Advertisement

ಹಳ್ಳಿಗಳಲ್ಲಿ ಸೋಂಕು ಹೆಚ್ಚಿದರೆ ನಿರ್ಬಂಧಿತ ವಲಯ ಘೋಷಣೆ

04:25 PM Aug 08, 2021 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್‌ 3ನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಜಿಲ್ಲೆಯ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ತಿಳಿಸಿದರು.

Advertisement

ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.ದೇವಸ್ಥಾನಗಳಲ್ಲಿ
ದೇವರ ದರ್ಶನ, ದೈನಂದಿನ ಪೂಜೆಯನ್ನು ಹೊರತುಪಡಿಸಿ ಸೇವೆ, ಪ್ರಸಾದ, ಅನ್ನ ಸಂತರ್ಪಣೆ, ಮುಡಿ ತೆಗೆಯುವುದು ಹಾಗೂ ವಸತಿ ವ್ಯವಸ್ಥೆಗಳಿಗೆ ಅವಕಾಶವಿರುವುದಿಲ್ಲ. ಜಾತ್ರೆ, ಉತ್ಸವ, ಮೆರವಣಿಗೆ ಮತ್ತು ಧಾರ್ಮಿಕ ಸಭೆ-ಸಮಾರಂಭಗಳನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಸರ್ಕಾರಿ ಮಾರ್ಗಸೂಚಿಗಳಂತೆ ದಂಡ ವಿಧಿಸಬೇಕು, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮದುವೆ ಮತ್ತು ಇನ್ನಿತರೆ ಸಮಾರಂಭಗಳಲ್ಲಿ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ತಹಶೀಲ್ದಾರ್‌ ಪೂರ್ವಾನುಮತಿ ಪಡೆಯಬೇಕು. ಜಿಲ್ಲೆಯಲ್ಲಿ ಕೋವಿಡ್‌ ಟೆಸ್ಟಿಂಗ್‌ ಹೆಚ್ಚಿಸುವ ಮೂಲಕ ಕೊರೊನಾ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಪತ್ತೆ ಮಾಡಿ, ಐಸೊಲೇಷನ್‌ ಮಾಡಲಾಗುವುದು ಎಂದರು.

ಇದನ್ನೂ ಓದಿ:ಚಂದನವನಕ್ಕೆ RX 100 ಸುಂದರಿ: ಡಾಲಿ ಸಿನಿಮಾದಲ್ಲಿ ಬೋಲ್ಡ್ ಬೆಡಗಿ

ಹಳ್ಳಿಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಲ್ಲಿ ಅಂತಹ ಹಳ್ಳಿಗಳನ್ನು ನಿರ್ಬಂಧಿತ ವಲಯಗಳೆಂದು ಗುರುತಿಸಿ, ಸರ್ಕಾರಿ ಕೋವಿಡ್‌ ಮಾನದಂಡದಂತೆ ಸೀಜ್‌ ಮಾಡಲಾಗುವುದು. ಹೋಟೆಲ್‌, ಲಾಡ್ಜ್, ರೆಸಾರ್ಟ್‌, ಪಾರ್ಟಿ ಹಾಲ್‌ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರು ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಹಾಗೂ ಮುಂಬರುವ ದಿನಗಳಲ್ಲಿ ಸರಣಿ ಸಾಲಿನಲ್ಲಿ ಧಾರ್ಮಿಕ ಹಬ್ಬಗಳು ಬರುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಮೈದಾನ, ಪಾರ್ಕ್‌, ಮಾರುಕಟ್ಟೆ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಗುಂಪು ಸೇರಿ, ಹಬ್ಬ ಆಚರಿಸುವಂತಿಲ್ಲ ಎಂದರು. ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಾಹಣಾ ಕಾಯ್ದೆ 2005ರ ವಿಭಾಗ 22ರಡಿ ಮತ್ತು ಸಂಬಂಧಿತ ಸೆಕ್ಷನ್‌ಗಳಾದ 51 ರಿಂದ 60ರಡಿ, ಐಪಿಸಿ ಸೆಕ್ಷನ್‌ 188 ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಸೆಕ್ಷನ್‌ 4, 5, ಮತ್ತು 10ರಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.

ಜಿಲ್ಲಾದ್ಯಂತ ರಾತ್ರಿ ಕರ್ಫ್ಯೂ ಜಾರಿ
ರಾಜ್ಯ ಸರ್ಕಾರದ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಆಗಸ್ಟ್‌ 16ರವರೆಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆ ಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್‌ ಸೂಕ್ತ ನಡುವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ 100 ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಂತೆ ಮದುವೆ, ಕುಟುಂಬ ಕಾರ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು, ಅಂತ್ಯಸಂಸ್ಕಾರವನ್ನು ಗರಿಷ್ಠ 20 ಜನರೊಂದಿಗೆ ಅನುಮತಿಸಲಾಗಿದೆ. ಈ ಮೇಲಿನ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ,2005ರ ಸೆಕ್ಷನ್‌ 51 ರಿಂದ 60ರಡಿ ಹಾಗೂ ಐಪಿಸಿ ಸೆಕ್ಷನ್‌188ರ ಅಡಿಯಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next