Advertisement

ರೈಲ್ವೆ ಹಳೇ ಬೋಗಿಗಳಿಗೆ ರೆಸ್ಟೋರೆಂಟ್‌ ರೂಪ

10:28 AM Jul 25, 2023 | Team Udayavani |

ಬೆಂಗಳೂರು: ಗುಜುರಿಗೆ ಹಾಕುವ ನಿರುಪಯುಕ್ತ ರೈಲು ಬೋಗಿಗಳನ್ನು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ನವೀಕರಿಸಿ ಹವಾನಿಯಂತ್ರಿತ ಆಧುನಿಕ ರೈಲ್ವೆ ಬೋಗಿ ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸುವ ಮೂಲಕ ನಿರಂತರವಾದ ಆದಾಯ ಗಳಿಸಲು ಮುಂದಾಗಿದೆ.

Advertisement

ಸಾಮಾನ್ಯವಾಗಿ 15 ವರ್ಷಗಳಿಗಿಂತ ಹಳೆಯದಾದ ಬೋಗಿಗಳನ್ನು ಇ- ಹರಾಜಿನ ಮೂಲಕ ಗುಜುರಿಗೆ ಹಾಕಲಾಗುತ್ತಿದೆ. ಇದರಿಂದ ಗರಿಷ್ಠವೆಂದರೂ 5ರಿಂದ 6 ಲಕ್ಷ ರೂ. ಒನ್‌ ಟೈಮ್‌ ಪೇಮೆಂಟ್‌ ಸಿಗುತ್ತದೆ. ಆದರೆ, ಗುಜುರಿಗೆ ಹಾಕುವ ಬೋಗಿಯಿಂದ ಆದಾಯ ಗಳಿಸಲು ದೇಶದ ಹಲವು ನಗರಗಳಲ್ಲಿ ಆರಂಭಿಸಿರುವ ರೈಲ್‌ ಕೋಚ್‌ ರೆಸ್ಟೋರೆಂಟನ್ನು ನೈಋತ್ಯ ರೈಲ್ವೆ ವಿಭಾಗದಲ್ಲೂ ತೆರೆಯಲು ಸಿದ್ಧತೆ ನಡೆಸುತ್ತಿದ್ದು, ಅತೀ ಹೆಚ್ಚು ಅಂತರ ಜಿಲ್ಲೆ ಹಾಗೂ ಅಂತಾರಾಜ್ಯ ಪ್ರಯಾಣಿಕರು ಸಂಚರಿಸುವ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ(ಎಸ್‌ಎಂವಿಬಿ) ಬೋಗಿ ರೆಸ್ಟೋರೆಂಟ್‌ ತೆರೆಯಲು ಮುಂದಾಗಿದೆ.

ಗುಜುರಿ ಬೋಗಿ- ಹೈಟೆಕ್‌ ಟಚ್‌!: ಪ್ರಸ್ತುತ ರೈಲು ಬೋಗಿಯ ಹೊರಗಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಒಳಾಂಗಣ ವಿನ್ಯಾಸ ಸಂಪೂರ್ಣವಾಗಿ ಬದಲಾಗಲಿದೆ. ಬೋಗಿಯೊಳಗಿನ ಬೆಡ್‌ ತೆಗೆದು ಹೋಟೆಲ್‌ ಶೈಲಿಯ ಆಸನ, ಹವಾನಿಯಂತ್ರಕ ವ್ಯವಸ್ಥೆ, ಒಳಆವರಣಕ್ಕೆ ಹೊಸ ರೂಪ ನೀಡಲಾಗಿದೆ. 2 ನಿಲ್ದಾಣ ಮುಂಭಾಗ ತಲಾ 1 ಬೋಗಿಯ ರೆಸ್ಟೋರೆಂಟ್‌ ಆರಂಭವಾಗಲಿದೆ.

ನಿರಂತರ ಆದಾಯ!: ಸಾಮಾನ್ಯವಾಗಿ ನಿರುಪಯುಕ್ತ ಖಾಲಿ ಬೋಗಿ ಇ-ಹರಾಜಿನಲ್ಲಿ ಸರಾಸರಿ 5 ರಿಂದ 6 ಲಕ್ಷ ರೂ.ಗೆ ಮಾರಾಟವಾಗುತ್ತದೆ. ಹೊಸ ರೂಪ ನೀಡಿದ ಎರಡು ಬೋಗಿ ರೆಸ್ಟೋರೆಂಟ್‌ಗಳನ್ನು 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ವಾರ್ಷಿಕ 1.50 ಕೋಟಿ ರೂ. ಹಾಗೂ 5 ವರ್ಷಕ್ಕೆ ಒಟ್ಟು 7.54 ಕೋಟಿ ರೂ. ಆದಾಯ ರೈಲ್ವೆ ಇಲಾಖೆಗೆ ಲಭಿಸಲಿದೆ.

