ಮುಂಬಯಿ: ಮಹಾನಗರ ಪೈಪ್ ಗ್ಯಾಸ್ ಲೈನ್‌ಗಳನ್ನು ಬಳಸುವ ಎಲ್ಲ ರೆಸ್ಟೋರೆಂಟ್‌ಗಳಿಗೆ ಶೇ. 13.5ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ. ಅದರಲ್ಲಿ ಶೇ. 3ರಷ್ಟು ವ್ಯಾಟ್ ಕಡಿತಗೊಳಿಸುವಂತೆ ಪ್ರತಿಯೊಂದು ರೆಸ್ಟೋರೆಂಟ್‌ಗಳು ವ್ಯಾಟ್ ಇಲಾಖೆಯನ್ನು ಸಂಪರ್ಕಿಸುತ್ತಿದ್ದು, ಈ ಮಧ್ಯೆ ರೆಸ್ಟೋರೆಂಟ್‌ಗಳಿಗೆ ಶೇ. 3ರಷ್ಟು ವ್ಯಾಟ್‌ಕಡಿತಗೊಳಿಸಿ ಏಕರೂಪದ ವ್ಯಾಟ್ ದರ ಜಾರಿಗೆ ತರುವಂತೆ ಹೊಟೇಲಿಗರ ಪ್ರತಿಷ್ಠಿತ ಸಂಘಟನೆ ಆಹಾರ್ ಪದೇ ಪದೇ ಮಹಾನಗರ ಪೈಪ್ ಗ್ಯಾಸ್ ಕಂಪೆನಿ ಹಾಗೂ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಮಾಡಿತ್ತು.
ಪ್ರಸ್ತುತ ಆಹಾರ್‌ನ ನಿರಂತರ ಮನವಿಯಿಂದಾಗಿ ಮಹಾರಾಷ್ಟ್ರ ಸರಕಾರವು ಎಂಜಿಎಲ್ ಪೈಪ್‌ಲೈನ್ ಗ್ಯಾಸ್ ಬಿಲ್ಲಿಂಗ್‌ಗಳ ಮೇಲಿನ ವ್ಯಾಟ್ ಅನ್ನು ಶೇ. ಶೇ. 3ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದು, 2022ರ ಎ. 1ರಿಂದ ಜಾರಿಗೆ ಬರುವಂತೆ ಬಿಲ್ಲಿಂಗ್‌ನಲ್ಲಿ ಶೇ. 10.5ರಷ್ಟು ವ್ಯಾಟ್ ಇರಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಉತ್ತಮ ಪರಿಹಾರವಾಗಿದೆ ಮತ್ತು ತಮ್ಮ ಮನವಿಯನ್ನು ಪರಿಗಣಿಸಿ ಪರಿಹಾರ ನೀಡಿದ ಮಹಾರಾಷ್ಟ್ರ ಸರಕಾರ ಮತ್ತು ಮಹಾನಗರ ಗ್ಯಾಸ್ ಲಿ.ಗೆ ಕೃತಜ್ಞತೆಗಳು. ಈ ಪರಿಹಾರದಿಂದ ಸಾಮಾನ್ಯ ರೆಸ್ಟೋರೆಂಟ್‌ಗಳಿಗೆ ಪ್ರತೀ ತಿಂಗಳಿಗೆ 15ರಿಂದ 20 ಸಾವಿರ ರೂ. ಗಳಷ್ಟು ಉಳಿತಾಯವಾದಂತಾಗಿದೆ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ್ ಡಿ. ಶೆಟ್ಟಿ ಹೇಳಿದ್ದಾರೆ.
