ಬೆಂಗಳೂರು: ಮೆಟ್ರೋ ಕಾರಣಕ್ಕಾಗಿ ಸ್ಥಳಾಂತರವಾಗಿದ್ದ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪುನಃ ವಿಧಾನಸೌಧದ ಮುಂಭಾಗದಲ್ಲಿ ಮರುಸ್ಥಾಪನೆ ಮಾಡಲು ಕೂಡಲೇ ಸ್ಥಳಾಂತರ ಮಾಡಲು ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚಾರಣೆಯ ಅಂಗವಾಗಿ ಇಂದು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ದೇಶ ನಿರ್ಮಿಸಲು ಸಂಕಲ್ಪಿತರಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಪ್ರತಿಜ್ಞೆ ಮಾಡಿದ್ದೇವೆ. ಸುಭಾಷ್ ಚಂದ್ರ ಬೋಸ್ ಅವರ ಹೆಸರಿನಲ್ಲಿಯೇ ದೇಶಪ್ರೇಮವಿದೆ. ದೇಶಪ್ರೇಮ, ದೇಶ ಉಳಿಸುವುದು ಹಾಗೂ ದೇಶ ಕಟ್ಟುವ ವಿಚಾರದಲ್ಲಿ ಯಾವುದೇ ದುರ್ಬಲ ವಿಚಾರವಿರಬಾರದು ಎಂದಿದ್ದರು. ಅವರಿಗೆ ದಿಟ್ಟ, ಸ್ಪಷ್ಟ, ನಿಲುವಿತ್ತು. ಅಂದಿನ ಬ್ರಿಟಿಷರ ವಿರುದ್ಧ ನೇರವಾಗಿ ಯುದ್ಧ ಮಾಡಬೇಕೆಂಬ ವಿಚಾರ, ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನ ಹಲವು ದಿಗ್ಗಜರ ವಿರುದ್ಧ ಅವರು ತಮ್ಮ ವಿಚಾರಧಾರೆಯನ್ನು ಮಂಡಿಸಿದರು. ಕಾಂಗ್ರೆಸ್ ಗಿಂತ ವಿಭಿನ್ನ ವಿಚಾರಗಳಿದ್ದರಿಂದ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ಕೂಡ ಅಧಿಕೃತ ಅಭ್ಯರ್ಥಿ ವಿರುದ್ಧ ನಿಂತು ಜಯಶಾಲಿಯಾದರು ಎಂದರು.
ಅಪ್ಪಟ ದೇಶಪ್ರೇಮಿಯಾಗಿದ್ದ ಅವರು ಅತ್ಯಂತ ಯಶಸ್ವಿಯಾಗಿ ಸಾಧಿಸಿದ್ದ ಐಸಿಎಸ್ ಧಿಕ್ಕರಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ‘ನೀವು ರಕ್ತವನ್ನು ಕೊಡಿ, ನಿಮಗೆ ಸ್ವಾತಂತ್ರ್ಯ ವನ್ನು ನೀಡುತ್ತೇನೆ’ ಎಂದು ಯುವಕರಿಗೆ ಕರೆ ನೀಡಿದ್ದರು. ತಮ್ಮದೇ ಆದ ಆಜಾದ್ ಫೌಜ್ ಸ್ಥಾಪಿಸಿ ಇಡೀ ದೇಶದಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ್ದರು. ಅವರ ವ್ಯಕ್ತಿತ್ವದಿಂದ ವಿದೇಶದಲ್ಲಿಯೂ ಕೂಡ ಭಾರತ ದೇಶದ ಸ್ವಾತಂತ್ರ್ಯದ ಬಗ್ಗೆ ಬಹಳ ಸದಭಿಪ್ರಾಯ ಮೂಡಲು ಸಾಧ್ಯವಾಯಿತು ಎಂದರು.
ಸುಭಾಷ್ ಚಂದ್ರ ಬೋಸ್ ಅವರು ನಮಗೆ ಪ್ರೇರಣೆ. ಅಂದು ದೇಶಕ್ಕೆ ಸ್ವಾತಂತ್ರ್ಯ ಕೊಡಲು ಅವರು ಪ್ರೇರಣೆಯಾಗಿದ್ದರೆ, ಇಂದು ದೇಶ ಕಟ್ಟಲು ಪ್ರೇರಣೆಯಾಗಿದ್ದಾರೆ. ಅವರ ಸ್ಪಷ್ಟ, ಸಿದ್ಧಾಂತ ಹಾಗೂ ಆದರ್ಶಗಳನ್ನು ಮುಂದಿಟ್ಟುಕೊಂಡು ಸ್ವಾಭಿಮಾನಿ, ಸ್ವಾವಲಂಬಿ ದೇಶವನ್ನಾಗಿ ಮಾಡಲು ಸಾಧ್ಯವಿದೆ ಎಂದು ನಂಬಿದ್ದೇವೆ. ಆ ದಾರಿಯಲ್ಲಿ ನಾವೆಲ್ಲರೂ ಸೇರಿ ನಡೆಯಬೇಕಿದೆ ಎಂದರು.
ಜಾಗೃತಿ ಮೂಡಿಸುವ ಕೆಲಸ: ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ರಾಜ್ಯದಲ್ಲಿ ಆಗುತ್ತಿದೆ. ಕಳೆದ ಬಾರಿ 75 ಎನ್.ಐ.ಸಿ ಪಡೆಗಳನ್ನು ಅವರ ಹೆಸರಿನಲ್ಲಿ ಹೆಚ್ಚು ಮಾಡಿದೆ. ಯುವಕರಿಗೆ ದೊಡ್ಡ ಪ್ರೇರಣೆ ನೀಡುವ ಕೆಲಸವಾಗುತ್ತಿದೆ ಎಂದರು.