Advertisement

ಇರಾನಿ ಕಪ್‌ ಕ್ರಿಕೆಟ್‌: ರೆಸ್ಟ್‌ ಆಫ್‌ ಇಂಡಿಯಾ ಚಾಂಪಿಯನ್‌

05:09 PM Oct 05, 2022 | Team Udayavani |

ರಾಜ್‌ಕೋಟ್‌: 2019-20ರ ಸಾಲಿನ ರಣಜಿ ಚಾಂಪಿಯನ್‌ ಸೌರಾಷ್ಟ್ರವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಶೇಷ ಭಾರತ ತಂಡ (ರೆಸ್ಟ್‌ ಆಫ್‌ ಇಂಡಿಯಾ) 29ನೇ ಸಲ “ಇರಾನಿ ಕಪ್‌’ ಕಿರೀಟ ಏರಿಸಿಕೊಂಡಿದೆ.

Advertisement

ಗೆಲುವಿಗೆ 105 ರನ್‌ ಮಾಡಬೇಕಿದ್ದ ಹನುಮ ವಿಹಾರಿ ನಾಯಕತ್ವದ ಶೇಷ ಭಾರತ 2 ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿತು. ಪಂದ್ಯ 4ನೇ ದಿನಕ್ಕೇ ಮುಗಿದು ಹೋಯಿತು. ಪ್ರಿಯಾಂಕ್‌ ಪಾಂಚಾಲ್‌ (2) ಮತ್ತು ಯಶ್‌ ಧುಲ್‌ (8) ವಿಕೆಟ್‌ ಬೇಗ ಉರುಳಿತಾದರೂ ಗುರಿ ಸಣ್ಣದಿದ್ದುದರಿಂದ ಶೇಷ ಭಾರತ ಯಾವುದೇ ಆತಂಕಕ್ಕೆ ಒಳಗಾಗಲಿಲ್ಲ. ಆರಂಭಕಾರ ಅಭಿಮನ್ಯು ಈಶ್ವರನ್‌ ಅಜೇಯ 63 ರನ್‌ (78 ಎಸೆತ, 9 ಬೌಂಡರಿ) ಮತ್ತು ಶ್ರೀಕರ್‌ ಭರತ್‌ ಅಜೇಯ 27 ರನ್‌ ಮಾಡಿ ತಂಡದ ಗೆಲುವು ಸಾರಿದರು.

276 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದಾಗಲೇ ಸೋಲನ್ನು ಖಾತ್ರಿಗೊಳಿಸಿದ್ದ ಸೌರಾಷ್ಟ್ರ ತನ್ನ ದ್ವಿತೀಯ ಸರದಿಯನ್ನು 380ರ ತನಕ ಬೆಳೆಸಿತು.

78 ರನ್‌ ಮಾಡಿ ಆಡುತ್ತಿದ್ದ ನಾಯಕ ಜೈದೇವ್‌ ಉನಾದ್ಕತ್‌ 89 ರನ್‌ ಮಾಡಿ ಕುಲದೀಪ್‌ ಸೇನ್‌ಗೆ ವಿಕೆಟ್‌ ಒಪ್ಪಿಸಿದರು (133 ಎಸೆತ, 10 ಬೌಂಡರಿ, 2 ಸಿಕ್ಸರ್‌). ಪಾರ್ಥ್ ಭಟ್‌ (7) ವಿಕೆಟ್‌ ಕೂಡ ಸೇನ್‌ ಪಾಲಾಯಿತು. ಕುಲದೀಪ್‌ ಸಾಧನೆ 94ಕ್ಕೆ 5 ವಿಕೆಟ್‌. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 3 ವಿಕೆಟ್‌ ಉರುಳಿಸಿದ್ದರು. ಈಗ ಸೇನ್‌ ಟಿ20 ವಿಶ್ವಕಪ್‌ಗಾಗಿ ಭಾರತದ ನೆಟ್‌ ಬೌಲರ್‌ ಆಗಿ ಪರ್ತ್‌ಗೆ ಪಯಣಿಸಲಿದ್ದಾರೆ.

ಮುಕೇಶ್‌ ಕುಮಾರ್‌ ಪಂದ್ಯಶ್ರೇಷ್ಠ
ಬಂಗಾಲದ ಪೇಸ್‌ ಬೌಲರ್‌ ಮುಕೇಶ್‌ ಕುಮಾರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪಂದ್ಯದ ಮೊದಲ ದಿನವೇ 4 ವಿಕೆಟ್‌ಗಳನ್ನು ಬಹಳ ಅಗ್ಗಕ್ಕೆ ಉಡಾಯಿಸಿ ಸೌರಾಷ್ಟ್ರದ ಕುಸಿತಕ್ಕೆ ಚಾಲನೆ ನೀಡಿದ ಕಾರಣಕ್ಕಾಗಿ ಮುಕೇಶ್‌ಗೆ ಈ ಗೌರವ ಒಲಿಯಿತು. ಭಾರತದ ಏಕದಿನ ತಂಡಕ್ಕೆ ಸೇರ್ಪಡೆಗೊಂಡ ಅವರ ಖುಷಿ ಇಮ್ಮಡಿಗೊಂಡಿತು.

Advertisement

ಪಂದ್ಯಶ್ರೇಷ್ಠ ರೇಸ್‌ನಲ್ಲಿ ಸರ್ಫರಾಜ್ ಖಾನ್ ಕೂಡ ಇದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಅಮೋಘ ಬ್ಯಾಟಿಂಗ್‌ ನಡೆಸಿ 138 ರನ್‌ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-98 ಮತ್ತು 380 (ಉನಾದ್ಕತ್‌ 89, ಮಂಕಡ್‌ 72, ಜಾಕ್ಸನ್‌ 71, ಕುಲದೀಪ್‌ 98ಕ್ಕೆ 5). ಶೇಷ ಭಾರತ-374 ಮತ್ತು 2 ವಿಕೆಟಿಗೆ 105 (ಅಭಿಮನ್ಯು ಈಶ್ವರನ್‌ ಔಟಾಗದೆ 63, ಶ್ರೀಕರ್‌ ಭರತ್‌ ಔಟಾಗದೆ 27, ಉನಾದ್ಕತ್‌ 37ಕ್ಕೆ 2).

ಪಂದ್ಯಶ್ರೇಷ್ಠ: ಮುಕೇಶ್‌ ಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next