ಸುಪ್ರೀಂನಿಂದ ಮಧ್ಯಾಂತರ ಪರಿಹಾರ :
ಬಾಂಬೆ ಹೈಕೋರ್ಟ್ ವಜಾಗೊಳಿಸಿದ ಅರ್ಜಿಯನ್ನು ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಆಹಾರ್ ಮತ್ತು ವೆಸ್ಟರ್ನ್ ಇಂಡಿಯಾದ ಹೊಟೇಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ವಿಶೇಷ ರಜೆ ಅರ್ಜಿಗೆ ಪ್ರಮುಖ ಪರಿಹಾರದಲ್ಲಿ 2021-2022ಕ್ಕೆ ಎಫ್‌ಎಲ್ ಆ್ಯಂಡ್ 3 ಪರವಾನಿಗೆ ನವೀಕರಣ ಶುಲ್ಕವನ್ನು ಸೂಚಿಸುವ ಮಹಾರಾಷ್ಟ್ರ ಸರಕಾರದ ಜ. 28, 2020ರ ಅಧಿಸೂಚನೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಾಂತರ ಪರಿಹಾರ ನೀಡಿರುವುದಲ್ಲದೆ, ಅರ್ಜಿದಾರರ ಮೇಲೆ ವಿಧಿಸಲಾದ ವೆಚ್ಚಕ್ಕೆ ತಡೆಯಾಜ್ಞೆ ನೀಡಿದೆ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಆತಿಥ್ಯ ಸಹಿತ ರೆಸ್ಟೋರೆಂಟ್ ವಿಭಾಗವು ನಷ್ಟಕ್ಕೊಳಗಾಯಿತು. ಆಗಾಗ್ಗೆ ಲಾಕ್‌ಡೌನ್‌ಗಳು, ಮಿನಿ ಲಾಕ್‌ಡೌನ್‌ಗಳು, ನಿರ್ಬಂಧಿತ ಸಮಯಗಳು ಮತ್ತು ಗ್ರಾಹಕರಿಗೆ ಸೇವೆ ಸಲ್ಲಿಸುವ ನಿರ್ಬಂಧಿತ ಸಾಮರ್ಥ್ಯ ಮತ್ತು ಸರಕಾರದಿಂದ ಯಾವುದೇ ಪರಿಹಾರವಿಲ್ಲದ ಕಾರಣ ಈ ಅವಧಿಯಲ್ಲಿ ಉದ್ಯಮವು ಅಪಾರ ನಷ್ಟ ಅನುಭವಿಸಿತು. ಈ ಕಾರಣದಿಂದಾಗಿ ಅನೇಕ ರೆಸ್ಟೋರೆಂಟ್ ವ್ಯವಹಾರಗಳು ಶಾಶ್ವತವಾಗಿ ಮುಚ್ಚಬೇಕಾಯಿತು. ಇದು ಕೆಲವು ಹೊಟೇಲಿಗರ ಆತ್ಮಹತ್ಯೆಗೆ ಕಾರಣವಾಯಿತು.
ಸರಕಾರದ ಬೆಂಬಲದ ನಿರೀಕ್ಷೆ :
ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ಬಳಿಕ ನಾವು ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಯಿತು. ಇದೀಗ ಸುಪ್ರೀಂ ಕೋರ್ಟ್ ನಮ್ಮ ಮನವಿಗಳನ್ನು ಪರಿಗಣಿಸಿರುವುದರಿಂದ ಸಂತೋಷವಾಗಿದೆ. ನಮ್ಮ ವ್ಯವಹಾರದಲ್ಲಿ ಬಹಳಷ್ಟು ನಷ್ಟ ಉಂಟಾಗಿದ್ದು, ಸರಕಾರದ ಬೆಂಬಲವನ್ನು ಎದುರು ನೋಡುತ್ತಿದ್ದೇವೆ. ಇದರಿಂದ ಮುಚ್ಚಿರುವ ವ್ಯವಹಾರಗಳನ್ನು ಮರಳಿ ತೆರೆಯುವಲ್ಲಿ ಸಹಕಾರಿಯಾಗುವುದಲ್ಲದೆ ಹೊಸ ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ
–ಶಿವಾನಂದ್ ಶೆಟ್ಟಿ, ಆಹಾರ್ ಅಧ್ಯಕ್ಷ