ಕಾಮಗಾರಿ ಪ್ರಗತಿ: ರೈಲ್ವೆ ಬೋಗಿ ರೆಸ್ಟೋರೆಂಟ್‌ ತೆರೆಯಲು ನೈಋತ್ಯ ರೈಲ್ವೆ ಜೂನ್‌ನಲ್ಲಿ ಇ-ಟೆಂಡರ್‌ ಕರೆದಿದ್ದು, ಇದೀಗ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕೆಎಸ್‌ಆರ್‌ ಹಾಗೂ ಎಸ್‌ ಎಂವಿಬಿನ “ಬೋಗಿ ರೆಸ್ಟೋರೆಂಟ್‌’ಗೆ 2 ಪ್ರತ್ಯೇಕ ಖಾಸಗಿ ಕಂಪನಿಗಳು ಗುತ್ತಿಗೆ ಪಡೆದುಕೊಂಡಿದೆ. ರೈಲ್ವೆ ನಿಲ್ದಾಣ ಹೊರಾಂಗಣದಲ್ಲಿ ಇಲಾಖೆ ಎಂಜಿನಿಯರ್‌ ನೇತೃತ್ವದಲ್ಲಿ ಟ್ಯಾಂಕ್‌ ಆಳವಡಿಕೆ ಕಾರ್ಯ ಮುಂದಿನ 60 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತದನಂತರ ಲೀಸ್‌ಗೆ ಪಡೆದ ಕಂಪನಿ ಬೋಗಿಯೊಳಗೆ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಹಾಗೂ ಮಾರ್ಪಾಡು ಮಾಡಲಿದೆ.

Advertisement

ರೈಲ್ವೆ ಬೋಗಿ ರೆಸ್ಟೋರೆಂಟ್‌ ಗ್ರಾಹಕರಿಗೆ ಸೇವೆ ಸಲ್ಲಿಸಲು 24/7 ತೆರೆದಿರುತ್ತದೆ. ಇದು ಉತ್ತರ ಹಾಗೂ ದಕ್ಷಿಣ ಭಾರತದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕ ಅಡುಗೆಮನೆಗಳಿಂದ ಒದಗಿಸುತ್ತದೆ. ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟ್‌ ಮತ್ತಿತರ ರೈಲ್ವೆ ಇಲಾಖೆ ನಿಷೇಧಿಸುವ ವಸ್ತುಗಳನ್ನು ಹೊರತುಪಡಿಸಿ ಗುತ್ತಿಗೆದಾರರು ಎಲ್ಲಾ ರೀತಿಯ ಆಹಾರಗಳನ್ನು ಪೂರೈಸಲಿದ್ದಾರೆ.

ಬೋಗಿ ರೆಸ್ಟೋರೆಂಟ್‌ ಆದಾಯ ಮತ್ತು ಉದ್ಯೋಗವನ್ನು ಹೆಚ್ಚಿಸುವ ಯೋಜನೆಯ ಒಂದು ಭಾಗ. ಇದು ಅಕ್ಟೋಬರ್‌ ಅಂತ್ಯಕ್ಕೆ ಕಾರ್ಯಾಚರಿಸಲಿದೆ. ಪ್ರಸ್ತುತ ಟ್ರ್ಯಾಕ್‌ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಹೊಸ ರೀತಿಯಾದ ಅನುಭವ ಪ್ರಯಾಣಿಕರಿಗೆ ನೀಡಲಿದೆ. ಇದು ಯಶಸ್ವಿಯಾದರೆ ಬೇರೆ ರೈಲು ನಿಲ್ದಾಣದಲ್ಲಿ ಈ ಪ್ರಯೋಗ ಮಾಡಲಾಗುತ್ತದೆ. ಕುಸುಮಾ ಹರಿಪ್ರಸಾದ್‌, ಬೆಂಗಳೂರು ವಿಭಾಗೀಯ ವ್ಯವಸ್ಥಾಪಕಿ ನೈಋತ್ಯ ರೈಲ್ವೆ

Advertisement

Udayavani is now on Telegram. Click here to join our channel and stay updated with the latest news.

Next