌ ಲಾಡ್ಜ್
ಹೊಟೇಲ್‌  ರೆಸ್ಟಾರೆಂಟ್‌ ,
ಮಾಲ್‌ (ಚಿತ್ರಮಂದಿರ ಇಲ್ಲ),
ರಾತ್ರಿ ಬಸ್‌, ಎಸಿ ಬಸ್‌ ಸೇವೆ
ರೈಲು ಸೇವೆ

ಯಾವುದು ಇಲ್ಲ ?
ಶಾಲೆ, ಕಾಲೇಜು
ಬಾರ್‌
ಸ್ವಿಮ್ಮಿಂಗ್‌ ಪೂಲ್‌
ಜಿಮ್‌
ಕ್ಲಬ್‌
ಚಿತ್ರಮಂದಿರ
ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು

Advertisement

Udayavani is now on Telegram. Click here to join our channel and stay updated with the latest news.

Next